ಚಂದ್ರಗ್ರಹಣ ದರ್ಶನ ಬಳಿಕ ಮತ್ತೊಂದು ಕೌತುಕ ಸೃಷ್ಟಿಗೆ ಕೆಲವೇ ಕ್ಷಣ ಬಾಕಿ ಇದೆ. ಒಂದು ಶತಮಾನದ ಬಳಿಕ ಪ್ರಥಮ ಸಂಪೂರ್ಣ ಸೂರ್ಯಗ್ರಹಣ ಇಂದು ಸಂಭವಿಸಲಿದೆ. ಎಲ್ಲೆಲ್ಲಿ ಸೂರ್ಯಗ್ರಹಣ ಸಂಭವಿಸಲಿದೆ. ಏನಿದರ ವಿಶೇಷತೆ. ಈ ಎಲ್ಲದರ ಸಂಪೂರ್ಣ ವಿವರ ಇಲ್ಲಿದೆ
ನವದೆಹಲಿ(ಆ.21): ಚಂದ್ರಗ್ರಹಣ ಕೌತುಕ ಬಳಿಕ ವಿಶ್ವದೆಲ್ಲೆಡೆ ಇಂದು ಸೂರ್ಯಗ್ರಹಣ ಸಂಭವಿಸುತ್ತಿದೆ. ಇಂದು ಉತ್ತರ ಅಮೆರಿಕ ಖಂಡದಲ್ಲಿ ಪ್ರಥಮ ಸಂಪೂರ್ಣ ಸೂರ್ಯಗ್ರಹಣ ಸಂಭವಿಸಲಿದೆ. ಇದನ್ನು ಗ್ರೇಟ್ ಅಮೆರಿಕನ್ ಸೋಲಾರ್ ಎಕ್ಲಿಪ್ಸ್ ಎಂದು ಬಣ್ಣಿಸಲಾಗಿದೆ. ಅಮಾವಾಸ್ಯೆಯಂದು ಕಾಣುವ ಸೂರ್ಯಗ್ರಹಣವು ಈ ಹಿಂದೆ 1918ರಲ್ಲಿ ಇಡೀ ಅಮೆರಿಕದಾದ್ಯಂತ ಗೋಚರಿಸಿತ್ತು. ಇದಾದ ಬಳಿಕ ಇದೇ ಮೊದಲ ಬಾರಿ ಇಡೀ ಅಮೆರಿಕದಲ್ಲಿ ಸೂರ್ಯನು ಹಗಲಲ್ಲೇ ಮರೆಯಾಗಲಿದ್ದಾನೆ. ಒಟ್ಟಾರೆ ಗ್ರಹಣದ ಅವಧಿ ಸುಮಾರು 3 ತಾಸಿನದ್ದಾಗಿದೆ. ಚಂದ್ರನು ಸೂರ್ಯನ ಮೇಲೆ ಬಂದಾಗ ಸೂರ್ಯಗ್ರಹಣ ಸುಮಾರು 3 ನಿಮಿಷಗಳ ಕಾಲ ಸಂಪೂರ್ಣ ಖಗ್ರಾಸ ಆಗಿ ಕಾಣಲಿದೆ.
ಅಮೆರಿಕದ 14 ರಾಜ್ಯಗಳಲ್ಲಿ ಸೂರ್ಯಗ್ರಹಣದ ಪೂರ್ಣಪ್ರಮಾಣ ಪರಿಣಾಮ ಕಂಡುಬರಲಿದ್ದು, ಸೂರ್ಯನ ಬೆಳಕೂ ಸ್ವಲ್ಪವೂ ಭೂಮಿಗೆ ಬರದಂತೆ ಚಂದ್ರ ತಡೆಯುತ್ತಾನೆ. ಇಡೀ ಅಮೆರಿಕ ಒಂದು ಬಾರಿ ಕತ್ತಲಾಗಲಿದೆ. ಒಟ್ಟು ಒಂದೂವರೆ ಗಂಟೆಗಳ ಗ್ರಹಣ ಅವಧಿ ಇದ್ದು, ಚಂದ್ರ ಸೂರ್ಯನನ್ನು ಸಂಪೂರ್ಣ ಆವರಿಸಲಿದ್ದಾನೆ. ಸೂರ್ಯ ಗ್ರಹಣ ವೇಳೆ ಪ್ರಾಣಿಗಳ ವರ್ತನೆಯಲ್ಲೂ ಬದಲಾವಣೆಯಾಗಲಿದೆ. ಚಂದ್ರ ಸೂರ್ಯನನ್ನು ಆವರಿಸುತ್ತಿದ್ದಂತೆ ಕತ್ತಲಾಗಿ ಪ್ರಾಣಿಗಳಿಗೆ ಗೊಂದಲವಾಗಲಿದೆ. ಬಹುತೇಕ ಪ್ರಾಣಿ ಪಕ್ಷಿಗಳು ಸಂಜೆ ತೋರಿಸುವ ವರ್ತನೆಗಳನ್ನು ತೋರಿಸಲಿವೆ. ಪಕ್ಷಿಗಳು ಗೂಡಿಗೆ ತೆರಳಲು ಸಿದ್ಧವಾದರೆ, ಚಿಲಿಪಿಲಿ ಗುಟ್ಟುವುದನ್ನೂ ನಿಲ್ಲಿಸಲಿವೆ.
ಈ ಅಪೂರ್ವ ವಿದ್ಯಮಾನದ ಅಂಗವಾಗಿ ಈ ಸಮಯದಲ್ಲೇ ಹಲವು ಜೋಡಿಗಳು ವಿವಾಹವಾಗಲು ನಿರ್ಧರಿಸಿದ್ರೆ, ಮಿಲಿಯನ್ ಏರ್ ವಿಮಾನಯಾನ ಸೂರ್ಯಗ್ರಹ ವೀಕ್ಷಣೆಗೆ 64 ಲಕ್ಷದ ವಿಶೇಷ ಪ್ಯಾಕೇಜ್ ಪ್ರಕಟಿಸಿದೆ.
ಭಾರತದಲ್ಲಿ ಗೋಚರಿಸಲ್ಲ ‘ಸೂರ್ಯ ಗ್ರಹಣ’
ಇನ್ನೂ ಬರಿಗಣ್ಣಿನಿಂದ ಖಗ್ರಾಸ ಸೂರ್ಯಗ್ರಹಣ ನೋಡಿದರೆ ಕಣ್ಣಿನ ರೆಟಿನಾ ಸುಟ್ಟು ಹೋಗಬಹುದು ಅಥವಾ ಕಣ್ಣಿನಲ್ಲಿ ಶಾಶ್ವತ ಅಂಧತ್ವ ಕಲೆಗಳು ಉಂಟಾಗಬಹುದು ಎಂದು ಪರಿಣಿತರು ಎಚ್ಚರಿಕೆ ನೀಡಿದ್ದಾರೆ. ಈ ಗ್ರಹಣ ವಿಶ್ವದ ಅನೇಕ ಭಾಗಗಳಲ್ಲಿ ಕಾಣಿಸದು. ಭಾರತದಲ್ಲೂ ಯಾವುದೇ ಗ್ರಹಣಾಚರಣೆ ಇರುವುದಿಲ್ಲ.
