ಸೋಮಣ್ಣಗೆ ಈಗ ಸೇಡು ತೀರಿಸಿಕೊಳ್ಳುವ ತವಕ

news | Wednesday, April 11th, 2018
Suvarna Web Desk
Highlights

ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ವಿ. ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗುವುದರೊಂದಿಗೆ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಚುನಾವಣೆ ಕಣ ರಂಗೇರಿದೆ. 2009 ರ ಉಪಚುನಾವಣೆಯ ಸೋಲಿನ ಸೇಡನ್ನು ಈ ಬಾರಿ ತೀರಿಸಿಕೊಳ್ಳುವಲ್ಲಿ ಸೋಮಣ್ಣ ಯಶಸ್ವಿಯಾಗುತ್ತಾರಾ ಎಂಬ ಕುತೂಹಲ ಗರಿಗೆದರಿದೆ.

ಬೆಂಗಳೂರು :  ಮಾಜಿ ಸಚಿವ ಹಾಗೂ ಹಾಲಿ ವಿಧಾನಪರಿಷತ್ ಸದಸ್ಯ ವಿ. ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗುವುದರೊಂದಿಗೆ ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದ ಚುನಾವಣೆ ಕಣ ರಂಗೇರಿದೆ. 2009 ರ ಉಪಚುನಾವಣೆಯ ಸೋಲಿನ ಸೇಡನ್ನು ಈ ಬಾರಿ ತೀರಿಸಿಕೊಳ್ಳುವಲ್ಲಿ ಸೋಮಣ್ಣ ಯಶಸ್ವಿಯಾಗುತ್ತಾರಾ ಎಂಬ ಕುತೂಹಲ ಗರಿಗೆದರಿದೆ.

ಕಾಂಗ್ರೆಸ್ಸಿನ ಹಾಲಿ ಶಾಸಕ ಪ್ರಿಯಕೃಷ್ಣ ಅವರಿಗೆ ಈ ಬಾರಿಯೂ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದ್ದು,  ಸೋಮಣ್ಣ ವರ್ಸಸ್ ಪ್ರಿಯಕೃಷ್ಣ ಎಂಬ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ. ಇಬ್ಬರ ನಡುವೆ ಜಿದ್ದಾಜಿದ್ದಿ ಹಣಾಹಣಿ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಗೋವಿಂದರಾಜನಗರ ಕ್ಷೇತ್ರ ವ್ಯಾಪ್ತಿಯ 9 ಬಿಬಿಎಂಪಿ ವಾರ್ಡ್‌ಗಳ ಪೈಕಿ 6ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್ ಮತ್ತು 1ರಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. ಹೀಗಾಗಿ ಬಿಜೆಪಿಗೆ ಮೇಲ್ನೋಟಕ್ಕೆ ಲಾಭವಿದ್ದಂತೆ ಕಂಡುಬರುತ್ತದೆ. 

ಆದರೆ ಮತದಾರರು ಬಿಬಿಎಂಪಿ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಭಿನ್ನವಾಗಿ ನೋಡಿದರೆ ಫಲಿತಾಂಶದಲ್ಲಿ ಏರುಪೇರಾಗುತ್ತದೆ. ಕ್ಷೇತ್ರದಲ್ಲಿನ ಜಾತಿ ಸಮೀಕರಣವೂ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಧಿಕ ಸಂಖ್ಯೆಯಲ್ಲಿರುವ ಒಕ್ಕಲಿಗ, ಕುರುಬ ಹಾಗೂ ಮುಸ್ಲಿಂ ಮತದಾರರ ಪೈಕಿ ಎರಡು ಸಮುದಾಯಗಳು ಒಂದು ಪಕ್ಷಕ್ಕೆ ಸಾರಾಸಗಟಾಗಿ ಬೆಂಬಲ ನೀಡಿದಲ್ಲಿ ಗೆಲುವು ಸುಲಭವಾಗುತ್ತದೆ. ಈ ಮತಗಳನ್ನು ಸೆಳೆದುಕೊಳ್ಳುವುದೇ ಸೋಮಣ್ಣ ಅವರ ಮುಂದಿರುವ ಸವಾಲು. ಇದರಲ್ಲಿ ಯಶಸ್ವಿಯಾದಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ವಸತಿ ಮಂತ್ರಿ ಎಂ. ಕೃಷ್ಣಪ್ಪ ಅವರ ಪುತ್ರರಾಗಿರುವುದರಿಂದ, ಸಚಿವರ ಸ್ವಕ್ಷೇತ್ರ ವಿಜಯನಗರದ ಪಕ್ಕದಲ್ಲೇ ಗೋವಿಂ

ದರಾಜ ನಗರ ಇರುವುದರಿಂದ ಪ್ರಿಯಕೃಷ್ಣ ಪ್ರತಿನಿಧಿಸುವ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಕೊರತೆ ಇಲ್ಲ. ವಿಜಯನಗರ ವೈಭವ ಎಂಬ ಘೋಷ ವಾಕ್ಯದಡಿ ವಿಶೇಷ ಅನುದಾನವನ್ನು ಪ್ರಿಯಕೃಷ್ಣ ತಂದಿದ್ದಾರೆ. ಅದೆಲ್ಲವೂ ತಮ್ಮ ನೆರವಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಹನೂರು ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ: ಗೋವಿಂದರಾಜ ನಗರದಿಂದ ಸೋಮಣ್ಣ ಅವರು ಸ್ಪರ್ಧಿಸುವ ಬಗ್ಗೆಯೇ ಅನುಮಾನವಿತ್ತು. ಬೆಂಗಳೂರು ಬಿಟ್ಟು ಚಾಮರಾಜನಗರ ಜಿಲ್ಲೆ ಹನೂರು ಕ್ಷೇತ್ರದ ಬಗ್ಗೆ ಹೆಚ್ಚಿನ ಆಸಕ್ತಿ ಇಟ್ಟುಕೊಂಡು ಅವರು ಪ್ರಯತ್ನ ನಡೆಸಿದ್ದರು. ಅದಕ್ಕೆ ಪೂರ್ವ ತಯಾರಿಯನ್ನೂ ಕೈಗೊಂಡಿದ್ದರು. ಆದರೆ, ಯಡಿಯೂರಪ್ಪಅವರು ಹನೂರಿನಿಂದ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಕುಟುಂಬಕ್ಕೆ ಟಿಕೆಟ್ ಕೊಡುವ ಬಗ್ಗೆ ವಾಗ್ದಾನ ಮಾಡಿರುವು ದಾಗಿ ಹೇಳಿದ ನಂತರ ಸೋಮಣ್ಣ ಅವರು ಗೋವಿಂದರಾಜ ನಗರ ಕ್ಷೇತ್ರದಿಂದ ಕಣಕ್ಕಿಳಿಯಲು ಮನಸ್ಸು ಮಾಡಿದರು.

ಸೋಮಣ್ಣ ಅವರಿಗೆ ಈ ಕ್ಷೇತ್ರ ಹೊಸದೇನಲ್ಲ. ಕ್ಷೇತ್ರ ಪುನರ್‌ವಿಂಗಡಣೆ ನಂತರ ಗೋವಿಂದರಾಜ ನಗರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 2008 ರಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಅಂದಿನ ಬಿಜೆಪಿ ಸರ್ಕಾರದ ‘ಆಪರೇಷನ್ ಕಮಲ’ಕ್ಕೆ ಒಳಗಾಗಿ ಕಾಂಗ್ರೆಸ್ಸಿಗೆ ಮತ್ತು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಸಚಿವರಾದರು. ನಂತರ 2009 ರಲ್ಲಿ ಉಪಚುನಾವಣೆ ಎದುರಿಸಿದರು. ಆದರೆ, ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ ಪ್ರಿಯಕೃಷ್ಣ ಎದುರು ಪರಾಭವಗೊಂಡರು. ನಂತರ ಸೋಮಣ್ಣ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಾಯಿತು. 2013 ರ ಚುನಾವಣೆ ಯಲ್ಲಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧಿಸಿದ ಸೋಮಣ್ಣಗೆ ಗೆಲುವು ದಕ್ಕಲಿಲ್ಲ. ಪ್ರಿಯಕೃಷ್ಣ ತಂದೆ ಎಂ. ಕೃಷ್ಣಪ್ಪ ಎದುರು ಪರಾಜಿತರಾದರು.

ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು, ಗೋವಿಂದರಾಜನಗರದಿಂದ ಈಗ ವಿಧಾನಸಭೆ ಪ್ರವೇಶಿಸುವ ಕನಸು ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಶಾಸಕ ಪ್ರಿಯಕೃಷ್ಣ ಅವರ ಕುಟುಂಬಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಆಪ್ತರೂ ಹೌದು. ಇದರಿಂದ ಪ್ರಿಯಕೃಷ್ಣ ಅವರಿಗೆ ಅನುಕೂಲವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಕಳೆದ ಬಾರಿ ಜೆಡಿಎಸ್‌ನಿಂದ ರಂಗೇಗೌಡರು ಕಣದಲ್ಲಿದ್ದರು. ಜೆಡಿಎಸ್ ಅಭ್ಯರ್ಥಿ ಯಾರ ಮತಗಳನ್ನು ಕೀಳುತ್ತಾರೆ ಎಂಬುದರ ಮೇಲೆ ಸೋಮಣ್ಣ ಹಾಗೂ ಪ್ರಿಯಕೃಷ್ಣ ಅವರ ರಾಜಕೀಯ ಭವಿಷ್ಯ ನಿಂತಿದೆ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk