ಮೊದಲು ಚಿಕಿತ್ಸೆ, ಅನಂತರ ಪಾವತಿ (ಟ್ರೀಟ್‌ಮೆಂಟ್‌ ಫಸ್ಟ್‌, ಪೇಮೆಂಟ್‌ ನೆಕ್ಸ್ಟ್‌) ಎನ್ನುವ ಘೋಷವಾಕ್ಯ ದೊಂದಿಗೆ ಹೊಸ ಆರೋಗ್ಯ ನೀತಿಯನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ಕಮಾರ್‌ ಹೇಳಿದ್ದಾರೆ.

ಬೆಂಗಳೂರು(ಮಾ.29): ಮೊದಲು ಚಿಕಿತ್ಸೆ, ಅನಂತರ ಪಾವತಿ (ಟ್ರೀಟ್‌ಮೆಂಟ್‌ ಫಸ್ಟ್‌, ಪೇಮೆಂಟ್‌ ನೆಕ್ಸ್ಟ್‌) ಎನ್ನುವ ಘೋಷವಾಕ್ಯ ದೊಂದಿಗೆ ಹೊಸ ಆರೋಗ್ಯ ನೀತಿಯನ್ನು ಸದ್ಯದಲ್ಲೇ ಜಾರಿಗೆ ತರಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ಕಮಾರ್‌ ಹೇಳಿದ್ದಾರೆ.

ರೋಗಿ ಮತ್ತು ಅಪಘಾತಕ್ಕೀಡಾದವರು ಆಸ್ಪತ್ರೆಗೆ ಬಂದರೆ ಅವರಲ್ಲಿ ಹಣವಿದೆಯೇ ಎಂದು ಆಸ್ಪತ್ರೆಗಳು ನೋಡಬಾರದು. ಮೊದಲು ಚಿಕಿತ್ಸೆ ನೀಡಬೇಕು. ಇದು ಬರೀ ಸರ್ಕಾರಿ ಮಾತ್ರವಲ್ಲ, ಖಾಸಗಿ ಆಸ್ಪತ್ರೆಗಳಲ್ಲೂ ಕಡ್ಡಾಯವಾಗುವಂತೆ ಜಾರಿಗೊಳಿಸಲಾಗುವುದು ಎಂದು ಸಚಿವರು ಸದನದಕ್ಕೆ ತಿಳಿಸಿದರು.

ಇನ್ನು ಮುಂದೆ ರೋಗಿಗಳಿಗೆ ಆಸ್ಪತ್ರೆಗಳು ಮೊದಲು ಚಿಕಿತ್ಸೆ ನೀಡಿ ನಂತರ ಯಾವ ಸ್ಕೀಮ್'ನಲ್ಲಿ ರೋಗಿಯ ವೆಚ್ಚದ ಹಣ ಪಡೆಯಬೇಕೆಂದು ವಿಚಾರ ಮಾಡಬೇಕು. ಆದರೆ ಈಗಿನ ಪರಿಸ್ಥಿತಿ ವಿಚಿತ್ರವಾಗಿದೆ. ಬಡ ರೋಗಿ ಖಾಸಗಿ ಆಸ್ಪತ್ರೆಗಳಲ್ಲಿ ಸತ್ತರೆ ಅವರ ಮೃತದೇಹ ಪಡೆಯುವುದೇ ದೊಡ್ಡ ಕಷ್ಟವಾಗುವ ಪರಿಸ್ಥಿತಿ ಇದೆ. ಆದ್ದರಿಂದ ಬರುವ ಅಧಿವೇಶನದಲ್ಲೇ ಈ ಹೊಸ ಆರೋಗ್ಯ ನೀತಿ ಸಂಬಂಧಿ ವಿಧೇಯಕ ಮಂಡಿಸಲಾ ಗುವುದು. ಜತೆಗೆ, ಖಾಸಗಿ ಆಸ್ಪತ್ರೆಗಳ ಲಂಗು-ಲಗಾಮು ಇಲ್ಲದ ದರ ವಸೂಲಿಗೂ ಕಡಿವಾಣ ಹಾಕಲಾಗುವುದು. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ವಿನಂತಿಸಿದರು.

ಶಾಸಕರು ಆಸ್ಪತ್ರೆಗೆ ಹೋಗಲಿ: ರಾಜಕಾರಣಿಗಳು ಸೇರಿದಂತೆ ಎಲ್ಲರೂ ಖಾಸಗಿ ಆಸ್ಪತ್ರೆಗೆ ಹೋಗುತ್ತೇವೆ. ಹಾಗಾದರೆ ಸರ್ಕಾರಿ ಆಸ್ಪತ್ರೆಗೆ ಹೋಗುವವರು ಯಾರು?. ಇದನ್ನು ತಪ್ಪಿಸಬೇಕಾದರೆ ಶಾಸಕರು ಮೊದಲು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕು. ಆ ಮೂಲಕ ಇತರಿಗೆ ಮೇಲ್ಪಂಕ್ತಿ ಹಾಕಬೇಕು. ಅನೇಕ ಕೋಟ್ಯಧಿಪತಿ ರಾಜಕಾರಣಿಗಳು ಸರ್ಕಾರಿ ಆಸ್ಪತ್ರೆಗೆ ಹೋದರೆ ಗೌರವಕ್ಕೆ ಧಕ್ಕೆಯಾಗುತ್ತದೆ ಎನ್ನುವಂತಾಗಿದೆ. ಆದ್ದರಿಂದ ಮೊದಲು ಶಾಸಕರು ಸರ್ಕಾರಿ ಆಸ್ಪತ್ರೆಗೆ ಹೋದರೆ ಅನಂತರ ಸರ್ಕಾರಿ ನೌಕರರಿಗೆ ಹೋಗಿ ಎಂದು ಕಡ್ಡಾಯಗೊಳಿಸಬಹುದು. ಇಲ್ಲವಾದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯ ಇದ್ದರೂ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ನಂತರ ವೈದ್ಯಕೀಯ ಪರಿಹಾರಕ್ಕೆ ಅರ್ಜಿ ಸಲ್ಲಿಸುವವರು ಹೆಚ್ಚಾಗುತ್ತಾರೆ. ಅಂದರೆ ಸಮಸ್ಯೆ ಇರುವುದು ಸರ್ಕಾರದಲ್ಲಿ ಅಲ್ಲ. ಆರೋಗ್ಯ ಇಲಾಖೆಯಲ್ಲೂ ಅಲ್ಲ. ಇರುವುದು ಈ ಸಮಾಜದಲ್ಲಿ. ಆದ್ದರಿಂದ ಇದನ್ನು ನಾವೇ ಸರಿಪಡಿಸಬೇಕು ಎಂದು ರಮೇಶ್‌ಕುಮಾರ್‌ ಹೇಳಿದರು.

ವರದಿ: ಕನ್ನಡ ಪ್ರಭ