ವಿವಿಗಳಲ್ಲಿ ಎಡ – ಬಲ ಪಾಠ : ಭೈರಪ್ಪ ಬೇಸರ

news | Saturday, January 13th, 2018
Suvarna Web Desk
Highlights

ಇಂದಿನ ವಿಶ್ವವಿದ್ಯಾಲಯಗಳು ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಎಡ-ಬಲ ಪಂಥದ ಪಾಠ ಹೇಳಲಾಗುತ್ತಿದೆ. ಇದರಿಂದ ಯುವ ಬರಹಗಾರರು ಮುಂದಿನ ದಾರಿ ಕಾಣದೆ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಬೇಸರ ವ್ಯಕ್ತಪಡಿದ್ದಾರೆ.

ಬೆಂಗಳೂರು (ಜ.13): ಇಂದಿನ ವಿಶ್ವವಿದ್ಯಾಲಯಗಳು ಹಾಗೂ ಸಾಹಿತ್ಯ ಸಮ್ಮೇಳನಗಳಲ್ಲಿ ಎಡ-ಬಲ ಪಂಥದ ಪಾಠ ಹೇಳಲಾಗುತ್ತಿದೆ. ಇದರಿಂದ ಯುವ ಬರಹಗಾರರು ಮುಂದಿನ ದಾರಿ ಕಾಣದೆ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಬೇಸರ ವ್ಯಕ್ತಪಡಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಶುಕ್ರವಾರ ಪುರಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬಿಎಂಟಿಸಿ ಸ್ಥಾಪಿತ ‘ನೃಪತುಂಗ ಸಾಹಿತ್ಯ ಪ್ರಶಸ್ತಿ’ (ಫಲಕ ಹಾಗೂ 7ಲಕ್ಷದ 1 ರು. ನಗದು) ಸ್ವೀಕರಿಸಿ ಮಾತನಾಡಿದ ಅವರು, ಶುದ್ಧ ಸಾಹಿತ್ಯದ ಗುಣಲಕ್ಷಣ ಹೇಳಿಕೊಡಬೇಕಾದ ವಿಶ್ವ ವಿದ್ಯಾಲಯಗಳಲ್ಲಿ ಎಡ-ಬಲ ಪಂಥದ ಬಗ್ಗೆ ಪಾಠ ಹೇಳಲಾಗುತ್ತಿದೆ.

ಸಾಹಿತ್ಯದಲ್ಲಿ ಈ ಎಡ ಬಲ ಏಕೆ ಬೇಕು ಎಂದು ಪ್ರಶ್ನಿಸಿದ ಅವರು, ಇದರಿಂದ ಯುವ ಬರಹಗಾರರು ಗೊಂದಲಕ್ಕೆ ಒಳಗಾಗಿ ದೊಡ್ಡ ಸಾಹಿತಿಗಳಾಗುವ ಅವಕಾಶ ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದರು. ನನ್ನದು ಬರೆಯುವ ಮಾಧ್ಯಮ: ಕನ್ನಡ ಸಾಹಿತ್ಯ  ಪರಿಷತ್ 1999ರಲ್ಲಿ ಕನಕಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ನನ್ನನ್ನು ಅಧ್ಯಕ್ಷನಾಗಿ ಆಯ್ಕೆ ಮಾಡಿತು.

ಸಾಹಿತ್ಯ ಗುಣ ಲಕ್ಷಣಗಳ ಬಗ್ಗೆ 28 ಪುಟಗಳ ಭಾಷಣ ಬರೆದಿದ್ದೆ. ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಲು ಕೆಲವು ಗಂಟೆಗಳು ಬಾಕಿ ಇದ್ದವು. ಈ ವೇಳೆ ನಾಲ್ಕು ಮಂದಿ ನನ್ನ ಭಾಷಣ ಪ್ರತಿ ಸುಟ್ಟು ಹಾಕಿದ್ದರು. ನನ್ನ ಪ್ರಕಾರ ಆ ಭಾಷಣ ಉತ್ಕೃಷ್ಟ ಭಾಷಣ. ಅದು ಬೇರೆ ಭಾಷೆಗಳಿಗೂ ಅನುವಾದವಾಯಿತು. ಬೆಂಕಿ ಹಚ್ಚುವುದು ಅವರ ಮಾಧ್ಯಮ. ಬರೆಯುವುದು ನನ್ನ ಮಾಧ್ಯಮ ಎಂದು ಘಟನೆ ಬಗ್ಗೆ ಆಗ ಹೇಳಿದ್ದೆ ಎಂದು ಅವರು ಸ್ಮರಿಸಿದರು. ನನ್ನದು ಶುದ್ಧ ಸಾಹಿತ್ಯ: ನಮ್ಮಲ್ಲಿನ ಕೆಲವು ಸಾಹಿತಿಗಳು ಸಾಹಿತ್ಯದ ಜೊತೆಗೆ ಎಲ್ಲದರಲ್ಲೂ ಕೈಯಾಡಿಸಲು ಹೋಗುತ್ತಾರೆ.

ರಾಜಕಾರಣಿಗಳ ಹಿಂದೆಯೇ ಸುತ್ತುತ್ತಾರೆ. ಹೀಗಾದರೆ ಸಾಹಿತ್ಯದ ಸ್ವಾತಂತ್ರ್ಯ ಉಳಿಯುವುದಿಲ್ಲ. ನಾನು ಆರಂಭದಿಂದಲೂ ಶುದ್ಧ ಸಾಹಿತ್ಯದಲ್ಲಿ ನಂಬಿಕೆ ಇರಿಸಿದ್ದೇನೆ. ಎಲ್ಲಾ ಕಲೆಗಳಲ್ಲೂ ಅತ್ಯುತ್ಕೃಷ್ಟ ಕಲೆ ಸಂಗೀತ. ಸಾಹಿತಿ ಬರೆದರೆ ಶಾಸ್ತ್ರೀಯ ಸಂಗೀತ ಕೇಳಿದಾಗ ಉಂಟಾಗುವಂತಹ ರಸಾನುಭಾವ ಉಂಟಾಗಬೇಕು. ಆದರೆ, ಎಲ್ಲಾ ಸಾಹಿತಿಗಳಿಗೂ ಸಂಗೀತದ ಶುದ್ಧ ರಸ ಅನುಭವಿಸಲು ಸಾಧ್ಯವಿಲ್ಲ.

ಏಕೆಂದರೆ, ಅವರಿಗೆ ಸಂಗೀತದ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ. ನಾನು ಸಂಗೀತದಲ್ಲಿ ರಸಾನುಭವ ಅನುಭವಿಸುತ್ತೇನೆ. ಸಾಹಿತ್ಯದಲ್ಲೂ ಈ ರಸಾನುಭವ ಸೃಷ್ಟಿಸುತ್ತೇನೆ. ಹಾಗಾಗಿ ಇಷ್ಟು ವರ್ಷ ಕಳೆದರೂ ನನ್ನ ಸಾಹಿತ್ಯವನ್ನು ಜನ ಓದುತ್ತಾರೆ ಎಂದು ಎಸ್.ಎಲ್.ಭೈರಪ್ಪ ಅಭಿಪ್ರಾಯಪಟ್ಟರು.  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ಈ ದೇಶದಲ್ಲಿ ಅತಿ ಹೆಚ್ಚು ಓದುಗರನ್ನು ಹೊಂದಿರುವ ಸಾಹಿತಿ ಡಾ.ಎಸ್.ಎಲ್ .ಭೈರಪ್ಪ ಅವರಿಗೆ ಪ್ರಶಸ್ತಿ ನೀಡಲು ಹೆಮ್ಮೆಯಾಗುತ್ತಿದೆ ಎಂದರು.

ಇನ್ನಷ್ಟು ಗೌರವ ಸಲ್ಲಲಿ: ಸಾರಿಗೆ ಸಚಿವ ಎಚ್.ಎಂ ರೇವಣ್ಣ ಮಾತನಾಡಿ, ಭೈರಪ್ಪ ಅವರು ಉತ್ತಮ ಕೃತಿಗಳನ್ನು ಬರೆದಿದ್ದಾರೆ. ಕೆಲವರು ಅವರ ಸಾಹಿತ್ಯವನ್ನು ವಿರೋಧಿಸುವವರು ಇದ್ದಾರೆ. ಅದು ಅವರವರ ಚಿಂತನೆ. ಎಲ್ಲರೂ ಒಪ್ಪಬೇಕೆಂದೇನು ಇಲ್ಲ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಭೈರಪ್ಪ ತಮ್ಮ ಸಾಧನೆಯಿಂದ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಇನ್ನು ಹೆಚ್ಚಿನ ಪುರಸ್ಕಾರ, ಗೌರವಗಳು ಅವರಿಗೆ ಸಲ್ಲಲಿ ಎಂದು ಪ್ರಾರ್ಥಿಸಿದರು.

ಬಿಎಂಟಿಸಿಯಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಈಗಾಗಲೇ ಒಪ್ಪಿಗೆ ನೀಡಲಾಗಿದೆ. ಇನ್ನು ಸಾರಿಗೆ ನೌಕರರ ಸಾಹಿತ್ಯ ಸಮ್ಮೇಳನದ ಬಗ್ಗೆಯೂ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮನು ಬಳಿಗಾರ್ ಅವರ ಸಲಹೆಗೆ ಸಚಿವರು ಪ್ರತಿಕ್ರಿಯಿಸಿದರು.

ಇದೇ ವೇಳೆ ಯುವ ಸಾಹಿತಿಗಳಿಗೆ ಎಸ್. ರಾಮಲಿಂಗೇಶ್ವರ, ಡಾ.ಸಿ. ನಂದಿನಿ, ಶಾಂತಿ ಕೆ.ಅಪ್ಪಣ್ಣ ಹಾಗೂ ಗುರಪ್ಪ ಗಾಣಿಗೇರ ಅವರಿಗೆ ‘ಮಯೂರವರ್ಮ ಸಾಹಿತ್ಯ ಪ್ರಶಸ್ತಿ’ (25ಸಾವಿರ ನಗದು) ನೀಡಿ ಗೌರವಿಸಲಾಯಿತು. ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್, ಭದ್ರತೆ ಮತ್ತು ಜಾಗೃತಿ ವಿಭಾಗದ ನಿರ್ದೇಶಕ ಎ.ಎನ್.ಪ್ರಕಾಶ್ ಗೌಡ, ವ.ಚ. ಚನ್ನೇಗೌಡ, ಸಾಹಿತಿ ಡಾ.ಪ್ರಧಾನ ಗುರುದತ್ ಮತ್ತಿತರರಿದ್ದರು.

Comments 0
Add Comment