ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಖ್ಯಾತ ಚಿಂತಕರು, ಸಾಹಿತಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದರು. ಹೋರಾಟಕ್ಕೆ ಕಿಚ್ಚು ಹೊತ್ತಿಸಿದರು.
ಬೆಂಗಳೂರು (ಸೆ.12): ಗೌರಿ ಲಂಕೇಶ್ ಹತ್ಯೆ ಖಂಡಿಸಿ ಇಂದು ಸೆಂಟ್ರಲ್ ಕಾಲೇಜಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಖ್ಯಾತ ಚಿಂತಕರು, ಸಾಹಿತಿಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಹೋರಾಟಕ್ಕೆ ಇನ್ನಷ್ಟು ಬಲ ತುಂಬಿದರು. ಹೋರಾಟಕ್ಕೆ ಕಿಚ್ಚು ಹೊತ್ತಿಸಿದರು.
ಸಾಮಾಜಿಕ ಕಾರ್ಯಕರ್ತ ಹಾಗೂ ಗೌರಿ ಲಂಕೇಶ್ ದತ್ತುಪುತ್ರ ಜಿಗ್ನೇಶ್ ಮೇವಾನಿ ಮಾತನಾಡುತ್ತಾ; ಎಂ ಎಂ ಕಲಬುರ್ಗಿ ಹಂತಕರು ಎಲ್ಲಿ ಎಂದು ಗೌರಿ ಕೇಳಿದ್ದಕ್ಕೆ ಉತ್ತರ ಕೊಡಲಾಗದ ಕೇಂದ್ರ ಸರ್ಕಾರ ಆಕೆಯನ್ನು ಕೊಂದಿದೆ. ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ನಡೆಸೋಣ. ಸಂಗಾತಿಗಳೇ ನಾವೆಲ್ಲರೂ ದೆಹಲಿಗೆ ಪ್ರಯಾಣಿಸೋಣ. ಮೋಹನ್ ಭಾಗವತ್ ಮತ್ತು ಮೋದಿಯ ಎದೆ ಮೇಲೆ ಕುಳಿತು ಹೋರಾಡೋಣ. ಗುಜರಾತ್’ನ ಗಾಂಧೀನಗರಕ್ಕೂ ಹೋಗಿ ಮೋದಿ ತಾಯಿಯನ್ನು ಭೇಟಿ ಮಾಡಿ ಇಂಥ ನಾಲಾಯಕ್ ಪುತ್ರನಿಗೆ ಏಕೆ ಜನ್ಮ ಕೊಟ್ರಿ ಎಂದು ಕೇಳೋಣ. ಈ ಮೋದಿ ಭಾರತದ ಹೆಸರನ್ನು ಹಾಳು ಮಾಡುತ್ತಿದ್ದಾನೆ. ನಮ್ಮ ದೇಶದ ಪ್ರಧಾನಿ ನೀಚ ಮನಸ್ಸಿನ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಗೌರಿಯ ಪುತ್ರನಾಗಿ ತಮ್ಮೆಲ್ಲರ ಸಮಕ್ಷಮದಲ್ಲಿ ಹೇಳುತ್ತಿದ್ದೇನೆ. ನನ್ನ ಕೊನೆ ಉಸಿರಿರುವವರೆಗೂ ನಾನು ಹಿಂದೂ ಸಂಸ್ಥೆಯಂತಿರುವ ಭಾರತವನ್ನು ನಿರ್ಮಾಣ ಮಾಡಲು ಬಿಡುವುದಿಲ್ಲ. ಬದಲಾಗಿ ಪ್ರಗತಿಪರ, ಜಾತ್ಯಾತೀತ ಭಾರತವನ್ನು ಮಾಡುತ್ತೇನೆ ಎಂದು ಮೇವಾನಿ ಕಿಡಿಕಾರಿದ್ದಾರೆ.
ಮಗಳನ್ನು ಉಳಿಸಿ, ಮಗಳನ್ನು ಓದಿಸಿ, ಒಂದುವೇಳೆ ಮಗಳು ಹೆಚ್ಚು ಹೆಚ್ಚು ಓದಿಕೊಂಡು ಜಾಸ್ತಿ ಮಾತನಾಡಿದರೆ ಅವಳಿಗೆ ಗುಂಡು ಹಾಕಿ ಎಂದು ಪತ್ರಕರ್ತೆ ಸಾಗರಿಕಾ ಘೋಷ್ ವ್ಯಂಗ್ಯವಾಡಿದ್ದಾರೆ.
