ಸಿಗರೇಟ್ ಸೇವನೆ ಜೇಬಿಗೂ ಹಾನಿಕರ

Smokers Decreased In Bengaluru
Highlights

ರಾಜ್ಯದಲ್ಲಿ ತಂಬಾಕು ಬಳಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. 2009 - 10ರಲ್ಲಿ ಶೇ. 28.2ರಷ್ಟಿದ್ದ ಬಳಕೆ ಈಗ ಶೇ. 22.8 ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ತಂಬಾಕು ಸೇವನೆ ಆರಂಭಿಸುವವರ ವಯೋಮಾನದಲ್ಲಿ ಹೆಚ್ಚಳ ಕಂಡು ಬಂದಿದೆ.

ಬೆಂಗಳೂರು (ಜ.12): ರಾಜ್ಯದಲ್ಲಿ ತಂಬಾಕು ಬಳಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. 2009 - 10ರಲ್ಲಿ ಶೇ. 28.2ರಷ್ಟಿದ್ದ ಬಳಕೆ ಈಗ ಶೇ. 22.8 ಕ್ಕೆ ಇಳಿಕೆಯಾಗಿದೆ. ಇದೇ ವೇಳೆ ತಂಬಾಕು ಸೇವನೆ ಆರಂಭಿಸುವವರ ವಯೋಮಾನದಲ್ಲಿ ಹೆಚ್ಚಳ ಕಂಡು ಬಂದಿದೆ.

ಗ್ಲೋಬಲ್ ಅಡಲ್ಟ್ ಟೊಬ್ಯಾಕೋ ಸರ್ವೆ (ಗ್ಯಾಟ್ಸ್) ಕಳೆದ 2016 ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ ತಂಬಾಕು ಸೇವನೆ ಮಾಡುವವರ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ವ್ಯಕ್ತವಾಗಿದೆ. 15 ಮತ್ತು ಅದಕ್ಕಿಂತ ಹೆಚ್ಚು ವಯೋಮಾನದ 1311 ಪುರುಷರು ಮತ್ತು 1403 ಮಹಿಳೆಯರನ್ನು ವೈಯಕ್ತಿಕ ಸಂದರ್ಶನದ ಮೂಲಕ ಅಭಿಪ್ರಾಯ ಸಂಗ್ರಹಿಸಿ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿದ್ದು, ತಂಬಾಕು ಬಳಕೆ ಕುರಿತಂತೆ ಹಲವು ಕುತೂಹಲಕರ ಅಂಶಗಳು ಸಮೀಕ್ಷೆಯಲ್ಲಿ ಕಂಡು ಬಂದಿದೆ. ಈ ಸಮೀಕ್ಷೆ ಪ್ರಕಾರ ತಂಬಾಕಿನಿಂದ ಆರೋಗ್ಯದ ಮೇಲೆ ಆಗುವ ಹಾನಿಯ ಬಗ್ಗೆ ಅರಿವು, ತಂಬಾಕು ಬಳಕೆಯ ಮೇಲೆ ನಿಯಂತ್ರಣ ಸೇರಿದಂತೆ ವಿವಿಧ ಕ್ರಮಗಳಿಂದಾಗಿ ರಾಜ್ಯದಲ್ಲಿ ತಂಬಾಕು ಬಳಕೆದಾರ ಪ್ರಮಾಣ ಕಡಿಮೆಯಾಗಿದೆ.

ಶೇ.7ರಷ್ಟು ಮಹಿಳೆಯರು ಧಂ ಹೊಡೀತಾರೆ: ರಾಜ್ಯದಲ್ಲಿ ಶೇ.16.8ರಷ್ಟು ಪುರುಷರು, ಶೇ.7ರಷ್ಟು ಮಹಿಳೆಯರು ಧೂಮಪಾನಿಗಳಾಗಿದ್ದರೆ, ಶೇ.22.2ರಷ್ಟು ಪುರುಷರು, ಶೇ.10.3ರಷ್ಟು ಮಹಿಳೆಯರು ತಂಬಾಕು ಜಗಿಯುವ ಚಟ ಹೊಂದಿದ್ದಾರೆ. ನಿತ್ಯ ಸಿಗರೇಟು ಸೇದುವವರು ತಿಂಗಳಿಗೆ ಸರಾಸರಿ 642 ರು. ಹಾಗೂ ಬೀಡಿ ಸೇದುವವರು 211 ರು. ವೆಚ್ಚ ಮಾಡುತ್ತಾರೆ.

ಧೂಮಪಾನ ಮಾಡಲು ಕೆಲವರು ಸರಾಸರಿ ನಿತ್ಯ ಒಂದು ಗಂಟೆಗಿಂತ ಹೆಚ್ಚು ಕಾಲ ವ್ಯಯ ಮಾಡಿದರೆ, ಇನ್ನೂ ಕೆಲವರು ಕೇವಲ ಐದು ನಿಮಿಷ ವ್ಯಯ ಮಾಡುತ್ತಾರೆ. ರಾಜ್ಯದಲ್ಲಿ ಶೇ. 35.2 ರಷ್ಟು ಪುರುಷರು ಮತ್ತು ಶೇ. 10.3 ರಷ್ಟು ಮಹಿಳೆಯರು ಹಾಗೂ ಶೇ. 22.8 ರಷ್ಟು ವಯಸ್ಕರು ಧೂಮಪಾನದ ಜತೆಗೆ ಜಗಿಯುವ ತಂಬಾಕು ಸೇವನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿಗರೇಟು ಸೇದುವವರಿಗಿಂತ ಬೀಡಿ ಸೇದುವವರ ಸಂಖ್ಯೆಯೇ ಹೆಚ್ಚಿದೆ. ಸಿಗರೇಟ್ ಬಳಸುವವರು ಶೇ. 4.4 ಇದ್ದರೆ ಬೀಡಿ ಸೇದುವವರು ಶೇ. 5.9ರಷ್ಟಿದೆ. ಸ್ವಾರಸ್ಯವೆಂದರೆ ಸಿಗರೇಟು ಸೇದುವ ಮಹಿಳೆಯರು ಶೇ. 7ರಷ್ಟಿದ್ದರೆ, ಬೀಡಿ ಸೇದುವ ಮಹಿಳೆಯರು ಮಾತ್ರ ಇಲ್ಲ.

ಪುರುಷರೇ ಮುಂದು: ಧೂಮಪಾನ ಹೊರತುಪಡಿಸಿ ಗುಟ್ಕಾ, ಎಲೆ ಅಡಕೆ ಜೊತೆಗೆ, ಖೈನಿ, ಪಾನ್ ಮಸಾಲ ಮೂಲಕ ತಂಬಾಕು ಬಳಸುವವರಲ್ಲಿ ಪುರುಷರೇ ಮುಂದಿದ್ದಾರೆ. ಪುರುಷರು ಶೇ. 22.2 ಮಹಿಳೆಯರು ಶೇ. 10.3 ತಂಬಾಕು ಬಳಸುತ್ತಾರೆ. ಅಡಕೆ ಜೊತೆ ತಂಬಾಕು ಸೇವಿಸುವ ಪುರುಷರು ಶೇ. 10.8, ಮಹಿಳೆ ಯರು ಶೇ. 8.0 ರಷ್ಟಿದ್ದಾರೆ. ಇನ್ನೂ ಖೈನಿ ಬಳಸುವ ಪುರುಷರು ಶೇ. 4.3 ರಷ್ಟಿದ್ದರೆ, ಮಹಿಳೆಯರು ಶೇ. 2.3 ರಷ್ಟಿದ್ದಾರೆ. ಗುಟ್ಕಾ ಬಳಕೆಯಲ್ಲಿ ಶೇ. 10.3 ಪುರುಷರು, ಶೇ. 1.3 ರಷ್ಟು ಮಹಿಳೆಯರಿದ್ದಾರೆ.

ಧೂಮಪಾನ ಗ್ರಾಮೀಣದಲ್ಲಿ ಹೆಚ್ಚು: ಆರೋಗ್ಯದ ಬಗ್ಗೆ ಜಾಗೃತಿ, ತಂಬಾಕು ಬಳಕೆ ಬಗ್ಗೆ ನಿಯಂತ್ರಣ ಕ್ರಮ ಇತ್ಯಾದಿಗಳ ಪರಿಣಾಮವಾಗಿ ಧೂಮಪಾನ ನಗರ ಪ್ರದೇಶದಲ್ಲಿ ಕಡಿಮೆ ಇರುವುದು ಕಂಡು ಬಂದಿದೆ. ಗುಟ್ಕಾ ಬಳಕೆ ನಗರ ಪ್ರದೇಶದಲ್ಲಿ ಶೇ. 6.0ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 5.8 ರಷ್ಟಿದೆ. ಖೈನಿ ಬಳಕೆ ನಗರದಲ್ಲಿ ಶೇ. 2.0ರಷ್ಟು, ಗ್ರಾಮಾಂತರದಲ್ಲಿ ಶೇ. 4.3 ರಷ್ಟಿದೆ. ಬಾಯಲ್ಲಿ ತಂಬಾಕು ಇಟ್ಟುಕೊಳ್ಳುವವರ ಸಂಖ್ಯೆ ನಗರದಲ್ಲಿ ಶೇ. 0.9 ಹಾಗೂ ಗ್ರಾಮಾಂತರದಲ್ಲಿ ಶೇ. 1.6 ರಷ್ಟಿದೆ.

ಮನೆಯಲ್ಲಿ ಸೆಕೆಂಡ್ ಹ್ಯಾಂಡ್ ಸ್ಮೋಕ್ ಹೆಚ್ಚು: ಮನೆಯಲ್ಲಿ ಧೂಮಪಾನ ಮಾಡುವ ವಯಸ್ಕರು ಶೇ. 25.2ರಷ್ಟಿದ್ದಾರೆ, ಈ ಪೈಕಿ ಪುರುಷರು ಶೇ. 21.7ರಷ್ಟು ಹಾಗೂ ಶೇ. 28.7 ರಷ್ಟು ಮಹಿಳೆಯರು ಇರುವುದು ಸಮೀಕ್ಷೆಯಲ್ಲಿ ಕಂಡು ಬಂದಿದೆ, ಕೆಲಸ ಮಾಡುವ ಸ್ಥಳದಲ್ಲಿ ಧೂಮಪಾನ ಮಾಡುವ ಪುರುಷರು ಶೇ. 26.4 ಹಾಗೂ ಶೇ. 21.0 ರಷ್ಟಿದ್ದರೆ, ಶೇ, 32.5 ರಷ್ಟು ವಯಸ್ಕರು ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಾರೆ. ಉಳಿದಂತೆ ಶೇ. 3.4 ರಷ್ಟು ಸರ್ಕಾರಿ ಕಚೇರಿಗಳಲ್ಲಿ, ಶೇ. 2.6 ರಷ್ಟು ಖಾಸಗಿ ಕಚೇರಿಗಳಲ್ಲಿ, ಶೇ. 14ರಷ್ಟು ರೆಸ್ಟೋರೆಂಟ್‌ಗಳಲ್ಲಿ, ಶೇ. ೯.೬ರಷ್ಟು ಸಾರ್ವಜನಿಕ ಸಾರಿಗೆಯಲ್ಲಿ, ಶೇ. 3.2 ನೈಟ್ ಕ್ಲಬ್/ಬಾರ್‌ಗಳಲ್ಲಿ ಹಾಗೂ ಶೇ. 7.5 ರಷ್ಟು ಸಿನಿಮಾ ಹಾಲ್‌ನಲ್ಲಿ ಧೂಮಪಾನ ಮಾಡುತ್ತಾರೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ.

loader