‘ಶಾಸಕ ಸೇಲಾದ’ ಸಮಾವೇಶ ನಡೆಸಲು ಕಾಂಗ್ರೆಸ್‌ ತಯಾರಿ| ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ರಾರ‍ಯಲಿ ನಡೆಸಲು ನಿರ್ಧಾರ| ಎಂಟಿಬಿ ಕ್ಷೇತ್ರ ಹೊಸಕೋಟೆಯಲ್ಲಿ ಮೊದಲ ಸಮಾವೇಶ

ಬೆಂಗಳೂರು[ಆ.06]: ಪಕ್ಷಕ್ಕೆ ಕೈಕೊಟ್ಟು ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಪಾಠ ಕಲಿಸಲು ಸಜ್ಜಾಗಿರುವ ಕಾಂಗ್ರೆಸ್‌ ನಾಯಕತ್ವ, ಎಲ್ಲಾ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ‘ಶಾಸಕ ಸೇಲಾದ’ (ಮಾರಾಟವಾದರು) ಎಂಬ ಹೆಸರಿನಲ್ಲಿ ಸಮಾವೇಶಗಳನ್ನು ಆಯೋಜಿಸಲು ತೀರ್ಮಾನಿಸಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆದಿಯಾಗಿ ಕಾಂಗ್ರೆಸ್‌ನ ಎಲ್ಲಾ ಪ್ರಮುಖ ನಾಯಕರು ಪಾಲ್ಗೊಳ್ಳಲಿರುವ ಈ ಪ್ರತಿಭಟನಾ ಸಮಾವೇಶಗಳು ಕಾಂಗ್ರೆಸ್‌ನಿಂದ ಉಚ್ಛಾಟಿತರಾದ ಎಲ್ಲಾ ಅತೃಪ್ತ ಶಾಸಕರ ಕ್ಷೇತ್ರಗಳಲ್ಲಿ ನಡೆಯಲಿದ್ದು, ಮೊದಲ ಸಮಾವೇಶ ಆ.8ರಂದು ಹೊಸಕೋಟೆ (ಅನರ್ಹರಾದ ಎಂ.ಟಿ.ಬಿ. ನಾಗರಾಜ್‌ ಅವರ ಕ್ಷೇತ್ರ)ಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್‌ ಪಕ್ಷಕ್ಕೆ ಕೈಕೊಟ್ಟಅನರ್ಹ ಶಾಸಕರು ಬಿಜೆಪಿಗೆ ಸೇಲಾದರು ಎಂದು ಬಿಂಬಿಸುವುದು ಹಾಗೂ ಈ ಅನರ್ಹರ ಅಧಿಕಾರದ ಲಾಲಸೆಯಿಂದಾಗಿ ಉಪ ಚುನಾವಣೆ ಎದುರಾಗಿದ್ದು, ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡುವ ಉದ್ದೇಶ ಈ ಸಮಾವೇಶಗಳ ಆಯೋಜನೆಯ ಹಿಂದೆ ಇದೆ.

ಈ ಸಮಾವೇಶಗಳನ್ನು ಯಶಸ್ವಿಗೊಳಿಸುವ ಹೊಣೆಯನ್ನು ಪ್ರತಿ ಕ್ಷೇತ್ರದ ವೀಕ್ಷಕರಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.