ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಫೋನ್ ಕಾಲ್ ಬಳಸುವ ವಿಚಾರಕ್ಕೆ ಇಬ್ಬರು ಖೈದಿಗಳ ನಡುವೆ ರಕ್ತಸಿಕ್ತ ಸಂಘರ್ಷ ನಡೆದಿದೆ. ಫಯಾನ್ ಎಂಬ ಖೈದಿಯು ಸುರೇಶ್ ಎಂಬಾತನ ತಲೆಗೆ ಕಲ್ಲಿನಿಂದ ಜಜ್ಜಿ ಗಂಭೀರವಾಗಿ ಗಾಯಗೊಳಿಸಿದ್ದು, ಗಾಯಾಳುವನ್ನು ಚಿಕಿತ್ಸೆಗಾಗಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ (ಜ.20): ರಾಜ್ಯದ ಹೈ ಸೆಕ್ಯೂರಿಟಿ ಜೈಲುಗಳಲ್ಲಿ ಒಂದಾದ ಬೆಳಗಾವಿ ತಾಲೂಕಿನ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಖೈದಿಗಳ ನಡುವೆ ರಕ್ತಸಿಕ್ತ ಸಂಘರ್ಷ ನಡೆದಿದೆ. ಫೋನ್ ಕಾಲ್ ವಿಚಾರವಾಗಿ ಆರಂಭವಾದ ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿ, ಒಬ್ಬ ಖೈದಿಯ ಮೇಲೆ ಕಲ್ಲಿನಿಂದ ಜಜ್ಜಿ ಭೀಕರವಾಗಿ ಹಲ್ಲೆ ನಡೆಸಲಾಗಿದೆ.
ಫೋನ್ ಕಾಲ್ ವಿಚಾರಕ್ಕೆ ಹೊಡೆದಾಟ
ಜೈಲಿನಲ್ಲಿರುವ ಎಸ್‌ಟಿಡಿ (STD) ಫೋನ್ ಸೌಲಭ್ಯವನ್ನು ಬಳಸುವ ವಿಚಾರದಲ್ಲಿ ಖೈದಿಗಳ ನಡುವೆ ವಾಗ್ವಾದ ಆರಂಭವಾಗಿದೆ. ಫೋನ್ ಮಾಡುವ ಸಮಯದಲ್ಲಿ ಒಬ್ಬರಿಗೊಬ್ಬರು ಕಿರಿಕ್ ಮಾಡಿಕೊಂಡಿದ್ದು, ಈ ಸಣ್ಣ ಕಾರಣವೇ ಹಿಂಸಾತ್ಮಕ ರೂಪ ಪಡೆದಿದೆ. ಜೈಲಿನ ನಿಯಮಗಳನ್ನು ಗಾಳಿಗೆ ತೂರಿ ಖೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಅಪರಾಧಿ ಫಯಾನ್‌ನಿಂದ ಮಾರಣಾಂತಿಕ ಹಲ್ಲೆ
ಮಂಗಳೂರು ಮೂಲದ ಖೈದಿ ಫಯಾನ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಅತ್ಯಾ೧ಚಾರ ಪ್ರಕರಣದಲ್ಲಿ ಅಪರಾಧಿಯಾಗಿ ಹಿಂಡಲಗಾ ಜೈಲು ಸೇರಿರುವ ಫಯಾನ್, ಮುತ್ಯಾನಟ್ಟಿ ಗ್ರಾಮದ ಸುರೇಶ್ (32) ಎಂಬಾತನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಗಲಾಟೆಯ ಸಂದರ್ಭದಲ್ಲಿ ಫಯಾನ್ ಕಲ್ಲಿನಿಂದ ಸುರೇಶ್‌ನ ತಲೆ ಹಾಗೂ ಮೈಮೇಲೆ ಜಜ್ಜಿ ಗಂಭೀರ ಗಾಯಗೊಳಿಸಿದ್ದಾನೆ ಎಂದು ತಿಳಿದುಬಂದಿದೆ.
ಗಾಯಾಳು ಸುರೇಶ್ 'ಬಿಮ್ಸ್' ಆಸ್ಪತ್ರೆಗೆ ದಾಖಲು
ಹಲ್ಲೆಗೊಳಗಾದ ಸುರೇಶ್ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದವನಾಗಿದ್ದು, ಈತ ಕೂಡ ಅತ್ಯಾ೧ಚಾರ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ. ಕಲ್ಲಿನ ಏಟಿನಿಂದ ತೀವ್ರವಾಗಿ ರಕ್ತಸ್ರಾವಕ್ಕೊಳಗಾದ ಸುರೇಶ್‌ನನ್ನು ತಕ್ಷಣವೇ ಜೈಲು ಸಿಬ್ಬಂದಿ ಬೆಳಗಾವಿಯ ಬಿಮ್ಸ್ (BIMS) ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಘಟನೆ ನಡೆದಿದೆ.


