ಬೆಂಗಳೂರು :  ಲೋಕಸಭಾ ಚುನಾವಣೆ ನೀತಿ ಸಂಹಿತೆ ಮುಗಿದ ಬೆನ್ನಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2019-2020ನೇ ಆರ್ಥಿಕ ವರ್ಷದಿಂದ ಅನ್ವಯವಾಗುವಂತೆ ವಸತಿ ಸ್ವತ್ತುಗಳಿಗೆ ಶೇ.25ರಷ್ಟುಮತ್ತು ವಾಣಿಜ್ಯ ಕಟ್ಟಡಗಳಿಗೆ ಶೇ.30ರಷ್ಟುಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಸಜ್ಜಾಗುತ್ತಿದೆ.

ಈ ಸಂಬಂಧ ಈಗಾಗಲೇ ಪಾಲಿಕೆ ಅಧಿಕಾರಿಗಳು ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಪಾಲಿಕೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಒಪ್ಪಿಗೆ ಪಡೆದು, ಕೌನ್ಸಿಲ್‌ ಸಭೆಯಲ್ಲಿ ಮಂಡಿಸಲಾಗಿದೆ. ಇದಕ್ಕೆ ಮುಂದಿನ ಸಭೆಯಲ್ಲಿ ಅನುಮೋದನೆ ಪಡೆದು ಜಾರಿ ಮಾಡಲು ಪಾಲಿಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಬಿಬಿಎಂಪಿಯ ಕೆಎಂಸಿ ಕಾಯ್ದೆಯಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಿಸಲು ಅವಕಾಶವಿದೆ. ಆದರೂ, 2008ರಿಂದ ಆಸ್ತಿ ತೆರಿಗೆ ಹೆಚ್ಚಳದ ಪ್ರಸ್ತಾವನೆ ಮುಂದೂಡಿಕೊಂಡು ಬಂದಿದ್ದ ಬಿಬಿಎಂಪಿ 2016-17ನೇ ಸಾಲಿನಲ್ಲಿ ಪರಿಷ್ಕರಿಸಿ ವಸತಿ ಸ್ವತ್ತುಗಳಿಗೆ ಶೇ.20ರಷ್ಟುಮತ್ತು ವಸತಿಯೇತರ ಸ್ವತ್ತುಗಳಿಗೆ ಶೇ.25ರಷ್ಟುಆಸ್ತಿ ತೆರಿಗೆ ಹೆಚ್ಚಳ ಮಾಡಿತ್ತು. ಇದೀಗ ತೆರಿಗೆ ಹೆಚ್ಚಿಸಿ ಮತ್ತೆ ಮೂರು ವರ್ಷ ಕಳೆಯುತ್ತಿರುವುದರಿಂದ 2019ನೇ ಸಾಲಿನಲ್ಲಿ ಮತ್ತೆ ತೆರಿಗೆಯನ್ನು ಶೇ.25ರಿಂದ 30ರಷ್ಟುಹೆಚ್ಚಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ.

ಆಯುಕ್ತರು ಸಭೆಯಲ್ಲಿ ಮಂಡಿಸಲಿರುವ ಆಸ್ತಿ ತೆರಿಗೆ ಹೆಚ್ಚಿಸುವ ಟಿಪ್ಪಣಿಗೆ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ದೊರೆತರೆ 2019ರ ಏ.1ರಿಂದ ಪೂರ್ವಾನ್ವಯವಾಗುವಂತೆ ತೆರಿಗೆ ಹೆಚ್ಚಳವಾಗಲಿದೆ. ಇದು 2016ರಲ್ಲಿ ಏರಿಸಲಾಗಿದ್ದ ಆಸ್ತಿ ತೆರಿಗೆ ಪ್ರಮಾಣಕ್ಕಿಂತ ಶೇ.5ರಷ್ಟುಹೆಚ್ಚುವರಿಯಾಗಿರಲಿದೆ.

ತೆರಿಗೆ ಹೆಚ್ಚಳ ಅನಿವಾರ್ಯ

ಈ ಸಂಬಂಧ ಬುಧವಾರ ಪಾಲಿಕೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌, ಕೆಎಂಸಿ ಕಾಯ್ದೆ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆಗೆ ಅವಕಾಶವಿದೆ. ತೆರಿಗೆ ಪರಿಷ್ಕರಣೆಯಾಗಿ ಮೂರು ವರ್ಷಗಳಾಗಿರುವುದರಿಂದ 2019-20ನೇ ಸಾಲಿನಲ್ಲಿ ಮತ್ತೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ವಸತಿ ಪ್ರದೇಶಗಳಿಗೆ ಶೇ.25ರಷ್ಟು, ವಸತಿಯೇತರ ಪ್ರದೇಶಗಳಿಗೆ ಶೇ.30ರಷ್ಟುಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆ ಕೌನ್ಸಿಲ್‌ ಮುಂದೆ ಸಲ್ಲಿಸಲಾಗಿತ್ತು. ಆದರೆ, ನೀತಿ ಸಂಹಿತೆ ಜಾರಿಯಾಗಿದ್ದರಿಂದ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ. ಇದೀಗ ನೀತಿ ಸಂಹಿತೆ ಅವಧಿ ಮುಗಿದಿದೆ. ಮುಂದಿನ ಕೌನ್ಸಿಲ್‌ ಸಭೆಯಲ್ಲಿ ಪ್ರಸ್ತಾವನೆಗೆ ಅನುಮೋದನೆ ಸಿಕ್ಕರೆ ಅದನ್ನು ಸರ್ಕಾರಕ್ಕೆ ಕಳುಹಿಸಿ ಪ್ರಸಕ್ತ ಆರ್ಥಿಕ ವರ್ಷದಿಂದಲೇ ತೆರಿಗೆ ಹೆಚ್ಚಳ ಜಾರಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಮೈತ್ರಿಕೂಟ ಸಮರ್ಥನೆ; ಬಿಜೆಪಿ ವಿರೋಧ

ಆಸ್ತಿ ತೆರಿಗೆ ಹೆಚ್ಚಳ ಮಾಡಲು ಹೊರಟಿರುವ ಪಾಲಿಕೆ ನಿರ್ಧಾರವನ್ನು ಮೈತ್ರಿ ಆಡಳಿತದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮರ್ಥಿಸಿಕೊಳ್ಳುತ್ತಿದ್ದರೆ, ಪ್ರತಿಪಕ್ಷ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.

ಪ್ರತಿ ವರ್ಷ ಕೈಗೊಳ್ಳುವ ನಗರದ ಅಭಿವೃದ್ಧಿ ಯೋಜನೆ, ನಿರ್ವಹಣಾ ಕಾರ್ಯಗಳಿಗಾಗಿ ವಿವಿಧ ಮೂಲಗಳಿಂದ ಪಾಲಿಕೆಯ ಆರ್ಥಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳುವುದು ಅನಿವಾರ್ಯ. ಇದರಲ್ಲಿ ಆಸ್ತಿ ತೆರಿಗೆ ಹೆಚ್ಚಳ ಕೂಡ ಒಂದು ಸಣ್ಣ ಭಾಗವಾಗಿದೆ. ಸಾಧಕ -ಬಾಧಕಗಳ ಚರ್ಚೆ ನಡೆಸಿ ಕೌನ್ಸಿಲ್‌ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಡಳಿತ ಪಕ್ಷ ಕಾಂಗ್ರೆಸ್‌ ನಾಯಕ ಅಬ್ದುಲ್‌ ವಾಜಿದ್‌ ತಿಳಿಸಿದ್ದಾರೆ.

ಸುಳ್ಳು ಲೆಕ್ಕ ಕೊಟ್ಟವರ ಪತ್ತೆ ಹಚ್ಚಿ:

ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ನಾಗರಿಕರ ಮೇಲೆ ತೆರಿಗೆ ಹೆಚ್ಚಳದ ಬದಲು, ನಗರದಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ವ್ಯವಸ್ಥೆ ಜಾರಿಯಾದಾಗಿನಿಂದ ಸುಳ್ಳು ಲೆಕ್ಕ ತೋರಿಸಿ ತೆರಿಗೆ ವಂಚಿಸುತ್ತಿರುವ ಸಾಕಷ್ಟುಜನರಿದ್ದಾರೆ. ಅನೇಕ ಜನ ಕೋಟ್ಯಂತರ ರು. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಅದನ್ನು ಮೊದಲು ಪತ್ತೆ ಹಚ್ಚಿ ತೆರಿಗೆ ವಸೂಲಿ ಮಾಡಲಿ. ಯಾವುದೇ ಕಾರಣಕ್ಕೂ ತೆರಿಗೆ ಹೆಚ್ಚಳಕ್ಕೆ ನಮ್ಮ ಪಕ್ಷ ಅವಕಾಶ ನೀಡುವುದಿಲ್ಲ. ಹಾಗೊಂದು ವೇಳೆ ಮೈತ್ರಿ ಆಡಳಿತ ಕೌನ್ಸಿಲ್‌ನಲ್ಲಿ ಈ ಸಂಬಂಧ ತೀರ್ಮಾನಕ್ಕೆ ಮುಂದಾದರೆ ಉಗ್ರ ಹೋರಾಟ ನಡೆಸುವುದಾಗಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಹೇಳಿದ್ದಾರೆ.