ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ನಿಗದಿ ಮಾಡುವ ಸನ್ನಿವೇಶ ಎದುರಾಗಿದೆ.

ಮೈಸೂರು(ಡಿ.24): ನಂಜನಗೂಡು ಕ್ಷೇತ್ರದ ಉಪ ಚುನಾವಣೆ ರಾಜ್ಯ ಸರ್ಕಾರಕ್ಕೆ ಸವಾಲು ಒಡ್ಡಿರುವ ಸಂಗತಿ. ಶ್ರೀನಿವಾಸಪ್ರಸಾದ್ ಅವರು ಜನವರಿ 2ರಂದು ಬಿಜೆಪಿ ಸೇರಲು ತಯಾರಿ ನಡೆಸಿದ್ದರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಸಚಿವ ಎಚ್.ಸಿ. ಮಹದೇವಪ್ಪ ಅವರ ನಿವಾಸಕ್ಕೆ ತೆರಳಿ ಚುನಾವಣೆ ಬಗ್ಗೆ ಗಹನ ಚರ್ಚೆ ನಡೆಸಿದರು. ಆಡಳಿತ-ಪ್ರತಿಪಕ್ಷಗಳ ಮಧ್ಯೆ ಮತ್ತೆ ಜಿದ್ದಾಜಿದ್ದಿಗೆ ನಂಜನಗೂಡು ಉಪಚುನಾವಣೆ ಆಖಾಡ ಈಗಿನಿಂದಲೇ ಸಜ್ಜಾಗುತ್ತಿದೆ.

ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆಯಾಗಲು ಇನ್ನು ಕೆಲವೇ ದಿನಗಳು ಬಾಕಿ ಇವೆ. ಚುನಾವಣಾ ಆಯೋಗ ಯಾವಾಗ ಬೇಕಾದರೂ ಚುನಾವಣೆ ನಿಗದಿ ಮಾಡುವ ಸನ್ನಿವೇಶ ಎದುರಾಗಿದೆ. ಇನ್ನು ಈ ಕ್ಷೇತ್ರವನ್ನು ಉಳಿಸಿಕೊಳ್ಳಬೇಕೆಂದು ಆಡಳಿತ ಪಕ್ಷ ಕಾಂಗ್ರೆಸ್ ಚುನಾವಣೆ ಘೋಷಣೆಗೂ ಮುನ್ನವೇ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮತದಾರರನ್ನು ಓಲೈಸಲು ಪ್ರಯತ್ನ ಮಾಡುತ್ತಿದೆ.

ಇನ್ನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಲು ಉತ್ಸುಕರಾಗಿರುವ ಶ್ರೀನಿವಾಸಪ್ರಸಾದ್ ಮತ್ತೊಮ್ಮೆ ಚುನಾವಣಾ ಆಖಾಡಕ್ಕೆ ಧುಮುಕಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಬ್ಬರ ನಡುವಿನ ಜಿದ್ದಾಜಿದ್ದಿ ಉಪ ಚುನಾವಣೆಯ ಮಹತ್ವ ಹೆಚ್ಚಿಸಿದೆ. ಇದರ ನಡುವೆ ಸ್ವತ: ಸಿಎಂ ಸಿದ್ದರಾಮಯ್ಯನವರಿಗೆ ಈ ಚುನಾವಣೆ ಗೆಲ್ಲೋದು ಪ್ರತಿಷ್ಠೆಯೂ ಹೌದು. ಹಾಗಾಗಿಯೇ ಇಂದು ಸಚಿವ ಮಹದೇವಪ್ಪ ಮನೆಗೆ ತೆರಳಿ ಚುನಾವಣೆಯ ಬಗ್ಗೆ ಬಹಳ ಹೊತ್ತು ಮಾತುಕತೆ ನಡೆಸಿ ಹೊರಬಂದರು.

ರಾಜ್ಯದ ಜನರ ಕುತೂಹಲಕ್ಕೆ ಕಾರಣವಾಗುತ್ತಿರುವ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 2013ರ ಚುನಾವಣಾ ಹೋರಾಟ ಹೇಗಿತ್ತು, ಜಾತಿ ಲೆಕ್ಕಾಚಾರ ಹೇಗಿದೆ ಅನ್ನುವ ಡೀಟೆಲ್ಸ್ ಇಲ್ಲಿದೆ ನೋಡಿ...

ನಂಜನಗೂಡು ಕ್ಷೇತ್ರದ ಒಟ್ಟು ಮತದಾರರು-1,81,729

ಪುರುಷರು-92.944

ಮಹಿಳೆಯರು- 88.781

2013ರ ಚುನಾವಣೆಯಲ್ಲಿ ಚಲಾವಣೆಯಾದ ಮತಗಳು 1,41,009

ಕಾಂಗ್ರೆಸ್ನಲ್ಲಿದ್ದ ಶ್ರೀನಿವಾಸಪ್ರಸಾದ್ ಗೆಲುವು (50.784 ಮತಗಳು) ಶೇ 36.01 ಮತಗಳು

ಜೆಡಿಎಸ್'ನ ಕಳಲೆ ಕೇಶವಮೂರ್ತಿ (41,843) ಶೇ 29.67 ಮತಗಳು

ಬಿಜೆಪಿಯ ಡಾ. ಶಿವರಾಂ 7074 (ಶೇ 5.02 ಮತಗಳು)

ಕೆಜೆಪಿಯ ಎಸ್. ಮಹದೇವಯ್ಯ 28,312 (ಶೇ 20.08)

ಕ್ಷೇತ್ರದ ಜಾತಿವಾರು ಲೆಕ್ಕಾಚಾರ

ದಲಿತರು-50.100

ಲಿಂಗಾಯಿತರು-50,000

ನಾಯಕರು-22000

ಮುಸ್ಲಿಂ-6000

ಉಪ್ಪಾರ-18 ಸಾವಿರ

ಕುರುಬ-12ಸಾವಿರ

ಒಟ್ಟಾರೆ 2006ರಲ್ಲಿ ಸಿದ್ದರಾಮಯ್ಯನವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ ನಡೆದಿದ್ದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಂತೆಯೇ ನಂಜನಗೂಡು ಕ್ಷೇತ್ರ ಉಪ ಚುನಾವಣೆಯೂ ಸಾಗುತ್ತಿದೆ. ಆಗ ಸಿದ್ದರಾಮಯ್ಯ ಅವರನ್ನು ಹಣಿಯಲು ಆಡಳಿತ ಪಕ್ಷವಾಗಿದ್ದ ಜೆಡಿಎಸ್ ಕಸರತ್ತು ಮಾಡಿತ್ತು. ಈ ಬಾರಿ ತಮ್ಮದೇ ಪಕ್ಷದಲ್ಲಿದ್ದು ಹೊರನಡೆದ ಶ್ರೀನಿವಾಸಪ್ರಸಾದ್ರನ್ನು ಸೋಲಿಸಲು ಸಿದ್ದರಾಮಯ್ಯ ಸರ್ಕಾರ ಕಸರತ್ತು ಆರಂಭಿಸಿದೆ. ಒಟ್ಟಾರೆ ಕ್ಷೇತ್ರದ ಮತದಾರರು ಯಾರ ಪರ ತೀರ್ಪು ಕೊಡುತ್ತಾರೋ ಕಾದುನೋಡಬೇಕಾಗಿದೆ.

ವರದಿ: ಮಧು, ಮೈಸೂರು