Asianet Suvarna News Asianet Suvarna News

'ಎಸ್. ಎಂ ಕೃಷ್ಣ ಕಾಂಗ್ರೆಸ್ ಪಕ್ಷ ತೊರೆಯಬಾರದಿತ್ತು'

ಎಸ್‌. ಎಂ ಕೃಷ್ಣ ರಾಜಕೀಯ ಜೀವನ ಮುಗಿದ ಅಧ್ಯಾಯ| ಕೃಷ್ಣ ಕಾಂಗ್ರೆಸ್‌ ಬಿಡಬಾರದಿತ್ತು: ಸಂಸದ ವಿ.ಶ್ರೀನಿವಾಸ ಪ್ರಸಾದ್‌| ಮೈತ್ರಿ ಮುರಿದು ಬೀಳುವುದಕ್ಕೆ ಸಿದ್ದರಾಮಯ್ಯ ಕಾರ್ಯತಂತ್ರ ಹೆಣೆದಿದ್ದಾರೆ

SM Krishna Should Have Announced Retirement To Political Field After leaving Congress Says BJP MP Srinivas Prasad
Author
Bangalore, First Published Jul 16, 2019, 9:22 AM IST
  • Facebook
  • Twitter
  • Whatsapp

ಮದ್ದೂರು[ಜು.16]: ಕೇಂದ್ರ ವಿದೇಶಾಂಗ ಖಾತೆ ಮಾಜಿ ಸಚಿವ ಎಸ್‌.ಎಂ.ಕೃಷ್ಣ ರಾಜಕೀಯ ಜೀವನ ಮುಗಿದ ಅಧ್ಯಾಯವಾಗಿದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಸೋಮವಾರ ಅಭಿಪ್ರಾಯಪಟ್ಟರು.

ಸುದ್ದಿಗಾರರೊಂದಿಗೆ ಮಾತನಾಡಿ ಶ್ರೀನಿವಾಸ್‌ ಪ್ರಸಾದ್‌, ನಾನು ವೈಯಕ್ತಿಕವಾಗಿ ಹೇಳಬೇಕೆಂದರೆ ಕೃಷ್ಣ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಬಿಡಬಾರದಿತ್ತು. ಆ ಪಕ್ಷ ಬಿಟ್ಟಬಳಿಕ ರಾಜಕೀಯ ನಿವೃತ್ತಿಯನ್ನು ಪಡೆಯಬೇಕಿತ್ತು ಎಂದು ಹೇಳಿದರು. ಎಸ್‌.ಎಂ.ಕೃಷ್ಣ ಅವರು ಕಾಂಗ್ರೆಸ್‌ ಸೇರಿದ ನಂತರ ರಾಜಕೀಯವಾಗಿ ಬೆಳವಣಿಗೆ ಕಂಡರು. ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ರಾಜಕೀಯ ಜೀವನದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಎಲ್ಲಾ ಅಧಿಕಾರವನ್ನೂ ಅನುಭವಿಸಿದ್ದಾರೆ. ಆದರೆ, ಕಾಂಗ್ರೆಸ್‌ ತೊರೆಯುವ ನಿರ್ಧಾರ ಕೈಗೊಂಡ ಬಳಿಕ ಅವರ ರಾಜಕೀಯ ಜೀವನ ಅಂತ್ಯಗೊಂಡಿದೆ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಹಾಸನಕ್ಕಿಂತಲೂ ಮಂಡ್ಯದಲ್ಲಿ ತಳಮಟ್ಟದಿಂದ ಜೆಡಿಎಸ್‌ ಗಟ್ಟಿಯಾಗಿದೆ. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಶಾಸಕರು, ವಿಧಾನಪರಿಷತ್‌ ಸದಸ್ಯರು, ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಮಟ್ಟದಲ್ಲೂ ಪಕ್ಷದ ಜನಪ್ರತಿನಿಧಿಗಳಿದ್ದಾರೆ. ಹೀಗಾಗಿ ಮಂಡ್ಯ ಜೆಡಿಎಸ್‌ ಭದ್ರಕೋಟೆಯಾಗಿತ್ತು. ಆ ಪಕ್ಷದ ಶಾಸಕರು- ಮುಖಂಡರೇ ನಾಲಿಗೆ ಹರಿಯಬಿಟ್ಟು ತಮ್ಮ ಭದ್ರಕೋಟೆಯನ್ನು ಹಾಳುಮಾಡಿಕೊಂಡಿದ್ದಾರೆ. ಇದಕ್ಕೆ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸುಮಲತಾ ಗೆದ್ದಿರುವುದೇ ಸಾಕ್ಷಿಯಾಗಿದೆ. ಇದು ಕೇವಲ ಜೆಡಿಎಸ್‌ ಪಕ್ಷಕ್ಕೆ ಮಾತ್ರವಲ್ಲ, ಎಲ್ಲಾ ರಾಜಕೀಯ ಪಕ್ಷಗಳಿಗೂ ತಕ್ಕ ಪಾಠ ಎಂದು ಹೇಳಿದರು.

ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೆಸ್‌-

ದಳ ನಾಯಕರ ಧೋರಣೆ ಕಾರಣ

ಮದ್ದೂರು:

ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನದ ಅಂಚಿಗೆ ಬರಲು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರ ಧೋರಣೆಗಳೇ ಕಾರಣ ಎಂದು ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಸೋಮವಾರ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಇಂದಿನ ಎಲ್ಲ ಬೆಳವಣಿಗೆಗಳಿಗೆ ದೋಸ್ತಿ ಮುಖಂಡರೇ ಕಾರಣರಾಗಿದ್ದಾರೆ. ಒಂದು ವರ್ಷದಿಂದಲೂ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳದೆ ನಿಷ್ಕಿ್ರಯವಾಗಿದ್ದಾರೆಂದು ದೂರಿದರು.

ದೇವೇಗೌಡ ಅವರಿಗೆ ಸಿದ್ದರಾಮಯ್ಯ ದೊಡ್ಡ ದುಷ್ಮನ್‌. ಸಿದ್ದರಾಮಯ್ಯನವರಿಗೆ ದೇವೇಗೌಡರು ದುಷ್ಮನ್‌. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಮಲತಾಯಿ ಧೋರಣೆ ಹಾಗೂ ಸಚಿವ ರೇವಣ್ಣನವರ ಸರ್ವಾಧಿಕಾರಿ ಧೋರಣೆ ಈ ಎಲ್ಲ ಅವ್ಯವಸ್ಥೆಗಳಿಗೆ ಕಾರಣವಾಗಿದೆ ಎಂದರು.

ಅತೃಪ್ತ ಶಾಸಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷದ 13 ಶಾಸಕರು ಪಕ್ಷ ತೊರೆದಿರುವುದು ಕುಮಾರಸ್ವಾಮಿಯವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಬಿಜೆಪಿ 104 ಸ್ಥಾನಗಳನ್ನು ಪಡೆದು ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕುತಂತ್ರದಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್‌ ಪಕ್ಷವು ಬೇಷರತ್‌ ಬೆಂಬಲ ನೀಡಿದ್ದರೂ ಸಮನ್ವಯ ಸಮಿತಿಯೊಳಗಿನ ಕಿತ್ತಾಟಗಳು, ವಿಶ್ವನಾಥ್‌ ಅವರಿಗೆ ಯಾವುದೇ ಸ್ಥಾನ ನೀಡದೆ ಕಡೆಗಣಿಸಿದ್ದು ಸರ್ಕಾರದ ಅವನತಿಯತ್ತ ಸಾಗುವುದಕ್ಕೆ ಕಾರಣವಾದವು ಎಂದರು.

ರಾಜೀನಾಮೆ ಒಂದೇ ದಾರಿ

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ. ಕುಮಾರಸ್ವಾಮಿಯವರು ವಿಶ್ವಾಸಮತಯಾಚನೆ ಮಾಡಿ ಅಧಿಕಾರ ನಡೆಸಬೇಕೇ ವಿನಃ ವಿಶ್ವಾಸಮತವಿಲ್ಲದಿರುವಾಗ ಅಧಿಕಾರ ನಡೆಸುವುದು ಸೂಕ್ತವಲ್ಲ. ಅವರು ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅತೃಪ್ತ ಶಾಸಕರಿಗೆ ಯಾವುದೇ ಅನುದಾನ ನೀಡದೆ ಕಡೆಗಣಿಸಿರುವುದು. ಸಚಿವ ಎಚ್‌.ಡಿ. ರೇವಣ್ಣ ಅವರ ಸರ್ವಾಧಿಕಾರಿ ಧೋರಣೆ, ಎಲ್ಲ ಇಲಾಖೆಗಳಲ್ಲೂ ಹಸ್ತಕ್ಷೇಪ ಮಾಡಿದ್ದೇ ಇಷ್ಟೆಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದೆ. ಕಳೆದ ಒಂದು ವರ್ಷದಿಂದಲೂ ರಾಜ್ಯದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ಬರಗಾಲ ವ್ಯಾಪಿಸಿ ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಆದರೂ ಸರ್ಕಾರ ಜನರ ಸ್ಥಿತಿ-ಗತಿಗಳ ಬಗ್ಗೆ ಗಮನಹರಿಸದಿರುವುದು ನಾಚಿಗೇಡಿನ ಸಂಗತಿ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮೈತ್ರಿ ಮುರಿದು ಬೀಳುವುದಕ್ಕೆ ಸಿದ್ದರಾಮಯ್ಯನವರೇ ಕಾರ್ಯತಂತ್ರ ಹೆಣೆದಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ತಮ್ಮೊಂದಿಗೆ ವಿಶ್ವಾಸದಿಂದ ಇದ್ದಾರೆ, ಆದರೆ ಮುಂದಿನ ದಿನಗಳಲ್ಲಿ ಬಿಜೆಪಿ ಸೇರುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ತಾವು ಅವರನ್ನು ಸಂಪರ್ಕಿಸಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಶಾಸಕರು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಎಂದು ಭವಿಷ್ಯ ನುಡಿದರು. ವಿ.ಕೆ.ಜಗದೀಶ್‌, ಮುಖಂಡರಾದ ಗೂಳೂರು ಮಾದೇಶ್‌, ಬಿಜೆಪಿ ಮುಖಂಡ ಕಾಳೇನಹಳ್ಳಿ ತಿಮ್ಮೇಗೌಡ, ಪುರಸಭಾ ಮಾಜಿ ಸದಸ್ಯ ವಿಜಯಕುಮಾರ್‌ ಇದ್ದರು.

Follow Us:
Download App:
  • android
  • ios