ಕರಡು ಪ್ರಸ್ತಾವ ತಯಾರಿಗೆ ವಕ್ಫ್ ಮಂಡಳಿ ಸಿದ್ಧತೆ
ಲಖನೌ: ದಶಕಗಳಿಂದ ಕಗ್ಗಂಟಾಗಿರುವ ಅಯೋಧ್ಯೆ ಬಾಬರಿ ಮಸೀದಿ-ರಾಮಜನ್ಮಭೂಮಿ ವಿವಾದ ಇತ್ಯರ್ಥಗೊಳ್ಳುವ ನಿರೀಕ್ಷೆಗಳು ಮತ್ತೊಮ್ಮೆ ಗರಿಗೆದರಿವೆ.
ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಬಾಬ್ರಿ ಮಸೀದಿ ಧ್ವಂಸಗೊಂಡ 25ನೇ ವರ್ಷಾಚರಣೆ ದಿನವಾದ ಡಿ.6ರೊಳಗೆ ಕರಡು ಪ್ರಸ್ತಾವವೊಂದನ್ನು ಸಿದ್ಧಪಡಿಸುವುದಾಗಿ ಉತ್ತರ ಪ್ರದೇಶ ಶಿಯಾ ಕೇಂದ್ರೀಯ ವಕ್ಫ್ ಮಂಡಳಿ ಹೇಳಿದೆ.
ಕರಡು ಪ್ರಸ್ತಾವ ಕುರಿತಂತೆ ಈಗಾಗಲೇ ಅಯೋಧ್ಯೆಯ ಶ್ರೀಗಳು ಹಾಗೂ ಮಹಾಂತರು ಮತ್ತು ಪ್ರಕರಣದ ಅರ್ಜಿದಾರರ ಜತೆ ಮಾತುಕತೆ ನಡೆಸಲಾಗಿದೆ.
ಇದೇ ತಿಂಗಳು ಅಯೋಧ್ಯೆಗೆ ತೆರಳಿ ಆ ಎಲ್ಲರನ್ನೂ ಭೇಟಿ ಮಾಡುತ್ತೇನೆ. ಡಿ.6ರೊಳಗೆ ಪರಸ್ಪರ ಒಪ್ಪಿಗೆಯೊಂದಿಗೆ ಕರಡು ಪ್ರಸ್ತಾವ ತಯಾರಿಸುವ ನಿರೀಕ್ಷೆ ಇದೆ ಎಂದು ಮಂಡಳಿ ಅಧ್ಯಕ್ಷ ವಾಸಿಂ ರಿಜ್ವಿ ತಿಳಿಸಿದ್ದಾರೆ.
ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕು. ಮಸೀದಿ ನಿರ್ಮಾಣ ಮಾಡಬೇಕಾಗಿಲ್ಲ. ಮುಸ್ಲಿಮರ ಬಾಹುಳ್ಯವಿರುವ ಪ್ರದೇಶದಲ್ಲಿ ಮಸೀದಿ ನಿರ್ಮಾಣ ಮಾಡಿಕೊಳ್ಳಬಹುದು. ವಿವಾದಿತ
ಜಾಗವನ್ನು ಮೂರು ಭಾಗ ಮಾಡುವುದು ಕೂಡ ಪ್ರಾಯೋಗಿಕವಾಗಿ ಸಾಧುವಲ್ಲ. ಶಾಂತಿಯುತ ಹಾಗೂ ದೀರ್ಘಾವಧಿ ಪರಿಹಾರವೂ ಅದಲ್ಲ ಎಂದಿದ್ದಾರೆ.
