ಅಪ್ಪ- ಅಮ್ಮ  ಆಸ್ತಿ ಮಾಡಿಟ್ಟಿದ್ದಾರೆ ನಾವು ಆರಾಮಾಗೆ ಇರಬಹುದು ಅನ್ನೋ ಐಡಿಯಾ ಮಕ್ಕಳಲ್ಲಿದ್ದರೆ, ಇನ್ಮುಂದೆ ಅಂತಾ ಆಲೋಚನೆಗಳನ್ನು ಮಕ್ಕಳು ಮಾಡದೇ ಇರೋದು  ಒಳ್ಳೋದು. ಏಕೆಂದರೆ ಅಪ್ಪ -ಅಮ್ಮನ ಆಸ್ತಿಯಲ್ಲಿ ಎಂಜಾಯ್​ ಆಗಿ ಇರಬಹುದು ಎಂಬ ಮಕ್ಕಳಿಗೆ ದೆಹಲಿ ಹೈಕೋರ್ಟ್​ ಶಾಕ್​ ನೀಡಿದೆ.

ನವದೆಹಲಿ(ನ. 30): ತಂದೆ, ತಾಯಿಯ ಒಪ್ಪಿಗೆ ಇಲ್ಲದೇ ಅವರ ಮನೆಯಲ್ಲಿರಲು ಮಕ್ಕಳಿಗೆ ಹಕ್ಕಿಲ್ಲ ಎಂದು ದೆಹಲಿ ಹೈಕೋರ್ಟ್​ ನಿನ್ನೆ ಮಂಗಳವಾರ ಮಹತ್ವದ ತೀರ್ಪು ಹೊರಡಿಸಿದೆ. ಇದು ಅಚ್ಚರಿ ಅನ್ನಿಸಿದ್ರೂ ಸತ್ಯ. ತಂದೆ-ತಾಯಿ ಸಂಪಾದಿಸಿದ ಮನೆಯಲ್ಲಿ ಮಕ್ಕಳು ವಾಸಿಸಲು ಯಾವುದೇ ಕಾನೂನಾತ್ಮಕ ಹಕ್ಕಿಲ್ಲವೆಂದು ದೆಹಲಿ ಹೈಕೋರ್ಟ್​​ ಮಹತ್ವದ ತೀರ್ಪುವೊಂದು ನೀಡಿದೆ. ಮಗ ವಿವಾಹಿತನಿರಲಿ, ಅವಿವಾಹಿತನಿರಲಿ ತಂದೆ-ತಾಯಿ ಒಪ್ಪಿಗೆ ಇದ್ದಲ್ಲಿ ಮಾತ್ರ ಅವರ ಜೊತೆ ಮನೆಯಲ್ಲಿ ವಾಸಿಸಲು ಅವಕಾಶ ಇದೆ ಎಂದು ಹೈಕೋರ್ಟ್​​ ತೀರ್ಪು ನೀಡಿ ಆದೇಶ ಹೊರಡಿಸಿದೆ.

ಇಷ್ಟೇ ಅಲ್ಲ, ವಯಸ್ಸಾಗಿರುವ ಅಪ್ಪ-ಅಮ್ಮನಿಗೆ ಮಕ್ಕಳು ಕಿರುಕುಳ ನೀಡದಂತೆ ನೋಡಿಕೊಳ್ಳಬೇಕು. ಅವರ ಆರೈಕೆ ಮಾಡಬೇಕು. ಹಾಗಂತ ಜೀವನ ಪೂರ್ತಿ ಪೋಷಕರಿಗೆ ಹೊರೆಯಾಗಬಾರದು ಎಂದು ಕೂಡ ಹೈಕೋರ್ಟ್ ಆದೇಶಿಸಿದೆ.

ದೆಹಲಿಯಲ್ಲಿ ಒಬ್ಬ ಪೋಷಕರನ್ನು ಮನೆ ಖಾಲಿ ಮಾಡಿಸಲು ಮಗನೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ರಾಣಿ. ಮನೆಯು ಪೋಷಕರ ಸ್ವಯಾರ್ಜಿತ ಆಸ್ತಿಯಾಗಿದ್ದರೆ, ವಿವಾಹಿತ ಅಥವಾ ಅವಿವಾಹಿತ ಮಗ ಕೇವಲ ಅನುಕಂಪದ ಮೇಲೆ ಮಾತ್ರ ಅವರೊಂದಿಗೆ ವಾಸಿಸಬಹುದು. ಅದೂ ಪೋಷಕರ ಒಪ್ಪಿಗೆ ಇದ್ದರೆ ಮಾತ್ರ. ಇಲ್ಲ ಎಂದರೆ ಮಕ್ಕಳು ಮನೆಯಿಂದ ಖಾಲಿ ಮಾಡಬೇಕೆಂದು ಆದೇಶ ನೀಡಿದ್ದಾರೆ.

ಒಟ್ಟಿನಲ್ಲಿ ಪೋಷಕರು ಸಂಪಾದಿಸಿದ ಆಸ್ತಿಯಲ್ಲಿ ಎಂಜಾಯ್​​ ಮಾಡುವ ಮಕ್ಕಳಿಗೆ ದೆಹಲಿ ಹೈಕೋರ್ಟ್ ಶಾಕ್​ ನೀಡಿದೆ. ಪೋಷಕರ ಮೇಲೆ ಅವಲಂಬನೆ ಆಗದೇ ಸ್ವಂತ ಕಾಲಿನ ಮೇಲೆ ನಿಲ್ಲುವ ಜವಾಬ್ದಾರಿಯನ್ನ ಕೋರ್ಟ್​ ಕಾನೂನಿನ ಮೂಲಕ ಹೇಳ ಹೊರಟಿರುವುದು ನಾಗರೀಕ ಸಮಾಜದ ಬದಲಾವಣೆಗೆ ಹೊಸದೊಂದು ಅಧ್ಯಾಯವೇ ಎನ್ನಬಹುದು.

- ಜೆ.ಎಸ್​. ಪೂಜಾರ್​, ನ್ಯೂಸ್​​ ಬ್ಯೂರೋ, ಸುವರ್ಣನ್ಯೂಸ್​​