ವರ್ಷಾಂತ್ಯದ ಒಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 28, Jul 2018, 8:35 AM IST
Soon BJP likely to form government in Karnataka
Highlights

ಶೀಘ್ರದಲ್ಲೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎನ್ನುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಬಲವಾಗಿ ಕೇಳಿ ಬರುತ್ತಿದೆ. 

ಬೆಂಗಳೂರು : ಇದೇ ವರ್ಷಾಂತ್ಯದ ಒಳಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ಗುಸುಗುಸು ರಾಜ್ಯ ರಾಜಕಾರಣದಲ್ಲಿ ಬಲವಾಗಿ ಹರಿದಾಡುತ್ತಿದೆ.

ಈ ಸಂಬಂಧ ಸದ್ದಿಲ್ಲದೆ ಬೆಳವಣಿಗೆಗಳು ನಡೆಯುತ್ತಿದ್ದು, ಸಚಿವ ಸಂಪುಟ ವಿಸ್ತರಣೆ ನಂತರ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ಭುಗಿಲೇಳಬಹುದಾದ ಅಸಮಾಧಾನ ಪತನದವರೆಗೂ ಕೊಂಡೊಯ್ಯುವ ಸಾಧ್ಯತೆಯಿದೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. 

ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ರಾಜ್ಯದಲ್ಲಿ ತಮ್ಮದೇ ಪಕ್ಷದ ಸರ್ಕಾರ ಅಸ್ತಿತ್ವ ದಲ್ಲಿ ಇದ್ದರೆ ಹೆಚ್ಚು ಸ್ಥಾನಗಳನ್ನು ಗಳಿಸಲು ಅನುಕೂಲ ವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿ ವರಿಷ್ಠರ ಲ್ಲಿದೆ. ಹೀಗಾಗಿಯೇ ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸಿ ಎಂಬ ಸಲಹೆಯನ್ನು ವರಿಷ್ಠರು ರಾಜ್ಯ ನಾಯಕರಿಗೆ ನೀಡಿದ್ದಾರೆ. ಆ ಪ್ರಕಾರ ರಾಜ್ಯ ಬಿಜೆಪಿ ನಾಯ ಕರು ತೆರೆಮರೆಯಲ್ಲಿ ತಮ್ಮದೇ ಆದ ರಣತಂತ್ರ ರೂಪಿಸುವಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ. 

ಆದರೆ, ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಸರ್ಕಾರ ರಚಿಸಲು ಕಾಂಗ್ರೆಸ್ ಪಕ್ಷದ ಶಾಸಕರನ್ನು ಸಂಪರ್ಕಿಸಿದ ಬೆಳವಣಿಗೆ ಸೃಷ್ಟಿಸಿ ರುವ ಅವಾಂತರ ಮತ್ತೆ ಪುನರಾವರ್ತನೆ ಆಗದಂತೆ ಎಚ್ಚರಿಕೆ ವಹಿಸಿ ಎಂಬ ಸಂದೇಶವನ್ನು ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ರವಾನಿಸಿದೆ. 

ಹೀಗಾಗಿ, ಆತುರವಿಲ್ಲದೆ ಹಾಗೂ ಸದ್ದಿಲ್ಲದೆ ಪ್ರಯತ್ನ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಒಂದಂತೂ ನಿಜ. ಬಿಜೆಪಿಯಿಂದಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನ ಗೊಂಡಿತು ಎಂಬ ಕೆಟ್ಟ ಹೆಸರು ಮಾತ್ರ ಬರಬಾರದು. ಸಮ್ಮಿಶ್ರ ಸರ್ಕಾರ ತಾನಾಗಿಯೇ ಪತನಗೊಂಡಿತು ಎಂಬಂತೆ ಇಡೀ ಬೆಳವಣಿಗೆ ನಡೆಯಬೇಕು ಎಂಬ ಕಿವಿಮಾತನ್ನು ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ನಿಗಮ ಮಂಡಳಿ ನೇಮಕದ ನಂತರ ಮುಹೂರ್ತ?: ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳ ಪೈಕಿ ಜೆಡಿಎಸ್‌ನಲ್ಲಿ ಅತೃಪ್ತಿ, ಭಿನ್ನಾಭಿಪ್ರಾಯ ಅಷ್ಟಾಗಿ ಇಲ್ಲ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನ ಮಡುಗಟ್ಟಿರುವುದು ಗೊತ್ತಿರುವಂಥದ್ದೇ. ಅದು ಆಗಾಗ ಸ್ಫೋಟಗೊಳ್ಳುತ್ತಲೇ ಇದೆ. ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗಳ ನೇಮಕದ ನಂತರ ಈ ಅಸಮಾಧಾನ ದೊಡ್ಡ ಪ್ರಮಾಣದಲ್ಲಿ ಹೊರಬೀಳುವ ನಿರೀಕ್ಷೆಯಿದೆ. ಆಗ ಅದರ ಲಾಭವನ್ನು ಸಹಜವಾಗಿಯೇ ಬಿಜೆಪಿ ಪಡೆದುಕೊಳ್ಳಲು ಮುಂದಾಗಲಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಸುಳಿವು ನೀಡಿದರು. 

ಈಗಾಗಲೇ ಕಾಂಗ್ರೆಸ್‌ನಲ್ಲಿಯ ಹಲವು ಅತೃಪ್ತ ಶಾಸಕರು ಬಿಜೆಪಿಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಬಿಜೆಪಿಯಿಂದಲೂ ಅಂಥ ಶಾಸಕರನ್ನು ಸಂಪರ್ಕಿಸಿ ಮನವೊಲಿಸುವ ಪ್ರಯತ್ನವೂ ನಡೆಯುತ್ತಿದೆ.  ಆದರೆ, ಇನ್ನೂ ಕೆಲಕಾಲ ಕಾದು ನೋಡುವುದಾಗಿ ಹಲವು ಶಾಸಕರು ಹೇಳುತ್ತಿದ್ದಾರೆ. ಹೀಗಾಗಿ ಅದಕ್ಕೆ ಇನ್ನಷ್ಟು ಸಮಯ ಬೇಕಾಗಬಹುದು ಎಂದು ತಿಳಿದು ಬಂದಿದೆ. 

ಆದರೆ, ಕಾಂಗ್ರೆಸ್ಸಿನ ಯಾವೆಲ್ಲ ಶಾಸಕರು ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ? ಬಿಜೆಪಿ ನಾಯಕರು ಯಾರಿಗೆ ಗಾಳ ಹಾಕುತ್ತಿದ್ದಾರೆ? ಆಮಿಷಗಳನ್ನು ಏನಾ  ದರೂ ಒಡ್ಡುತ್ತಿದ್ದಾರಾ ಎಂಬುದರ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಹೊರಬಿದ್ದಿಲ್ಲ. ಒಟ್ಟಾರೆ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ರಾಜ್ಯ ರಾಜಕಾರಣದ ಆಳದಲ್ಲಿ ಮೇಲೆ ಕಾಣುವಷ್ಟು ತಣ್ಣಗಂತೂ ಇಲ್ಲ. ಒಳಗಿಂದೊಳಗೇ ಹತ್ತಾರು ಬೆಳವಣಿಗೆಗಳು ನಡೆಯುತ್ತಿವೆ. ಅವುಗಳಿಗೆ ಸ್ಪಷ್ಟ ರೂಪ ಬರುವುದಕ್ಕೆ ಮುಹೂರ್ತ ಯಾವಾಗ ಕೂಡಿಬರುತ್ತದೆ ಎಂಬ ಕುತೂಹಲವಂತೂ ಎಲ್ಲ ಪಕ್ಷಗಳಲ್ಲೂ ಕಂಡು ಬರುತ್ತಿದೆ.

loader