ಬೆಂಗಳೂರು[ಜೂ.20] : ರಾಜ್ಯದಲ್ಲಿ ಈ ಬಾರಿಯ ಸದಸ್ಯತ್ವ ಅಭಿಯಾನದ ಅಡಿಯಲ್ಲಿ ಹೊಸದಾಗಿ 50 ಲಕ್ಷ ಸದಸ್ಯರನ್ನು ನೋಂದಾಯಿಸಲು ಬಿಜೆಪಿ ನಿರ್ಧರಿಸಿದೆ. ಕಳೆದ ಬಾರಿಯ ಸದಸ್ಯತ್ವ ಅಭಿ ಯಾನದ ವೇಳೆ ರಾಜ್ಯ ದಿಂದ 80 ಲಕ್ಷ ಸದಸ್ಯರನ್ನು ನೋಂದಾಯಿಸಲಾಗಿತ್ತು. ಈ ಬಾರಿ ಹೆಚ್ಚುವರಿ ಯಾಗಿ 50  ಲಕ್ಷ ಸದಸ್ಯರನ್ನು ಸೇರ್ಪಡೆಗೊಳಿಸುವ ಗುರಿ ಹೊಂದಲಾಗಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ರಾಷ್ಟ್ರವ್ಯಾಪಿ ಸದಸ್ಯತ್ವ ಆಂದೋಲನವು ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನವಾದ ಜು. 6 ರಂದು ಆರಂಭಗೊಂಡು ಆ.11 ಕ್ಕೆ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಸದಸ್ಯತ್ವ ಅಭಿಯಾನದ ಪೂರ್ವಭಾವಿ ತಯಾರಿಗೆ ಚಾಲನೆ ನೀಡಿದ ಬಿಜೆಪಿಯ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ ಅವರು ಎಲ್ಲ ರಾಜ್ಯಗಳ ಹಿರಿಯ ನಾಯಕರು ಹಾಗೂ ಅಭಿಯಾನದ ರಾಜ್ಯ ಉಸ್ತುವಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. 

ಕಾಲಮಿತಿ ಯಲ್ಲಿ ಸದಸ್ಯತ್ವ ಅಭಿಯಾನ ನಡೆಸುವುದರ ಜೊತೆಗೆ ಶಕ್ತಿ ಕೇಂದ್ರದ ಮಟ್ಟದವರೆಗೂ ಸದಸ್ಯತ್ವ ನೋಂದಣಿ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ನಡ್ಡಾ ಸೂಚಿಸಿದರು.