ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ. ಕೃಷ್ಣ ಹಾಗೂ ಎಚ್.ಡಿ ಕುಮಾರಸ್ವಾಮಿ ಅವರ ವಿರುದ್ಧದ ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂಕೋರ್ಟ್ ಮುಂದುವರಿಸಿದೆ. ಹೀಗಾಗಿ ಈ ಇಬ್ಬರು ನಾಯಕರು ಮತ್ತೊಮ್ಮೆ ನಿರಾಳರಾಗಿದ್ದಾರೆ.

ಮಾಜಿ ಸಿಎಂಗಳಾದ ಎಸ್ ಎಂ ಕೃಷ್ಣ , ಹೆಚ್.ಡಿ ಕುಮಾರಸ್ವಾಮಿ, ಧರಂ ಸಿಂಗ್ ಹಾಗೂ ಐಎಎಸ್ ಅಧಿಕಾರಿಗಳಾದ ಅಶ್ವಥ್, ಕೆ.ಶ್ರೀನಿವಾಸ್ ಸೇರಿ ೧೪ ಮಂದಿ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಕುರಿತು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಹಾಂ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಸಂಬಂಧ ಎಸ್. ಎಂ. ಕೃಷ್ಣ, ಕುಮಾರಸ್ವಾಮಿ ಹಾಗೂ ಐಎಎಸ್ ಅಧಿಕಾರಿಗಳಾದ ಅಶ್ವಥ್, ಕೆ ಶ್ರೀನಿವಾಸ್ ಮೂರ್ತಿ ಅವರು ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಈ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಹಾಗೂ ಇತರೆ ಅಧಿಕಾರಿಗಳು ಮೇಲ್ಮನವಿ ಸಲ್ಲಿಸಿರಲಿಲ್ಲ.

ಹೀಗಾಗಿ ಎಸ್. ಎಂ. ಕೃಷ್ಣ, ಹಾಗೂ ಹೆಚ್. ಡಿ. ಕುಮಾರಸ್ವಾಮಿ ಸೇರಿ ನಾಲ್ವರ ವಿರುದ್ಧದ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಮುಂದುವರಿಸಿದೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಸೇರಿ ಇತರೆ ಅಧಿಕಾರಿಗಳ ವಿರುದ್ಧ ತನಿಖೆ ಮುಂದುವರಿಸಲು ಸುಪ್ರೀಂಕೋರ್ಟ್ ಆದೇಶಿಸಿ ವಿಚಾರಣೆಯನ್ನು ಜನವರಿ ೨ನೇ ವಾರಕ್ಕೆ ಮುಂದೂಡಿತು.