ಕಾರ್ಯಕಾರಿಣಿಯಲ್ಲಿ 229 ಸಮಾಜವಾದಿ ಪಕ್ಷದ ಶಾಸಕರ ಪೈಕಿ 214 ಮಂದಿ ಉಪಸ್ಥಿತರಿದ್ದು, ಅಖಿಲೇಶ್ ಯಾದವ್‌ಗೆ ಬೆಂಬಲ ಸೂಚಿಸಿದ್ದಾರೆ.

ಲಖನೌ(ಜ.01): ಉತ್ತರ ಪ್ರದೇಶದಲ್ಲಿನ ಆಡಳಿತಾರೂಡ ಸಮಾಜವಾದಿ ಪಕ್ಷದಲ್ಲಿನ ಬಿಕ್ಕಟ್ಟು ಏಕಾಏಕಿ ತಾರಕಕ್ಕೇರಿದ್ದು, ಅಧಿಕೃತವಾಗಿ ಇಬ್ಭಾಗವಾಗಿದೆ. ಇದುವರೆಗೆ ಎಸ್ಪಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಕೈ ಮೇಲಾಗಿದ್ದರೆ, ಇಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಣ ಪ್ರಾಬಲ್ಯ ಸಾಧಿಸಿದೆ. ಈ ಮೂಲಕ ಅಖಿಲೇಶ್ ಯಾದವ್ ಸಮಾಜವಾದಿ ಪಕ್ಷದಲ್ಲಿ ಕ್ಷಿಪ್ರಕ್ರಾಂತಿಯನ್ನೇ ನಡೆಸಿದ್ದಾರೆ.

ಲಖನೌದಲ್ಲಿ ನಡೆದ ವಿಶೇಷ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಂದೆ ಮತ್ತು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ಪದಚ್ಯುತಗೊಳಿಸಿದ್ದಾರೆ. ಜತೆಗೆ ತಾವೇ ಅಧ್ಯಕ್ಷರೆಂದು ಘೋಷಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ರಾಜ್ಯಸಭಾ ಸದಸ್ಯ ಅಮರ್ ಸಿಂಗ್‌'ರನ್ನೂ ಉಚ್ಚಾಟಿಸಲಾಗಿದೆ. ಡಿ.30ರಂದು ಮುಲಾಯಂ ಅಖಿಲೇಶ್, ರಾಮ್‌ಗೋಪಾಲ್‌'ರನ್ನು ಉಚ್ಚಾಟಿಸಿ ಮಾರನೇ ದಿನ ಅದನ್ನು ಹಿಂಪಡೆದಿದ್ದರು.

ಅದಕ್ಕೆ ಪೂರಕವೆಂಬಂತೆ ಉತ್ತರ ಪ್ರದೇಶದ ಎಸ್ಪಿ ಘಟಕದ ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್‌'ರನ್ನೂ ವಜಾಗೊಳಿಸಿ ತಮ್ಮ ಬೆಂಬಲಿಗ ನರೇಶ್ ಉತ್ತಮ್‌'ರನ್ನು ಯುಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಿಸಿಕೊಂಡಿದ್ದಾರೆ. ಈ ಬೆಳವಣಿಗೆಗಳಿಂದ ಆಘಾತಗೊಂಡಿರುವ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಕಾರ್ಯಕಾರಿಣಿಯಲ್ಲಿ ಕೈಗೊಂಡಿರುವ ಎಲ್ಲ ನಿರ್ಣಯಗಳು ಕಾನೂನು ಬಾಹಿರ ಎಂದು ಕರೆದಿದ್ದಾರೆ. ಜ.5ರಂದು ತಾವೂ ಕೂಡ ವಿಶೇಷ ಕಾರ್ಯಕಾರಿಣಿ ಕರೆದಿರುವುದಾಗಿ ಪ್ರಕಟಿಸಿದ್ದಾರೆ. ಜತೆಗೆ ರಾಮ್ ಗೋಪಾಲ್ ಯಾದವ್ ಅವರನ್ನು ಮತ್ತೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.

ರಕ್ಷಣೆಗೆ ಕ್ರಮ: ಇಂದು ವಿಶೇಷ ರಾಷ್ಟ್ರೀಯ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ‘‘ನನ್ನ ತಂದೆಯನ್ನು ಸಂಚುಕೋರರಿಂದ ಪಾರು ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದ್ದೇನೆ. ಪಕ್ಷದ ಬಲವರ್ಧನೆಗೆ ಏನು ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಮಾಡುತ್ತೇನೆ. ಅದಕ್ಕಾಗಿ ಯಾವ ತ್ಯಾಗ ಮಾಡಬೇಕೋ ಅದಕ್ಕೆ ಸಿದ್ಧನಾಗಿದ್ದೇನೆ. ಮುಲಾಯಂ ಸಿಂಗ್ ಯಾದವ್ ನನ್ನ ತಂದೆ ಮತ್ತು ಪಕ್ಷದಲ್ಲಿ ಅತ್ಯಂತ ಉನ್ನತ ಹುದ್ದೆಯನ್ನು ಹೊಂದಿದ್ದಾರೆ,’’ ಎಂದು ಅವರು ಕಾರ್ಯಕಾರಿಣಿಯಲ್ಲಿ ಮಾತನಾಡುವ ವೇಳೆ ಹೇಳಿದ್ದಾರೆ.

ಕಾರ್ಯಕಾರಿಣಿಯಲ್ಲಿ 229 ಸಮಾಜವಾದಿ ಪಕ್ಷದ ಶಾಸಕರ ಪೈಕಿ 214 ಮಂದಿ ಉಪಸ್ಥಿತರಿದ್ದು, ಅಖಿಲೇಶ್ ಯಾದವ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಮತ್ತು ಮಾಜಿ ಸಚಿವ ಶಿವಪಾಲ್ ಯಾದವ್ ಗೈರು ಹಾಜರಾಗಿದ್ದರು. ಮುಲಾಯಂ ಸಿಂಗ್ ಪರವಾಗಿ ಕೇವಲ 20 ಶಾಸಕರು ಬೆಂಬಲ ಸೂಚಿಸಿದ್ದಾರೆ. ಜತೆಗೆ ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವ ಅಧಿಕಾರವನ್ನೂ ಅಖಿಲೇಶ್ ನೀಡಲಾಗಿದೆ.

ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮಾತನಾಡಿದ ಅಖಿಲೇಶ್ ‘‘ನೇತಾಜಿ ಅವರ ಗೌರವ ಮತ್ತು ಹುದ್ದೆ ನಮಗೆ ಶ್ರೇಷ್ಠ. ಮುಂದಿನ 3-4 ತಿಂಗಳು ನಮಗೆ ಮುಖ್ಯವಾದದ್ದು. ಮುಂದಿನ ಸರ್ಕಾರ ರಚನೆಯ ಹೊಣೆಯನ್ನು ನನಗೆ ನೀಡಲಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವೆ ಎಂದು ಈ ಹಿಂದೆ ಕೂಡ ಹೇಳಿದ್ದೆ. ಆದರೆ ಒಬ್ಬ ವ್ಯಕ್ತಿ ಟೈಪ್‌'ರೈಟರ್ ಅನ್ನು ನೇತಾಜಿಯವರ ಮನೆಗೆ ತಂದು ನನ್ನ ಹೆಸರು ತೆಗೆದು ಹಾಕುವ ಪತ್ರ ಟೈಪ್ ಮಾಡಿಸಿದರು,’’ ಎಂದು ದೂರಿದರು.

ಭಾನುವಾರದ ಹೈಡ್ರಾಮ

ಬೆ.11.20- ರಾಷ್ಟ್ರೀಯ ಕಾರ್ಯಕಾರಣಿ ಶುರು. ಮುಲಾಯಂ, ಶಿವಪಾಲ್ ಗೈರು

ಬೆ.11.35- ಅಖಿಲೇಶ್ ಎಸ್ಪಿ ಅಧ್ಯಕ್ಷರೆಂದು ರಾಮ್‌ಗೋಪಾಲ್ ಘೋಷಣೆ

ಬೆ.11.50- ರಾಷ್ಟ್ರೀಯ ಕಾರ್ಯಕಾರಿಣಿ ಅಸಿಂಧು ಎಂದು ಮುಲಾಯಂ ಪ್ರತಿಪಾದನೆ

ಬೆ.11.50- ಉ.ಪ್ರ.ಎಸ್ಪಿ ಘಟಕ ಅಧ್ಯಕ್ಷ ಸ್ಥಾನದಿಂದ ಶಿವಪಾಲ್, ಪಕ್ಷದಿಂದ ಅಮರ್ ಸಿಂಗ್ ವಜಾ

ಬೆ.11.55- ಮುಲಾಯಂ ಸಿಂಗ್ ಸರ್ವೋನ್ನತ ನಾಯಕರೆಂದು ಅಂಗೀಕಾರ

ಮ.02.50- ನೇತಾಜಿಯಿಂದ ರಾಮ್‌'ಗೋಪಾಲ್ ಯಾದವ್ ಉಚ್ಚಾಟನೆ

ಸಂಜೆ 4.45- ಎಸ್ಪಿ ಪ್ರಧಾನ ಕಚೇರಿಯಲ್ಲಿ ಕೋಲಾಹಲ. ಅಖಿಲೇಶ್ ಬೆಂಬಲಿಗರಿಂದ ಕಟ್ಟಡ ವಶಕ್ಕೆ

ಸಂ.5.30- ಎಸ್ಪಿ ಉಪಾಧ್ಯಕ್ಷ ಕಿರಣ್ಮೊಯಾ ನಂದಾ, ನರೇಶ್ ಅಗರ್ವಾಲ್ ಉಚ್ಚಾಟನೆ

ಸಂ.6.00- ಉ.ಪ್ರ.ಎಸ್ಪಿ ಅಧ್ಯಕ್ಷ ಸ್ಥಾನದಿಂದ ಶಿವಪಾಲ್ ವಜಾ, ನರೇಶ್ ಉತ್ತಮ್ ನೇಮಕ

ಸಮಾಜವಾದಿ ಪಕ್ಷದ ಇತಿಹಾಸ

ಕೇಂದ್ರದ ಮಾಜಿ ಸಚಿವ ಮುಲಾಯಂ ಸಿಂಗ್ ಯಾದವ್ 1992ರಲ್ಲಿ ಸಮಾಜವಾದಿ ಪಕ್ಷ ಸ್ಥಾಪಿಸಿದರು. ಇದಕ್ಕಿಂತ ಮೊದಲು 1989ರಲ್ಲಿ ಅವರು ಲೋಕದಳದ ಅಧ್ಯಕ್ಷರಾಗಿದ್ದರು. ಬಳಿಕ ಅವರು 1990ರಲ್ಲಿ ಯಾದವ್ ಮಾಜಿ ಪ್ರಧಾನಿ ಚಂದ್ರಶೇಖರ್ 1992ರಲ್ಲಿ ಜನತಾ ದಳ ಸೋಶಿಯಲಿಸ್ಟ್ ಪಕ್ಷಕ್ಕೆ ಸೇರ್ಪಡೆಯಾದರು. ಅದೇ ವೇಳೆಗೆ ಅವರು ಕಾಂಗ್ರೆಸ್ ಬೆಂಬಲದೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ಮುಂದುವರಿದರು. 2009ರಿಂದ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಅಜಂಗಡ ಕ್ಷೇತ್ರದ ಸಂಸದರಾಗಿದ್ದಾರೆ. ಸದ್ಯ ಅವರ ಪಕ್ಷ ಹಾಲಿ ವರ್ಷ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ.