ಸುದ್ದಿ ವಾಹಿನಿಯೊಂದು ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿ ಹಾಗೂ ಎಸ್‌ಪಿ ಪಕ್ಷದ ನಾಯಕರು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಸುದ್ದಿ ವಾಹಿನಿಯೊಂದು ನಡೆಸುತ್ತಿದ್ದ ಚರ್ಚಾ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ಪಕ್ಷದ ವಕ್ತಾರರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ನೊಯ್ಡಾದ ಸೆಕ್ಟರ್ 16-Aನಲ್ಲಿ ವಾಹಿನಿಯೊಂದು ಚರ್ಚಾ ಕಾರ್ಯಕ್ರಮ ನಡೆಸುತ್ತಿದ್ದ ಸಂದರ್ಭದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನೋಡ ನೋಡುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ನಾಯಕ ಅನುರಾಗ್ ಭದೌರಿಯಾರವರು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾಯನ್ನು ತಳ್ಳಿದ್ದಾರೆ. ಇದೇ ವಿಚಾರ ತಾರಕಕ್ಕೇರಿ ಇಬ್ಬರೂ ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಭದೌರಿಯಾರನ್ನು ಬಂಧಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

SSP ಅಜಯ್ ಪಾಲ್ ಘಟನೆಯ ಕುರಿತಾಗಿ ಮಾತನಾಡುತ್ತಾ ನೊಯ್ಡಾದ ಸೆಕ್ಟರ್ 16-Aನಲ್ಲಿರುವ ಸುದ್ದಿ ವಾಹಿನಿ ನಡೆಸಿದ ನೆರಪ್ರಸಾರ ಕಾರ್ಯಕ್ರಮದಲ್ಲಿ ಇಬ್ಬರೂ ನಾಯಕರು ಜಗಳವಾಡಿಕೊಂಡಿದ್ದಾರೆ. ಗೌರವ್ ಭಾಟಿಯಾರವರು ನೀಡಿರುವ ದೂರಿನ ಅನ್ವಯ ಪೊಲೀಸರು ಭದೌರಿಯಾರನ್ನು ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅತ್ತ ಸಮಾಜವಾದಿ ಪಾರ್ಟಿ ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, ಕೆಟ್ಟ ವರ್ತನೆ ಹಾಗೂ ಅಶ್ಲೀಲ ಶಬ್ಧಗಳ ಬಳಕೆ ಸೇರಿದಂತೆ ಗೂಂಡಾಗಳಂತೆ ವರ್ತಿಸುವ ಬಿಜೆಪಿ ನಾಯಕ೦ ಗೌರವ್ ಭಾಟಿಯಾರವರೇ ನೀವು ಸುಳ್ಳು ಹೆಲುವುದನ್ನು ನಿಲ್ಲಿಸಿ. ಘಟನೆಯನ್ನು ಸಾಬೀತು ಮಾಡಬಲ್ಲ ಯಾವುದಾದರೂ ಸಾಕ್ಷಿ ಇದ್ದರೆ ಜನರೆದುರು ಇಡಿ. ವಾಹಿನಿಯೂ ಅಲ್ಲಿ ನಡೆದ ಘಟನೆಯ ವಿಡಿಯೋವನ್ನು ಬಹಿರಂಗಪಡಿಸಬೇಕು ಎಂದಿದೆ.
