ಬೆಂಗಳೂರು(ಸೆ. 23): ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಷಯದಲ್ಲಿ ರಾಜ್ಯದ ನಿಲುವು ತಿಳಿಸಲು ಇಂದು ಶುಕ್ರವಾರ ಒಂದು ದಿನದ ವಿಶೇಷ ಅಧಿವೇಶನ ಕರೆಯಲಾಗಿದೆ. ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿವೇಶನ ಕರೆಯಲು ರಾಜ್ಯಪಾಲ ವಜುಬಾಯಿ ವಾಲಾರಿಂದ ಅನುಮತಿ ಪಡೆದರು. ತಮಿಳುನಾಡಿಗೆ ಕಾವೇರಿ ನೀರು ಬಿಡದಿರುವ ಕುರಿತು ಅಧಿವೇಶನದಲ್ಲಿ ಒಗ್ಗಟ್ಟಿನಿಂದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಆರಂಭವಾಗಲಿದೆ. ಆದರೆ, ಅದಕ್ಕೂ ಮೊದಲು 10 ಗಂಟೆಗೆ ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರು ಸದನ ಸಲಹಾ ಸಮಿತಿ ಸಭೆ ಕರೆದಿದ್ದಾರೆ.. ಈ ಸಭೆಯಲ್ಲಿ ಕಾವೇರಿ ನೀರು ಬಿಡುವ ವಿಚಾರದಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳುವ ಕುರಿತು ಸದನ ನಾಯಕರ ವಿಶ್ವಾಸಕ್ಕೆ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ..

ಏನಿದೆ ಸಾಧ್ಯತೆ..?
ಸದನದಲ್ಲಿ ಸರ್ವಾನುಮತದ ನಿರ್ಣಯ ಅಂಗೀಕಾರಕ್ಕೆ ಮುನ್ನ ಕಾವೇರಿ ವಿವಾದದ ಸಂಬಂಧ ಸುದೀರ್ಘ ಚರ್ಚೆಗೆ ಬಿಜೆಪಿ ಅವಕಾಶ ಕೋರಲಿದೆ. ಸರ್ವಪಕ್ಷ ಸಭೆಗೆ ಗೈರಾಗಿ ವ್ಯಾಪಕ ಟೀಕೆಗೆ ಗುರಿಯಾಗುತ್ತಿರುವುದರಿಂದ ಡ್ಯಾಮೇಜ್ ಕಂಟ್ರೋಲ್‌'ಗೂ ಕೆಲವೊಂದು ಅಂಶಗಳನ್ನ ತಯಾರಿಸಿಕೊಂಡಿದೆ.. ಆದ್ರೆ, ಅಂತಿಮವಾಗಿ ನಿರ್ಣಯಕ್ಕೆ ಒಪ್ಪಿಗೆ ಕೊಡ್ತಾರೆ.. ಇನ್ನೊಂದೆಡೆ, ವಿಶೇಷ ಅಧಿವೇಶನಕ್ಕೆ ಕಾಂಗ್ರೆಸ್ ತನ್ನೆಲ್ಲಾ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ವಿಪ್ ಜಾರಿ ಮಾಡಿದೆ. ಜೆಡಿಎಸ್ ಕೂಡಾ ಬೆಳಗ್ಗೆ 10 ಗಂಟೆಗೆ ಶಾಸಕಾಂಗ ಸಭೆ ಕರೆದಿದೆ.. ಒಟ್ಟಿನಲ್ಲಿ, ಕಾವೇರಿಗಾಗಿ ರಾಜ್ಯದ ಜನಪ್ರತಿನಿಧಿಗಳೆಲ್ಲಾ ಒಗ್ಗಟ್ಟು ತೋರಿಸಲು ಅಣಿಯಾಗ್ತಿದ್ದಾರೆ..

- ಶಂಕರ್ ಪಾಗೋಜಿ, ಪೊಲಿಟಿಕಲ್ ಬ್ಯೂರೋ, ಸುವರ್ಣ ನ್ಯೂಸ್