635 ಕೋಟಿ ಆಸ್ತಿ: ಎಸ್‌ಪಿ ನಂ.1 ಶ್ರೀಮಂತ ಪ್ರಾದೇಶಿಕ ಪಕ್ಷ

SP Is Richest Local Party
Highlights

ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ, ಅತಿದೊಡ್ಡ ಪ್ರಾದೇಶಿಕ ಪಕ್ಷ ಪೈಕಿ ಒಂದಾದ ಸಮಾಜವಾದಿ ಪಕ್ಷ, ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ

ನವದೆಹಲಿ: ದೇಶದ ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದ, ಅತಿದೊಡ್ಡ ಪ್ರಾದೇಶಿಕ ಪಕ್ಷ ಪೈಕಿ ಒಂದಾದ ಸಮಾಜವಾದಿ ಪಕ್ಷ, ದೇಶದ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. 2015-16 ಹಣಕಾಸು ವರ್ಷದಲ್ಲಿ ತಮ್ಮ ಆಸ್ತಿ ಘೋಷಿಸಿಕೊಂಡ ಸುಮಾರು 20 ಪ್ರಾದೇಶಿಕ ಪಕ್ಷಗಳ ಪೈಕಿ, ಸಮಾಜವಾದಿ ಪಕ್ಷ 634.96 ಕೋಟಿ ರು. ಆಸ್ತಿಯೊಂದಿಗೆ ಮೊದಲನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ 257.18 ಕೋಟಿ ರು. ಆಸ್ತಿಯೊಂದಿಗೆ ಡಿಎಂಕೆ ಮತ್ತು ಮೂರನೇ ಸ್ಥಾನದಲ್ಲಿ 224.84 ಕೋಟಿ ರು. ಎಐಎಡಿಎಂಕೆ ಇದೆ. ಎಚ್‌.ಡಿ.ದೇವೇಗೌಡ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜಾತ್ಯತೀಯ ಜನತಾ ದಳ 1.6 ಕೋಟಿ ರು. ಘೋಷಿತ ಆಸ್ತಿಯೊಂದಿಗೆ 17ನೇ ಸ್ಥಾನದಲ್ಲಿದೆ. ಪ್ರಜಾಸತ್ತಾತ್ಮಕ ಸುಧಾರಣೆಗಳ ಸಂಸ್ಥೆ (ಎಡಿಆರ್‌) ಸಿದ್ಧಪಡಿಸಿರುವ ವರದಿಯಲ್ಲಿ ಈ ಅಂಶಗಳು ಬಹಿರಂಗವಾಗಿವೆ.

2011-12ರಲ್ಲಿ 212 ಕೋಟಿ ರು ಆಸ್ತಿ ಹೊಂದಿದ್ದ ಎಸ್‌ಪಿ ಆಸ್ತಿ 2015-16ರ ವೇಳೆ ಶೇ.198ರಷ್ಟುಏರಿಕೆ ಕಂಡಿದೆ. 88 ಕೋಟಿ ರು.ನಷ್ಟಿದ್ದ ಎಐಎಡಿಎಂಕೆ ಆಸ್ತಿ ಇದೇ ವೇಳೆ ಶೇ.155ರಷ್ಟುಏರಿಕೆ ಕಂಡಿದೆ. 2011-12ರ ಅವಧಿಗೆ ಪ್ರಾದೇಶಿಕ ಪಕ್ಷಗಳ ಒಟ್ಟು ಆಸ್ತಿ 331.54 ಕೋಟಿ ರು.ಯಷ್ಟಿದ್ದುದು, 2015-16ರ ವೇಳೆಗೆ 1054.80 ಕೋಟಿ ರು.ಯಷ್ಟಾಗಿದೆ. ಪಟ್ಟಿಗೆ ಹೊಸದಾಗಿ ವೈಎಸ್‌ಆರ್‌ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷಗಳು ಸೇರ್ಪಡೆಯಾಗಿವೆ.

ತೆಲಂಗಾಣ ರಾಷ್ಟ್ರ ಸಮಿತಿ ಮತ್ತು ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸಾಲ ಹೊಂದಿರುವ ಎರಡು ಪ್ರಾದೇಶಿಕ ಪಕ್ಷಗಳು. 2015-16ರ ಅವಧಿಯಲ್ಲಿ ಟಿಆರ್‌ಎಸ್‌ 15.97 ರು. ಮತ್ತು ಟಿಡಿಪಿ 8.18 ಕೋಟಿ ರು. ಸಾಲ ಅಥವಾ ಬಾಧ್ಯತೆ ಹೊಂದಿದೆ ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

 

loader