ಕಾರ್ಮಿಕರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಅವರಿಗೆ ಹೆಚ್ಚಿನ ಚಿಕಿತ್ಸಾ ಸೌಲಭ್ಯ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲ ಇಎಸ್‌ಐ ಚಿಕಿತ್ಸಾಲಯ ಹಾಗೂ ಆಸ್ಪತ್ರೆಗಳಲ್ಲಿ ಅತ್ಯುತ್ತಮವಾದ ಪ್ರಯೋಗಾಲಯ, ಡಯಾಲಿಸಿಸ್ ಮತ್ತು ಆಯುಷ್ ಘಟಕಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.
ಬೆಂಗಳೂರು : ಕಾರ್ಮಿಕರಿಗೆ ಹೆಚ್ಚಿನ ಚಿಕಿತ್ಸಾ ಸೌಲಭ್ಯ ನೀಡುವ ಉದ್ದೇಶದಿಂದ ರಾಜ್ಯದ ಎಲ್ಲ ಇಎಸ್‌ಐ ಚಿಕಿತ್ಸಾಲಯ ಹಾಗೂ ಆಸ್ಪತ್ರೆಗಳಲ್ಲಿ ಅತ್ಯುತ್ತಮವಾದ ಪ್ರಯೋಗಾಲಯ, ಡಯಾಲಿಸಿಸ್ ಮತ್ತು ಆಯುಷ್ ಘಟಕಗಳನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ 112 ಇಎಸ್‌ಐ ಚಿಕಿತ್ಸಾಲಯ, ಏಳು ಆಸ್ಪತ್ರೆಗಳಿದ್ದು, ಈ ಸೇವೆಗಳನ್ನು ಹೊರಗುತ್ತಿಗೆ ಮೇಲೆ ನೀಡುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಕೇಂದ್ರ ಸದ್ಯದಲ್ಲಿ ಅನುಮತಿ ನೀಡಲಿದೆ. ಅನುಮತಿ ದೊರೆತ ನಂತರ ಈ ಘಟಕಗಳು ಕಾರ್ಯಾರಂಭ ಮಾಡಲಿವೆ ಎಂದರು. ಇಎಸ್‌ಐ ಆಸ್ಪತ್ರೆಗಳಲ್ಲಿ ಕಾರ್ಮಿಕರಿಗೆ ದೊರೆಯುತ್ತಿರುವ ಸೇವೆಯ ಬಗ್ಗೆ ಖುದ್ದಾಗಿ ತಿಳಿದುಕೊಳ್ಳಲು ಹಠಾತ್ ಭೇಟಿ ಮಾಡಿದ್ದೇನೆ.
ಇತ್ತೀಚೆಗೆ ಇಂದಿರಾ ನಗರದ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ್ಯ ಕಂಡು ಬಂದಿತು. ನರ್ಸ್‌ಗಳು ಸಹ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೂಡಲೇ ನಿರ್ದೇಶಕರನ್ನು ಕರೆದು ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಸದರಿ ಆಸ್ಪತ್ರೆಯಲ್ಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದ ಕಾರಣ ಬೇರೆ ಆಸ್ಪತ್ರೆಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿದೆ ಎಂದು ತಿಳಿಸಿದರು.
ಹಂತ ಹಂತವಾಗಿ ಕಾರ್ಮಿಕರಿಗೆ ವಸತಿ: ರಾಜ್ಯದ ಎಲ್ಲ ಕಾರ್ಮಿಕರಿಗೆ ಹಂತ ಹಂತವಾಗಿ ವಸತಿ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಮನೆ ನೀಡಲಾ ಗುವುದು. ಕಾರ್ಮಿಕರ ವಸತಿಗಾಗಿ ನೀಡುತ್ತಿದ್ದ ಅನುದಾನ ವನ್ನು 2 ಲಕ್ಷ ರು.ಗಳಿಂದ ಐದು ಲಕ್ಷ ರು.ಗಳಿಗೆ ಹೆಚ್ಚಿಸಲಾಗಿದೆ ಎಂದರು. ಕಾರ್ಮಿಕರ ಆಯುಕ್ತರ ಕಚೇರಿಗೆ ಹಠಾತ್ ಆಗಿ ಭೇಟಿ ನೀಡಿದ ಸಂದರ್ಭದಲ್ಲಿ ಯಾರಿಗೂ ತಿಳಿಸದೇ ಕಚೇರಿಯಿಂದ ಹೊರಗಡೆ ಇದ್ದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದರು.
