ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ನಿಜವಾದ ದೇಶಪ್ರೇಮಿ ಯಾಗಿರಲಾರ ಎಂದು ಬಿಜೆಪಿ ಮುಖಂಡ ವರ್ಗೀಯಾ ಟೀಕಿಸಿದ್ದಾರೆ. 

ನವದೆಹಲಿ: ವಿವಾದಿತ ಹೇಳಿಕೆಗಳಿಗೆ ಕುಖ್ಯಾತಿ ಹೊಂದಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯ್ ವರ್ಗೀಯಾ, ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೇಶಪ್ರೇಮವನ್ನೇ ಪ್ರಶ್ನಿಸಿದ್ದಾರೆ. ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ನಿಜವಾದ ದೇಶಪ್ರೇಮಿ ಯಾಗಿರಲಾರ ಎಂದು ವರ್ಗೀಯಾ ಟೀಕಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ಈ ಕುರಿತು ಟ್ವೀಟ್ ಮಾಡಿರುವ ವರ್ಗೀಯಾ ‘ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿ ಎಂದಿಗೂ ದೇಶಪ್ರೇಮಿಯಾಗಿರಲಾರ, ಜೊತೆಗೆ ತನ್ನ ಹೃದಯದಲ್ಲಿ ದೇಶಭಕ್ತಿಯನ್ನೂ ಹೊಂದಿರ ಲಾರ. ಅವರ ತಾಯಿ ವಿದೇಶಿಯಾಗಿರುವ ಕಾರಣ, ರಾಹುಲ್‌ರದ್ದು ನೈಜ ದೇಶಪ್ರೇಮವಲ್ಲ. ಅವರದ್ದು ಕೃತಕವಾಗಿ ಸೃಷ್ಟಿಸಿಕೊಂಡಿರುವ ದೇಶಭಕ್ತಿ’ ಎಂದು ಟೀಕಿಸಿದ್ದಾರೆ. 

ರಾಹುಲ್ ಗಾಂಧಿ ಕುರಿತ ಈ ಟ್ವೀಟ್‌ಗೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಲೇ, ವಿಜಯ್ ವರ್ಗೀಯಾ ತಮ್ಮ ವಿವಾದಿತ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ. ಈ ಹಿಂದೆ ಕೂಡಾ ಹಲವು ಬಾರಿ ಬಿಜೆಪಿ ನಾಯಕರು ಸೋನಿಯಾ ಅವರ ವಿದೇಶಿ ಮೂಲ ಕೆದಕುವ ಯತ್ನ ಮಾಡಿದ್ದರಾದರೂ, ಇತ್ತೀಚೆಗೆ ಕಮಲ ಪಕ್ಷದ ನಾಯಕರಿಂದ ಅಂಥ ಯಾವುದೇ ಹೇಳಿಕೆ ಬಂದಿರಲಿಲ್ಲ. ಆದರೆ ಇದೀಗ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೇ ಸೋನಿಯಾ ವಿದೇಶಿ ಮೂಲದ ಜೊತೆಗೆ ರಾಹುಲ್‌ರ ದೇಶಭಕ್ತಿ ಮತ್ತು ದೇಶಪ್ರೇಮದ ಬಗ್ಗೆ ಸಂದೇಹ ವ್ಯಕ್ತಪಡಿಸುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.