ಬೆಂಗಳೂರು :  ನಮ್ಮ ಮೆಟ್ರೋದ ಎಂ.ಜಿ ರಸ್ತೆ-ಬೈಯ್ಯಪ್ಪನಹಳ್ಳಿ ಮಾರ್ಗದ(ನೇರಳೆ ಮಾರ್ಗ) ಟ್ರಿನಿಟಿ ನಿಲ್ದಾಣದ ಬಳಿಯ ಎತ್ತರಿಸಿದ ಮಾರ್ಗದಲ್ಲಿ ಬಿರುಕು ಕಂಡು ಬಂದಿದ್ದು ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು.

ಕಳಪೆ ಗುಣ ಮಟ್ಟದ ಸಿಮೆಂಟ್‌ ಬಳಸಿರುವ ಪರಿಣಾಮ ಈ ಸಮಸ್ಯೆ ಕಂಡು ಬಂದಿದ್ದು, ನಮ್ಮ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗಿ 8 ವರ್ಷದಲ್ಲಿ ಇದೇ ಮೊದಲ ಬಾರಿ ಸಂಚಾರಕ್ಕೆ ಅಡ್ಡಿಯಾಗಿದೆ.

ಟ್ರಿನಿಟಿ ನಿಲ್ದಾಣದ ಪಿಲ್ಲರ್‌ ಸಂಖ್ಯೆ 155ರ ಮೇಲ್ಭಾಗದಲ್ಲಿ ಹನಿಕೂಂಬಿಂಗ್‌(ಕಾಂಕ್ರೀಟ್‌ನಲ್ಲಿ ಜೇನುಗೂಡು ಮಾದರಿ) ಕಾಣಿಸಿಕೊಂಡು ವಯಾಡಾಕ್‌(ಸಿಮೆಂಟ್‌ನ ಭೀಮ್‌) ಸ್ವಲ್ಪ ಜರುಗಿರುವ ಪರಿಣಾಮ ಈ ಮಾರ್ಗದಲ್ಲಿ ಮೆಟ್ರೋ ಸಂಚಾರಕ್ಕೆ ತೊಂದರೆಯಾಗಿದೆ.

ವಯಾಡಕ್‌ ಜರುಗಿರುವುದರ ಕುರಿತು ಎರಡು ದಿನಗಳ ಹಿಂದೆಯೇ ಬಿಎಂಆರ್‌ಸಿಎಲ್‌ ಗಮನಕ್ಕೆ ಬಂದಿದೆ. ಸಮಸ್ಯೆ ಪರಿಹಾರಕ್ಕೆ ಸಿದ್ಧಗೊಳ್ಳಲಾಗುತ್ತಿದೆ. ಅಲ್ಲದೆ, ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ಕಬ್ಬಿಣದ ಪಿಲ್ಲರ್‌ನ್ನು ನಿರ್ಮಿಸಿ ವಯಾಡಕ್‌ಗೆ ಆಧಾರಸ್ಥಂಬವಾಗಿಸಲಾಗಿದೆ. ಅಲ್ಲದೆ, ಜಾಕ್‌ ಮೂಲಕ ಎತ್ತರಿಸಲಾಗಿದೆ. ಜೊತೆಗೆ ಬುಧವಾರ ಬೆಳಗ್ಗೆ ಎಂ.ಜಿ ರಸ್ತೆಯಲ್ಲಿ ಬೃಹತ್‌ ಕ್ರೈನ್‌ಗಳನ್ನು ತಂದು ನಿಲ್ಲಿಸಿದ್ದು, ರಸ್ತೆಯ ಎರಡು ಭಾಗಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

ರಾತ್ರಿ ಮೆಟ್ರೋ ಸಂಚಾರ ಸ್ಥಗಿತಗೊಂಡ ಬಳಿಕ ಕ್ರೈನ್‌ಗಳ ಮೂಲಕ ವಯಾಡಕ್‌ನ್ನು ಮೇಲೆತ್ತಿ ಹನಿಕೂಂಬಿಂಗ್‌ ಆಗಿರುವ ಜಾಗ ಸರಿಪಡಿಸಲಾಗುವುದು. ಆದರೆ, ಸುಮಾರು ಒಂದು ವಾರ ಕಾಲ ಈ ಕಾರ್ಯ ನಡೆಯಲಿದ್ದು, ಸಾಮಾನ್ಯ ಭಾಗದಲ್ಲಿ 60 ರಿಂದ 80 ಕಿಲೋಮೀಟರ್‌ ವೇಗದಲ್ಲಿ ಸಂಚರಿಸುವ ರೈಲು ಟ್ರಿನಿಟಿ ನಿಲ್ದಾಣದ ಬಳಿಯಲ್ಲಿ ಕೇವಲ 20 ಕಿಲೋಮೀಟರ್‌ ವೇಗದಲ್ಲಿ ಮಾತ್ರ ಸಂಚರಿಸಲಿದೆ. ಆದರೆ ಮೆಟ್ರೋ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮೆಟ್ರೋ ಮಾರ್ಗದಲ್ಲಿ ವಯಾಡಕ್‌ ಜರುಗಿರುವುದರಿಂದ ಬೆಳಗ್ಗೆ ಸಂಚಾರವನ್ನು ಸ್ಥಗಿತಗೊಳಿಸಿದ್ದ ಮೆಟ್ರೊ, ಬೆಳಗ್ಗೆ 9 ರಿಂದ ರೈಲುಗಳು ಸಾಮಾನ್ಯದಂತೆ ಸಂಚಾರ ಮುಂದುವರೆಸಲಾಗಿತ್ತು. ಆದರೆ, ಆ ಮಾರ್ಗದಲ್ಲಿ ಎರಡು ರೈಲು ಹಳಿಗಳಿದ್ದು. ಒಂದು ಹಳಿಯಲ್ಲಿ ಮಾತ್ರ ಏಕ ಮುಖವಾಗಿ ಸಂಚಾರ ಮಾಡುವುದಕ್ಕೆ ಅನುವು ಮಾಡಿಕೊಡಲಾಗಿತ್ತು. ಇದರಿಂದಾಗಿ ರೈಲುಗಳ ಸಂಚಾರ ವಿಳಂಬವಾಗಿದ್ದು, ನೇರಳೆ ಮಾರ್ಗದ ನಿಲ್ದಾಣಗಳಲ್ಲಿ ಹೆಚ್ಚು ಪ್ರಮಾಣದ ಪ್ರಯಾಣಿಗಳು ಸಾಲುಗಟ್ಟಿನಿಂತಿದ್ದ ದೃಶ್ಯಗಳು ಕಂಡು ಬಂದವು.

ಮೆಟ್ರೋ ರೈಲುಗಳ ವಿಳಂಬ:

ಸುಮಾರು 60 ಕಿಲೋಮೀಟರ್‌ ವೇಗದಲ್ಲಿ ಸಂಚರಿಸುತ್ತಿದ್ದ ಮೆಟ್ರೋ ರೈಲು ಟ್ರಿನಿಟಿ ನಿಲ್ದಾಣ ಬಳಿಗೆ ಬರುವ ವೇಳೆಗೆ ಕಡಿಮೆಯಾಗಿತ್ತು. ಪರಿಣಾಮ ಈ ಮಾರ್ಗದಲ್ಲಿ 10 ನಿಮಿಷಕ್ಕೆ ಒಂದು ರೈಲು ಸಂಚರಿಸುತ್ತಿತ್ತು. ಆದರೆ, ಅರ್ಧ ಗಂಟೆಗೆ ಒಂದರಂತೆ ಬಿಡಲಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೂ ಸಂಶಯ ಹಾಗೂ ಗಾಬರಿಗೆ ಕಾರಣವಾಗಿತ್ತು.

"

ಪಿಲ್ಲರ್‌ನಲ್ಲಿ ಸಮಸ್ಯೆ ಇಲ್ಲ:

ಎಂ.ಜಿ.ರಸ್ತೆಯ ಟ್ರಿನಿಟಿ ನಿಲ್ದಾಣದ ಬಳಿಯ ಮೆಟ್ರೋ ಮಾರ್ಗದ ಪಿಲ್ಲರ್‌ನಲ್ಲಿ ಬಿರುಕು ಉಂಟಾಗಿದೆ. ಆ ಮಾರ್ಗದಲ್ಲಿ ಯಾರೂ ಸಂಚಾರ ಮಾಡಬಾರದು ಎಂಬ ತಪ್ಪು ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ, ಮೆಟ್ರೋ ಪಿಲ್ಲರ್‌ನಲ್ಲಿ ಯಾವುದೇ ದೋಷ ಕಂಡು ಬಂದಿಲ್ಲ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಬಿಎಂಆರ್‌ಸಿಎಲ್‌ ಸಾರ್ವಜನಿಕರಿಗೆ ಸ್ಪಷ್ಟಣೆ ನೀಡಿದೆ.

ಸಂಜೆ ಪ್ರಯಾಣಿಕರ ಸಂಖ್ಯೆ ಕಡಿಮೆ:

ಮೈಟ್ರೋ ರೈಲು ಮಾರ್ಗದಲ್ಲಿ ಬಿರುಕು ಉಂಟಾಗಿದೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದೆ. ಪರಿಣಾಮ ಸಂಜೆ ವೇಳೆಗೆ ಈ ಮಾರ್ಗದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಕಡಿಮೆಯಾಗಿತ್ತು. ಅಲ್ಲದೆ, ಈ ಮಾರ್ಗದ ಬಸ್‌ಗಳಲ್ಲಿ ಜನ ತುಂಬಿ ತುಳುಕುತ್ತಿದ್ದರು.

ಕಳೆದ ಎರಡು ದಿನಗಳ ಹಿಂದೆ ಈ ಸಮಸ್ಯೆ ಕಂಡು ಬಂದಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ ಒಂದು ವಾರದಿಂದ 10 ದಿನಗಳ ಕಾಲ ರಾತ್ರಿ ವೇಳೆಯಲ್ಲಿ ಕಾಮಗಾರಿ ನಡೆಯಲಿದೆ. ಎರಡು ದಿನಗಳ ಕಾಲ ಆಧಾರ ಸಂಸ್ಥಂಬಗಳನ್ನು ನಿರ್ಮಿಸಲಿದ್ದು, ಉಳಿದ ದಿನಗಳಲ್ಲಿ ಕಾಮಗಾರಿ ನಡೆಸುತ್ತೇವೆ, ಆದರೆ, ಕೊನೆಯ ಎರಡು ದಿನಗಳನ್ನು ಬಿಟ್ಟು ಮೆಟ್ರೋ ರೈಲು ಸಂಚಾರದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ

-ಅಜಯ್‌ ಸೇಠ್‌, ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕರು.