ಬಳ್ಳಾರಿ: ಕರ್ನಾಟಕ ಲೋಕಾಯುಕ್ತದ ವಿಶೇಷ ತನಿಖಾ ತಂಡದ ಡಿಎಸ್ಪಿ ಎಂ.ಅನಿಲಕುಮಾರ್‌ ಪುತ್ರ ಸಾಹಿಲ್‌ ರಾವ್‌ ಅವರನ್ನು ಅಪಹರಿಸುವ ಪ್ರಯತ್ನ ಮಂಗಳವಾರ ಸಂಜೆ ನಡೆದಿದೆ. 

ನಂದಿ ಇಂಟನ್ಯಾಷನಲ್‌ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ಸಾಹಿಲ್‌ ರಾವ್‌ ನಗರದ ಚಂದ್ರ ಕಾಲನಿ ಮುಖ್ಯರಸ್ತೆಯಲ್ಲಿ ಶಾಲೆಯ ಬಸ್‌ನಿಂದ ಇಳಿದು ಮನೆಗೆ ನಡೆದುಕೊಂಡು ಹೋಗುವಾಗ ಹಿಂಬಾಲಿಸಿದ ಇಬ್ಬರು ಅಪರಿಚಿತರು ಆತನ ಹೆಸರು, ವಿಳಾಸ ಕೇಳಿದ್ದರು. ಮಗ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಸ್ಥಳದಿಂದ ಪರಾರಿಯಾದರು ಎಂದು ಅನಿಲಕುಮಾರ ಅವರು ಕೌಲ್‌ ಬಜಾರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ. 

ಅಕ್ರಮ ಗಣಿಗಾರಿಕೆಯ ಕುರಿತ ದೂರುಗಳ ತನಿಖೆಯು ಅಂತಿಮ ಹಂತದಲ್ಲಿರುವಾಗಲೇ, ತಮ್ಮ ಮನೆಯ ಸುತ್ತಮುತ್ತ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ. ನನ್ನ ಮಗನನ್ನು ಅಪಹರಿಸಿ, ತೊಂದರೆ ನೀಡಲು ಯತ್ನಿಸಿದ್ದಾರೆ. ಹೀಗಾಗಿ ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.