- ಕರ್ನಾಟಕ ವಿಧಾನಸಭಾ ಚುನಾವಣೆ ಎದುರಿಸಲು ರಮ್ಯಾ ನೇತೃತ್ವದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ರೆಡಿ- ಎನ್‌ಎಸ್‌ಯುಐ ಕಾರ್ಯಕರ್ತರೊಂದಿಗೆ ಸಭೆ ನಡೆಸಿ, ಮುಂದಿನ ರೂಪು ರೇಷೆಗಳ ಬಗ್ಗೆ ಚರ್ಚಿಸಿದ ರಮ್ಯಾ ಮೇಡಂ.
ಬೆಂಗಳೂರು: ಎಐಸಿಸಿ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿರುವ ರಮ್ಯಾ ರಾಜ್ಯ ವಿಧಾನಸಭಾ ಚುನಾವಣೆಗೆ ತಮ್ಮ ತಂಡವನ್ನು ಸನ್ನದ್ಧಗೊಳಿಸುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಉತ್ತಮವಾಗಿ ಗುರುತಿಸಿಕೊಳ್ಳುವಂತೆ ಮಾಡಿದ ರಮ್ಯಾ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದ್ದು, ರಾಜ್ಯ ಚುನಾವಣೆಯಲ್ಲೂ ಈ ಪ್ರಭಾವ ಮುಂದುವರಿಸುವ ತಂತ್ರಕ್ಕೆ ಮುಂದಾಗಿದ್ದಾರೆ.
ಚುನಾವಣಾ ಸಂದರ್ಭದಲ್ಲಿ We Support Congress ಎಂಬ ಗ್ರೂಪ್ ರಚಿಸಿಕೊಂಡು, ಸಾಮಾಜಿಕ ಜಾಲತಾಣದ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವಂತೆ ಮಾಡಲು ಈಗಾಗಲೇ ಎನ್ಎಸ್ಯುಐ ಕಾರ್ಯಕರ್ತರಿಗೆ ಈ ಮಾಜಿ ಸಂಸದೆ ಪಾಠ ಮಾಡಿದ್ದಾರೆ.
ನಿನ್ನೆ ದೆಹಲಿಯಲ್ಲಿ ತಮ್ಮ ತಂಡದ ಸಭೆ ನಡೆಸಿ, ಪ್ರತಿ ದಿನ ತಪ್ಪದೇ ರಾಜ್ಯ ಸರಕಾರದ ಎಲ್ಲ ಸಾಧನೆಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಯೊಬ್ಬರಿಗೂ ತಲುಪಿಸುವಂತೆ ಮಾಡಬೇಕೆಂದು ಆದೇಶಿಸಿರುವ ರಮ್ಯಾ, ಬಿಜೆಪಿ ಹಾಗೂ ಜೆಡಿಎಸ್ ಹುಳುಕುಗಳನ್ನು ಹುಡುಕಿ, ಜನರಿಗೆ ಹೇಳಬೇಕೆಂದು ಹೇಳಿದ್ದಾರೆ.
ಅಷ್ಟೇ ಅಲ್ಲ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ನೇತೃತ್ವ ಸರಕಾರದ ವಿರುದ್ಧ ಆಗುವ ಟ್ರೋಲ್ಗಳನ್ನು ಹೆಚ್ಚು ಜನರಿಗೆ ತಲುಪದಂತೆಯೂ ವ್ಯವಸ್ಥೆ ಮಾಡಿಕೊಳ್ಳುವ ಬಗ್ಗೆ ತನ್ನ ಟೀಂ ಸದಸ್ಯರಿಗೆ ರಮ್ಯಾ ಸೂಚಿಸಿದ್ದಾರೆ.
