ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಿಶೇಷ ರೈಲು ಸಂಚಾರಕ್ಕೆ ಸಿದ್ಧತೆ ನಡೆಸಿದ್ದು, ರೈಲು ಸಂಚಾರದ ವೇಳಾಪಟ್ಟಿ ರೂಪಿಸಿದೆ.

ಬೆಂಗಳೂರು(ಡಿ.12):ಶ್ರವಣಬೆಳಗೊಳದಲ್ಲಿ ಫೆಬ್ರವರಿ 7ರಿಂದ ಆರಂಭವಾಗುವ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಫೆ.7ರಿಂದ 26ರವರೆಗೆ ಬೆಂಗಳೂರು ಮತ್ತು ಹಾಸನದಿಂದ ಶ್ರವಣಬೆಳಗೊಳಕ್ಕೆ 12 ವಿಶೇಷ ರೈಲುಗಳು ಸಂಚರಿಸಲಿವೆ.

ಮಹಾಮಸ್ತಕಾಭಿಷೇಕ ಮಹೋತ್ಸವಕ್ಕೆ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಿಂದ ಭಕ್ತಾದಿಗಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಿಶೇಷ ರೈಲು ಸಂಚಾರಕ್ಕೆ ಸಿದ್ಧತೆ ನಡೆಸಿದ್ದು, ರೈಲು ಸಂಚಾರದ ವೇಳಾಪಟ್ಟಿ ರೂಪಿಸಿದೆ. ಯಶವಂತಪುರದಿಂದ ಬೆಳಗ್ಗೆ 5.15, 6.20, ಮಧ್ಯಾಹ್ನ 1 ಮತ್ತು 3.45ಕ್ಕೆ ಶ್ರವಣಬೆಳಗೊಳಕ್ಕೆ ಡೆಮು ರೈಲುಗಳು (8 ಬೋಗಿ) ಸಂಚರಿಸಲಿದೆ. ಶ್ರವಣ ಬೆಳಗೊಳದಿಂದ ಬೆಳಗ್ಗೆ 10.40, ಮಧ್ಯಾಹ್ನ 12, ರಾತ್ರಿ 7.20 ಮತ್ತು 9 ಗಂಟೆಗೆ ಯಶವಂತಪುರಕ್ಕೆ ರೈಲು ಸಂಚರಿಸಲಿದೆ.

ಶ್ರವಣಬೆಳಗೊಳ-ಯಶವಂತಪುರ ನಡುವೆ 2.45 ಗಂಟೆಗಳಲ್ಲಿ ರೈಲು ಸಂಚರಿಸಲಿದೆ. ಯಶವಂತಪುರಿಂದ ಹೊರಡುವ ಈ ವಿಶೇಷ ರೈಲುಗಳು ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಯಡಿಯೂರು ಮತ್ತು ಬಿ.ಜಿ.ನಗರ ರೈಲು ನಿಲ್ದಾಣಗಳಲ್ಲಿ ನಿಂತು ಸಾಗಲಿವೆ. ಅಂತೆಯೆ ಶ್ರವಣ ಬೆಳಗೊಳದಿಂದ ಬೆಳಗ್ಗೆ 8.10, 9.15, ಸಂಜೆ 4.45, 6.25ಕ್ಕೆ ಹಾಸನ ನಿಲ್ದಾಣಕ್ಕೆ ರೈಲು ಸಂಚರಿಸಲಿವೆ. ಹಾಸನದಿಂದ ಬೆಳಗ್ಗೆ 9.40, 11, ಸಂಜೆ 6.20, 8ಕ್ಕೆ ಶ್ರವಣಬೆಳಗೊಳದತ್ತ ರೈಲು ಹೊರಡಲಿವೆ. ಒಂದು ತಾಸಿನ ಈ ಪ್ರಯಾಣದಲ್ಲಿ ರೈಲು ಚನ್ನರಾಯಪಟ್ಟಣದಲ್ಲಿ ನಿಂತು ಮುಂದೆ ಸಾಗಲಿದೆ.