ಉಡುಪಿ (ಮಾ. 03):  ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ ಮತ ಚಲಾಯಿಸುವಂತೆ ಜನತೆಗೆ ಮನವಿ ಮಾಡುವುದಕ್ಕಾಗಿ ಮಾ.3ರಂದು ಮಲ್ಪೆ ತೀರದಲ್ಲಿ ನಮೋ ಭಾರತ್‌ ಸಂಘಟನೆಯಿಂದ ಪಾಂಚಜನ್ಯ ಸಮಾವೇಶ ಆಯೋಜಿಸಲಾಗಿದೆ. 

ಸಂಜೆ 5.30ಕ್ಕೆ ಆರಂಭವಾಗುವ ಈ ಸಮಾವೇಶದಲ್ಲಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಮತ್ತು ಬಿಜೆಪಿಯ ರಾಷ್ಟ್ರೀಯ ವಕ್ತಾರರಾದ ಮೀನಾಕ್ಷಿ ಲೇಖಿ ಮುಖ್ಯ ಅತಿಥಿಗಳಾಗಿರುವರು. ಸಮಾವೇಶಕ್ಕೂ ಮೊದಲು ಸಂಜೆ 4 ಗಂಟೆಗೆ ಜಿಲ್ಲೆಯ ವಿವಿಧ ಭಾಗಗಳಿಂದ ಮಲ್ಪೆಯವರೆಗೆ ಬೈಕ್‌ ರ್ಯಾಲಿ ನಡೆಯಲಿದೆ.

ಇದೇ ವೇಳೆಯಲ್ಲಿ ಮಲ್ಪೆ ವೇದಿಕೆಯಲ್ಲಿ ಸ್ವರ ಭಾರತಿ ಎಂಬ ದೇಶಭಕ್ತಿ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ. 5 ಗಂಟೆಗೆ ವಡಬಾಂಡೇಶ್ವರಕ್ಕೆ ಆಗಮಿಸಲಿರುವ ಅತಿಥಿಗಳನ್ನು ಪಾದಯಾತ್ರೆಯ ಮೂಲಕ ಮಲ್ಪೆ ತೀರಕ್ಕೆ ಬರಮಾಡಿಕೊಳ್ಳಲಾಗುವುದು. ನಂತರ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಮಾವೇಶದಲ್ಲಿ ಸುಮಾರು 20 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

ನಮೋ ಭಾರತ್‌ ರಾಜಕೀಯೇತರ ಸಂಘಟನೆಯಾಗಿದ್ದು, ಪ್ರಸಕ್ತ ಪರಿಸ್ಥಿತಿಯನ್ನು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವುದು ದೇಶಕ್ಕೆ ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮೋ ಭಾರತ್‌ ಸಂಘಟನೆ ಮಿಶನ್‌ 365 ಪ್ಲಸ್‌ ಎಂಬ ಅಭಿಯಾನವನ್ನು ನಡೆಸುತ್ತಿದ್ದು, ಅದರಂಗವಾಗಿ ಈ ಸಮಾವೇಶ ನಡೆಸಲಾಗುತ್ತಿದೆ ಎಂದು ಸಂಚಾಲಕ ಶಶಾಂಕ್‌ ಶಿವತ್ತಾಯ ತಿಳಿಸಿದ್ದಾರೆ.