Asianet Suvarna News Asianet Suvarna News

ತುತ್ತು ಅನ್ನ ಬೊಗಸೆ ಖುಷಿ ಅರಸಿ ಹಳ್ಳಿಗೆ ಬಂದ ಟೆಕ್ಕಿ

ಕೈತುಂಬ ಸಂಬಳ ಬಿಟ್ಟು, ಕೃಷಿಯಲ್ಲಿ ಕಷ್ಟಪಟ್ಟು ಖುಷಿಪಡುತ್ತಿರುವ ಕಜೆ ಕನಸುಗಾರನ ಯಶೋಗಾಥೆ. ನಾವು ಉಣ್ಣುವ ಅನ್ನವನ್ನು ನಾವೇ ಬೆಳೆಯಬೇಕು ಎಂಬ ಛಲ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್‌'ನನ್ನು ಅಪ್ಪಟ ಕೃಷಿಕನನ್ನಾಗಿಸಿದೆ.

software engineer inspirational Story

ಕೈ ತುಂಬಾ ಸಂಬಳ ಬರುವ ಕೆಲಸವಿದ್ದರೂ ಕೂಡ ಕೃಷಿಯಲ್ಲಿಯೇ ಸಾಧನೆ ಮಾಡಬೇಕು. ಸುತ್ತ ಮುತ್ತಲೂ ಇರುವ ಕೃಷಿಕರಿಗೆ ಸಾಧ್ಯವಾದಷ್ಟು ಮಟ್ಟದಲ್ಲಿ ನೆರವಾಗಬೇಕು ಎಂದುಕೊಂಡು ಕಜೆ ವೃಕ್ಷಾಲಯ ನಿರ್ಮಾಣ ಮಾಡಿದ ಸಾಹಸಿ ವಸಂತ ಕಜೆ. ಕೃಷಿಗೆ ಬರಬೇಕು ಎಂದುಕೊಂಡರೂ ಸಹಿತ ಒಂದೇ ಬಾರಿ ಧುಮುಕದೇ ಸತತ ಒಂಬತ್ತು ವರ್ಷಗಳ ಕಾಲ ಪೂರ್ವ ತಯಾರಿಯನ್ನು ಮಾಡಿಕೊಂಡು ಇಂದು ದೊಡ್ಡ ಮಟ್ಟದ ಕಾಯಕ ಭೂಮಿಯನ್ನು ನಿರ್ಮಾಣ ಮಾಡಿರುವ ಸಾಹಸಿಯ ಕತೆ ಇದು.

ಕನಸುಗಳನ್ನು ಹೊತ್ತು ಹಳ್ಳಿಯಿಂದ ಪಟ್ಟಣ ಸೇರಿದವರ ಕತೆಗಳನ್ನು ಕೇಳಿಯೇ ಇದ್ದೇವೆ. ಆದರೆ ಇದು ಕನಸುಗಳ ಬೆನ್ನತ್ತಿ ನಗರ ಜೀವನದಿಂದ ಹಳ್ಳಿಗೆ ವಾಪಸ್ಸಾದ ಕನಸುಗಾರನ ಸಾಹಸಗಾಥೆ. ಕೈತುಂಬ ಸಂಬಳ ಬಿಟ್ಟು, ಕೃಷಿಯಲ್ಲಿ ಕಷ್ಟಪಟ್ಟು ಖುಷಿಪಡುತ್ತಿರುವ ಕಜೆ ಕನಸುಗಾರನ ಯಶೋಗಾಥೆ. ನಾವು ಉಣ್ಣುವ ಅನ್ನವನ್ನು ನಾವೇ ಬೆಳೆಯಬೇಕು ಎಂಬ ಛಲ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್‌'ನನ್ನು ಅಪ್ಪಟ ಕೃಷಿಕನನ್ನಾಗಿಸಿದೆ. ಏನಿಲ್ಲ ಎಂಬ ನಿರಾಶಾವಾದದ ಬದಲು ಆಶಾವಾದಿಯಾಗಿ ಕಣಕ್ಕೆ ಇಳಿದು ಯಶಸ್ಸಿನ ಹಾದಿಯಲ್ಲಿದ್ದಾರೆ.

ಇವರು 35 ವರ್ಷದ ಯುವಕ ವಸಂತ ಕಜೆ. ಇವರ ಕಾರ್ಯಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಪುಟ್ಟ ಊರು ಕಜೆ. ಕಜೆ ಎಂದರೆ ಮೂರು ಬೆಳೆ ಬೆಳೆಯುವ ಭೂಮಿ ಎಂದರ್ಥ. ಮಣಿಪಾಲ ಎಂಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಓದಿ ಬೆಂಗಳೂರಿಗೆ ತೆರಳಿ ಸಾಫ್ಟವೇರ್ ಕಂಪನಿ ಸೇರಿದ ವಸಂತ್ ಅವರು ಸ್ವಲ್ಪ ವರ್ಷ ಕೆಲಸ ಮಾಡಿದರು. ಆದರೆ ಮನಸ್ಸು ಮಾತ್ರ ಕೃಷಿಯೆಡೆಗೆ ಹೊರಳುತ್ತಿತ್ತು. ಬಳಿಕ ಇನ್ಫೋಸಿಸ್ ಕಂಪನಿಯಲ್ಲಿ ಕೈ ತುಂಬ ಸಂಬಳದ ಕೆಲಸ ಹಿಡಿದರು. ಊರಿಗೆ ಸಮೀಪವೇ ಇರುವ ಮುಡಿಪು ಶಾಖೆಯಲ್ಲಿ ಕೆಲಸ ಮಾಡುತ್ತಿರುವಾಗಲೇ ರಜೆಯಲ್ಲಿ ಹಳ್ಳಿಯಲ್ಲಿ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದರು. ಇವರಿಗೆ ಕೃಷಿ ಜೀವನದಲ್ಲಿ ಎಷ್ಟು ಆಸಕ್ತಿ ಇತ್ತೋ ಅಷ್ಟೇ ಆತಂಕವೂ ಇತ್ತು. ಕೃಷಿಗೆ ಮರಳುವಾಗ ಮನೆಯಲ್ಲಿ ತಂದೆ-ತಾಯಿ, ಪತ್ನಿ ಆತಂಕ ವ್ಯಕ್ತಪಡಿದ್ದರು. ಸ್ವತಃ ವಸಂತ ಕಜೆಯವರಲ್ಲಿಯೂ ಏನಾಗಿಬಿಡುತ್ತದೋ ಎನ್ನುವ ಆತಂಕವಿತ್ತು. ಅದಕ್ಕೆಂದೇ ಕೆಲಸ ಮಾಡುತ್ತಿರುವಾಗಲೇ ಹಂತ ಹಂತವಾಗಿ ಕೃಷಿಯೆಡೆಗೆ ಹೆಜ್ಜೆಯಿಟ್ಟು, ಕೃಷಿ ಕ್ಷೇತ್ರಕ್ಕೆ ಭದ್ರ ಭೂಮಿಕೆ ಹಾಕಿಕೊಂಡಿದ್ದರು. ಬರೋಬ್ಬರಿ 9 ವರ್ಷಗಳ ಸಿದ್ಧತೆ ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದ ಕೃಷಿಗೆ ಧುಮುಕಿದ ವಸಂತ್ ಅವರಿಗೆ ಪೂರ್ಣ ಕೃಷಿಕನಾಗಿ ಒಂದೂವರೆ ವರ್ಷ ಸಂದಿದೆ.

ಕಜೆ ವೃಕ್ಷಾಲಯ: ಕಜೆ ವೃಕ್ಷಾಲಯವೆಂದರೆ ಅದೊಂದು ಜೀವ ವೈವಿಧ್ಯದ ಆಗರ. ಇಲ್ಲಿ ಸಹಸ್ರಾರು ಔಷಧೀಯ ಸಸ್ಯಗಳಿವೆ. ಕೆಲವು ಪ್ರಾಕೃತಿಕವಾಗಿಯೇ ಬೆಳೆದಿದ್ದರೆ, ಇನ್ನು ಕೆಲವನ್ನು ನೆಟ್ಟಿ ಬೆಳೆಸಿದ್ದಾರೆ ವಸಂತ್. ಇವುಗಳ ಅಧ್ಯಯನಕ್ಕೆಂದೇ ವಿದ್ಯಾರ್ಥಿಗಳು ತಂಡೋಪ ತಂಡವಾಗಿ ಭೇಟಿ ಕೊಡುತ್ತಿರುತ್ತಾರೆ.

ಸ್ವಾವಲಂಬಿ ಬದುಕು: ಮನೆಗೆ ಸಾಕಾಗುವಷ್ಟು ಭತ್ತ ಬೆಳೆಯಬೇಕೆಂಬ ಉದ್ದೇಶದಿಂದ ಭತ್ತ ಬೆಳೆಯಲು ಪ್ರಾರಂಭಿಸಿದ ಇವರು ನಂತರದಲ್ಲಿ ಅಗತ್ಯ ತರಕಾರಿ, ಹಣ್ಣು ಹಂಪಲುಗಳನ್ನೂ ಬೆಳೆದುಕೊಳ್ಳಲು ಶಕ್ತರಾಗಿದ್ದಾರೆ. ‘ನಾವುಣ್ಣುವ ಅನ್ನವನ್ನು ಬೆಳೆಯುವ ಜವಾಬ್ಧಾರಿಯನ್ನು ನಾವೇ ಹೊತ್ತರೆ ಜಗತ್ತಿನ ಮುಕ್ಕಾಲು ಭಾಗದಷ್ಟು ಸಮಸ್ಯೆಗೆ ಪರಿಹಾರ ದೊರೆತಂತೇ’ ಎನ್ನುವುದೇ ನನ್ನ ಧ್ಯೇಯ ಎಂದು ಹೇಳುವ ವಸಂತ ಕಜೆ ಹಾಗೇಯೇ ಬದುಕುತ್ತಿದ್ದಾರೆ ಕೂಡ.

ಅಡಕೆಯಲ್ಲೂ ಹೊಸತನ: 1.25 ಎಕರೆ ಜಾಗದಲ್ಲಿ 1,050 ಮಂಗಳ ಅಡಕೆ ಗಿಡಗಳನ್ನು ಒಂದು ಹೊಂಡದಲ್ಲಿ ಎರಡು ಗಿಡಗಳಂತೆ ನೆಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿರುವ ವಸಂತ್ ಯಶಸ್ಸು ದೊರೆತರೆ ಇತರ ರೈತರಿಗೆ ಶಿಫಾರಸ್ಸು ಮಾಡುವ ಆಲೋಚನೆಯಲ್ಲಿದ್ದಾರೆ. ತಮ್ಮ ಕ್ಷೇತ್ರದಲ್ಲಿ ತರಾವರಿ ತರಕಾರಿಯನ್ನೂ ಬೆಳೆದು ಅದರಲ್ಲೂ ಸ್ವಾವಲಂಬನೆ ಕಂಡಿದ್ದಾರೆ ಕಜೆ. ಅಲಸಂದೆ, ಬೆಂಡೆ, ಸೌತೆ, ನುಗ್ಗೆ, ತೊಂಡೆ ಹೀಗೆ ವಿವಿಧ ತರಕಾರಿ ಬೆಳೆಯುವುದರೊಂದಿಗೆ ಎರಡು ಮೂರು ಮಿಶ್ರ ತಳಿ ಹಸುಗಳನ್ನು ಸಾಕಿದ್ದು, ಹೈನುಗಾರಿಕೆಗೂ ಕೈ ಹಾಕಿದ್ದಾರೆ.

ಸಾಹಿತ್ಯ ಕೃಷಿ: ವಸಂತ ಕಜೆ ಅವರದು ಬಹುಮುಖ ಪ್ರತಿಭೆ. ಕೃಷಿಯಲ್ಲಿ ಪ್ರಗತಿ ಸಾಧಿಸಬೇಕು ಎನ್ನುವವರಿಗಾಗಿ ಸಾಧ್ಯವಾದ ಎಲ್ಲಾ ರೀತಿಯ ನೆರವು ಒದಗಿಸುವ ಇವರು, ತಮ್ಮ ಕೃಷಿ ಅನುಭವಗಳು, ವೈಜ್ಞಾನಿಕ ಬೆಳೆ ಪದ್ಧತಿಗಳ ಬಗ್ಗೆ ಅಂಕಣಗಳನ್ನು ಬರೆದು ಪ್ರಕಟಿಸಿದ್ದಾರೆ. ಕೃಷಿ ಸಾಹಿತ್ಯವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನೂ ರೂಪಿಸುತ್ತಿದ್ದಾರೆ. ಭೂಮಿಯ ಮಾಲೀಕತ್ವದ ಬಗ್ಗೆ ಮೋಹ ಹೆಚ್ಚಾದರೆ ಸಾಲದು. ಅದನ್ನು ಮಮತೆಯಿಂದಲೂ ಕಾಣಬೇಕು. ಪ್ರಕೃತಿಯನ್ನು ಪ್ರಜ್ಞಾಪೂರ್ವಕವಾಗಿ ಅನುಭವಿಸಬೇಕು ಎನ್ನುವ ಕೃಷಿ ಕನಸುಗಾರ ವಸಂತ ಕಜೆ ಅವರಿಗೆ ನಿಮ್ಮ ಕಡೆಯಿಂದಲೂ ಒಂದು ಹಾರೈಕೆ ಇರಲಿ ದೂ. 9008666266

ವರದಿ-ರಾಘವೇಂದ್ರ ಅಗ್ನಿಹೋತ್ರಿ

Follow Us:
Download App:
  • android
  • ios