ಮಹಾರಾಷ್ಟ್ರ[ಫೆ.01]: ಇಲ್ಲೊಂದು ಶಾಲೆಯಲ್ಲಿ ನಡೆದ ಘಟನೆಯು ಮಕ್ಕಳು ಸೇರಿದಂತೆ ಶಿಕ್ಷಕರನ್ನು ಭಯಭೀತಗೊಳಿಸಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಅನ್ನದಾಸೋಹದಡಿಯಲ್ಲಿ ಮಕ್ಕಳಿಗೆ ಬಡಿಸಲಾದ ಊಟದಲ್ಲಿ ಹಾವು ಪತ್ತೆಯಾಗಿದೆ. 

ಬುಧವಾರದಂದು ಮಹಾರಾಷ್ಟ್ರದ ಗರ್ ಗವಾನ್ ಜಿಲ್ಲೆಯ ಪರಿಷತ್ ಪ್ರೈಮರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಒಂದನೇ ತರಗರತಿಯಿಂದ 5ನೇ ತರಗತಿಯನ್ನು ಇಲ್ಲಿ ನಡೆಸಲಾಗುತ್ತಿದ್ದು 80ಕ್ಕೂ ಅಧಿಕ ಮಂದಿ ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಎಂದಿನಂತೆ ಮಕ್ಕಳಿಗೆ ಮಧ್ಯಾಹ್ನದ ಊಟ ಬಡಿಸಲಾಗುತ್ತಿದ್ದು, ಈ ವೇಳೆ ಇದ್ದಕ್ಕಿದ್ದಂತೆಯೇ ಊಟದ ಪಾತ್ರೆಯಲ್ಲಿ ಹಾವು ಪತ್ತೆಯಾಗಿದೆ. ಇದನ್ನು ಕಂಡ ಪ್ರತಿಯೊಬ್ಬರೂ ಬೆಚ್ಚಿ ಬಿದ್ದಿದ್ದಾರೆ. 

ಘಟನೆಯ ಬಳಿಕ ಪ್ರತಿಕ್ರಿಯಿಸಿದ ಶಿಕ್ಷಣಾಧಿಕಾರಿ 'ಊಟದಲ್ಲಿ ಹಾವು ಪತ್ತೆಯಾದ ಬಳಿಕ ಮಕ್ಕಳಿಗೆ ಊಟ ಬಡಿಸುವುದನ್ನು ನಿಲ್ಲಿಸಿದ್ದೇವೆ. ಹೀಗಾಗಿ ಅಧಿಕ ಮಕ್ಕಳು ಊಟ ಸಿಗದೆ ಹಸಿವಿನಿಂದ ಪರದಾಡಿದ್ದಾರೆ. ಕೆಲ ಮಕ್ಕಳು ಹಾವು ನೋಡಿ ಓಡಿ ಹೋದರೆ, ಶಿಕ್ಷಕರು ಭಯ ಬಿದ್ದಿದ್ದಾರೆ' ಎಂದಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ. ಇನ್ನು ಮಧ್ಯಾಹ್ನದ ಊಟ ತಯಾರಿಸುವ ಜವಾಬ್ದಾರಿಯನ್ನು ಸ್ಥಳೀಯರಿಗೆ ವಹಿಸಲಾಗಿತ್ತೆನ್ನಲಾಗಿದೆ.