Asianet Suvarna News Asianet Suvarna News

ದಕ್ಷಿಣ ಕಾಶ್ಮೀರ ಕೊಡಗಿನ ವಿನಾಶಕ್ಕೆ 6 ಕಾರಣಗಳು

ಕೊಡಗಿನ ಈ ದುಸ್ಥಿತಿಗೆ ಮನುಷ್ಯನ ದುರಾಸೆಯೇ ಕಾರಣ ಎಂಬುದು ನಿಚ್ಚಳವಾಗುತ್ತಿದೆ. ಅಭಿವೃದ್ಧಿಯ ನೆಪದಲ್ಲಿ  ಜನರು ಕೊಡಗಿನ ಚಹರೆಯನ್ನು ಅರ್ಧ ಬದಲಿಸಿದ್ದರು. ಪ್ರಕೃತಿ ಈಗ ಪೂರ್ತಿ ಬದಲಿಸಿದೆ! ನಿಸರ್ಗದ ದುಗುಡವನ್ನು ಇನ್ನಾದರೂ
ಅರ್ಥೈಸಿಕೊಳ್ಳದಿದ್ದರೆ ಅದರ ಪರಿಣಾಮ ಬಹುಶಃ ಊಹೆಗೆ ನಿಲುಕದು. 

Six reasons why South Kashmir Kodagu Devastated by rain
Author
Bengaluru, First Published Aug 21, 2018, 3:00 PM IST

ಕೊಡಗು (ಆ. 21): ಕೊಡವರು ಪರಿಸರವನ್ನು ಬೆಳೆಸಿಕೊಂಡು ಪ್ರಕೃತಿಯನ್ನೇ ಪೂಜೆ ಮಾಡುತ್ತಾ ಬೆಳೆದುಬಂದವರು. ಆದರೆ ಅವರ ಸುಂದರ ಬದುಕಿಗೆ ಇಂದು ಪ್ರಕೃತಿಯೇ ಮುಳುವಾಗಿದೆ. ಕೆಲವರಿಂದ ಆಗುತ್ತಿರುವ ‘ಅಭಿವೃದ್ಧಿ’, ಭೂಪರಿವರ್ತನೆ ಮತ್ತಿತರ ಕಾರಣಗಳು ಕೊಡಗಿನ ಪರಿಸರಕ್ಕೆ ಸಂಚಕಾರವಾಗಿವೆ.

ಕಳೆದ ಒಂದು ವಾರದಲ್ಲಿ ಸುರಿದ ಸತತ ಮಳೆಯಿಂದಾಗಿ ಬೆಟ್ಟಗುಡ್ಡಗಳು, ಮನೆಗಳು ನೆಲಸಮವಾಗಿದೆ. ಸಾವಿರಾರು ಮನೆಗಳು ಹಾನಿಗೊಳಗಾಗಿವೆ. ಪ್ರಾಣಿಸಂಕುಲಗಳು, ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಕೊಡಗು ಮತ್ತೆ ಯಥಾಸ್ಥಿತಿಯಲ್ಲಿ ಚೇತರಿಕೆ ಕಾಣಲು ಕನಿಷ್ಠ ಒಂದು ವರ್ಷವಾದರೂ ಬೇಕು ಎಂಬ ಪರಿಸ್ಥಿತಿಗೆ ತಲುಪಿದೆ. ಸುಂದರ ಪ್ರವಾಸಿ ತಾಣಗಳಿಂದಲೇ ಹೆಸರಾಗಿದ್ದ ಕೊಡುಗು ಒಂದರ್ಥದಲ್ಲಿ ಅದೇ ಕಾರಣದಿಂದಾಗಿ ಈ ಪರಿಸ್ಥಿತಿಗೆ ಬಂದಿದೆ. ಪ್ರವಾಸೋದ್ಯಮದ ಆಕರ್ಷಣೆಯ ಹಿಂದೆ ಬಿದ್ದ ಕೊಡವರು, ಬೆಟ್ಟಗುಡ್ಡಗಳನ್ನು ಕೊರೆದು ರೆಸಾರ್ಟ್‌ಗಳು, ಹೋಂಸ್ಟೇಗಳನ್ನು ನಿರ್ಮಿಸಿದರು.

ಕಾಡಾನೆ ಹಾಗೂ ಹಲವು ಕಾಡು ಪ್ರಾಣಿಗಳ ಉಪಟಳದಿಂದಾಗಿ ಭತ್ತದ ಗದ್ದೆಗಳನ್ನು ಮಾರಾಟ ಮಾಡಿದರು. ಮಾರಾಟವಾದ ಭತ್ತದ ಗದ್ದೆಗಳು ಸೈಟ್‌ಗಳಾಗಿ ಪರಿವರ್ತನೆಯಾಗಿ ಬಡಾವಣೆಗಳಾಗಿ ರೂಪುಗೊಂಡವು. ಆಕರ್ಷಣೆಯ ದೃಷ್ಟಿಯಿಂದ ಹರಿವ ಹೊಳೆ, ತೋಡುಗಳಿಗೆ ಅಡ್ಡಲಾಗಿ ರೆಸಾರ್ಟ್‌ಗಳು ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಾಫಿ ತೋಟಗಳನ್ನು ಕೂಡ ಕಳ್ಳ ಮಾರ್ಗದಲ್ಲಿ ಭೂಪರಿವರ್ತನೆ ಮಾಡಿ ಬಡಾವಣೆಗಳನ್ನಾಗಿ ಪರಿವರ್ತಿಸಿ ಅಲ್ಲಿ ಮನೆಗಳನ್ನು ಕಟ್ಟಲಾಗಿದೆ.

ಮಾನವನ ಈ ದುರಾಸೆಗೆ ಕೊಡಗಿನ ಪರಿಸರ ದಿನದಿಂದ ದಿನಕ್ಕೆ ಅವನತಿಯತ್ತ ಸಾಗುತ್ತಿದೆ. ಇದೆಲ್ಲದರ ಒಟ್ಟು ಮೊತ್ತವೇ ಇಂದಿನ ಕೊಡಗಿನ ಸ್ಥಿತಿ!

1. ಬೆಟ್ಟದ ಪ್ರದೇಶದಲ್ಲಿ ರೆಸಾರ್ಟ್!

ಕೊಡಗು ಸುಂದರ ಪರಿಸರ ತಾಣವನ್ನು ಹೊಂದಿರುವ ಜಿಲ್ಲೆ. ಇದರಿಂದ ಹಲವು ಪ್ರವಾಸಿಗರೂ ಕೂಡ ಈ ಕಡೆ ಆಕರ್ಷಿತರಾಗಿದ್ದಾರೆ. ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ಐಷಾರಾಮಿ ರೆಸಾರ್ಟ್‌ಗಳು ಅಣಬೆಗಳಂತೆ ತಲೆ ಎತ್ತಿವೆ. ಬೆಟ್ಟವನ್ನು ಕೊರೆದು ಕಾಟೇಜ್, ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇಂಥ ಹಲವು ರೆಸಾಟ್ಗರ್ಳಲ್ಲಿ ನೀರಿನ ಅಗತ್ಯತೆ ಹೆಚ್ಚಾಗಿದೆ. ಇದರಿಂದ ಬೋರ್‌ವೆಲ್ ಕೊರೆಸುವ ಮೂಲಕ ಲಕ್ಷಾಂತರ ಲೀಟರ್ ನೀರನ್ನು ಬಳಕೆ ಮಾಡಲಾಗುತ್ತಿದೆ.

ಕೃಷಿ ಚಟುವಟಿಕೆಗಳಿಗೆ ಬಳಕೆ ಮಾಡುವ ನೀರು ಮತ್ತೆ ಭೂಮಿಗೆ ಹೋಗುವುದರಿಂದ ಯಾವುದೇ ಸಮಸ್ಯೆ ಇಲ್ಲ. ಆದರೆ ಕೃಷಿಯೇತರ ಚಟುವಟಿಕೆಗಳಿಗಾಗಿ ಬೋರ್‌ವೆಲ್ ಕೊರೆಸಿರುವುದರಿಂದ ಅಂತರ್‌ಜಲ ಮಟ್ಟವೂ ಕುಸಿದಿದೆ. ಇದೆಲ್ಲದರ ಪರಿಣಾಮವಾಗಿ ಪ್ರವಾಸಿಗರ ಪ್ರಿಯ ನಾಡು ಪ್ರವಾಹಕ್ಕೆ ಸಿಲುಕಿ ಅಕ್ಷರಶಃ ನಲುಗುತ್ತಿದೆ.

2.  ಮರ ಕಡಿಯದಿದ್ದರೆ ಹೀಗಾಗುತ್ತಿತ್ತೆ?

ಕೊಡಗಲ್ಲಿ ಭೂ ಪರಿವರ್ತನೆ ಮಾಡಿ ಸೈಟ್‌ಗಳು, ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇದಕ್ಕೆ ಮರಗಳನ್ನು ಕಡಿಯಲೇಬೇಕಾದ ಪರಿಸ್ಥಿತಿ ಇದೆ. ಕೊಡಗಿನ ಮೂಲಕ ಕೇರಳಕ್ಕೆ ಕೊಂಡೊಯ್ದ ಹೈಟೆಕ್ಷನ್ ಮಾರ್ಗದಿಂದಾಗಿ ಕೊಡಗಿನ 54 ಸಾವಿರ ಮರಗಳಿಗೆ ಕೊಡಲಿ ಏಟು ಬಿದ್ದಿದೆ. ಹೆಚ್ಚು ಮರಗಳಿದ್ದರೆ ಅಪಾರ ಮಳೆಯಾದರೂ ಏನೂ ಆಗುವುದಿಲ್ಲ. ಆದರೆ ಮರಗಳೇ ಇಲ್ಲದಿರುವುದರಿಂದ ತೊಂದರೆಯಾಗಿದೆ.

ಹೀಗೆ ಅಭಿವೃದ್ಧಿಯ ನೆಪದಲ್ಲಿ ಅರಣ್ಯವನ್ನು ಎಡಬಿಡದೆ ದೋಚಿದ್ದರಿಂದ ಭೂಮಿಯ ಮೇಲಿನ ಮಣ್ಣಿನ ಕವಚ ಇಳಿಜಾರಿನಲ್ಲಿ ತೊಳೆದು ಸಾಗರ ಸೇರಿದೆ. ಕೆರೆ, ಸರೋವರ ಅಣೆಕಟ್ಟುಕಟ್ಟುಗಳಲ್ಲಿ ಮಣ್ಣಿನ ನಿಕ್ಷೇಪವೂ ಖಾಲಿಯಾಗಿದೆ. ಮಳೆಯ ರಭಸವನ್ನು ತಡೆದು ನೀರನ್ನು ನಿಧಾನವಾಗಿ ಭೂಮಿಗೆ ಇಂಗಿಸಬೇಕಿದ್ದ ಗಿಡಮರಗಳು ನಾಶವಾದುದರಿಂದ ಭೂಕುಸಿತ ಅತಿಯಾಗುತ್ತಿದೆ.

3. ವಾಣಿಜ್ಯೀಕರಣ ತಂದ ಅಪಾಯ

ಕಳೆದೊಂದು ದಶಕದಿಂದೀಚೆಗೆ ಕೊಡಗು ಆಧುನಿಕ, ವಾಣಿಜ್ಯೀಕರಣದ ಬದುಕಿಗೆ ತೆರೆದುಕೊಳ್ಳತೊಡಗಿತು. ಪೂರ್ವಜನರು ಪೃಕೃತಿಯನ್ನೇ ದೇವರೆಂದು ಆರಾಧಿಸಿಕೊಂಡು ಬಂದಿದ್ದರು. ಆದರೆ ಕೊಡವರ ಹೈಫೈ ಜೀವನಕ್ಕೆ ನದಿ ದಡಗಳು ಒತ್ತುವರಿಯಾಗಿ ಮನೆಗಳು ಮೇಲೆದ್ದವು. ಸದಾ ನೀರಿನಾಶ್ರಯವಿದ್ದ ಪ್ರದೇಶಗಳನ್ನು ಭತ್ತದ ಗದ್ದೆಯಾಗಿಸಿ ಬೆಳೆ ಬೆಳೆಯುವಲ್ಲಿ ಹಿರಿಯರು ಸಫಲರಾಗಿದ್ದರು. ಆದರೆ ಅವುಗಳನ್ನು ನಿವೇಶನಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡುವ ಕಾರ್ಯಗಳು ನಡೆದವು.

ಹೊರಗಿನವರು ಬಂದು ಗುಡ್ಡಪ್ರದೇಶಗಳನ್ನು ಖರೀದಿಸಿ ಅಲ್ಲಿ ಜೆಸಿಬಿ ಬಳಸಿ ರಸ್ತೆಗಳನ್ನು ಮಾಡಿದರು. ಕಾಫಿ ತೋಟಗಳನ್ನು ಭೂ ಪರಿವರ್ತನೆ ಮಾಡಿ ಸಾವಿರಾರು ಎಕರೆ ಜಮೀನನ್ನು ಕೇರಳಿಗರಿಗೆ ಮಾರಾಟ ಮಾಡಿದರು. ಕಟ್ಟಡ ಕಟ್ಟಿ ಹೋಂಸ್ಟೇ, ರೆಸಾರ್ಟ್ ನಿರ್ಮಾಣ ಮಾಡಿ ಹಣ ಸಂಪಾದಿಸುವ ದಾರಿ ಕಂಡುಕೊಂಡರು. ಬೆಟ್ಟಗುಡ್ಡವೆನ್ನದೆ ಮನೆಗಳು ತಲೆ ಎತ್ತಿದವು. ಪ್ರವಾಸೋದ್ಯಮದ ಹೆಸರಿನಲ್ಲಿ ವಲಸಿಗರ ಸಂಖ್ಯೆ ಹೆಚ್ಚಾಯಿತು. ಪರಿಣಾಮ ಪರಿಸರ ಮತ್ತಷ್ಟು ಮಾಯವಾಯಿತು.

4. ಮರಳು ಮಾಫಿಯಾ ಪೆಟ್ಟು

ನದಿ ಹಾಗೂ ಹೊಳೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವ ಮರಳನ್ನು ಕೂಡ ನದಿ ಗರ್ಭಕ್ಕಿಳಿದು ತೆಗೆದ ಪರಿಣಾಮ ನೀರು ಸರಾಗವಾಗಿ ಹರಿಯದೆ ಸಮಸ್ಯೆಯಾಗುತ್ತಿದೆ. ಕೊಡಗಿನಲ್ಲಿ ಮೊದಲೆಲ್ಲ ಮುಂಚೆ ನಾಲ್ಕು ತಿಂಗಳು ಮಳೆಯಾಗುತ್ತಿತ್ತು. ಭೂಮಿ ಆ ಮಳೆಯನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಆದರೆ ಈಗ ಆ ಸತ್ವವನ್ನು ಕಳೆದುಕೊಂಡಿದೆ. ಒಂದು ವರ್ಷ ಮಳೆಯೇ ಆಗದಿದ್ದರೆ ಮತ್ತೆ ಒಂದು ವರ್ಷ ಭಾರೀ ಮಳೆಯಾಗುತ್ತದೆ. ಇದರಿಂದ ಕೊಡಗಿಗೆ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸುತ್ತಿದೆ.

5. ಅರಣ್ಯದಲ್ಲಿ ಕಾಡು ಮರವಿಲ್ಲ
ಅರಣ್ಯ ಪ್ರದೇಶದಲ್ಲಿ ಈ ಹಿಂದೆ ನೆಡಲಾದ ತೇಗದ ಮರಗಳು ಎತ್ತರಕ್ಕೆ ಬೆಳೆದು ನಿಂತಿವೆ. ಇದೀಗ ಸರ್ಕಾರದ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಹಲವು ಕಾಡು ಜಾತಿಯ ಸಸಿಗಳನ್ನು ನೆಡಲಾಗಿದೆ. ಆದರೆ ಅವುಗಳು ಎತ್ತರಕ್ಕೆ ಬೆಳೆಯುವವರೆಗೆ ಪೋಷಿಸುವುದು ಕಷ್ಟ ಎನ್ನುವುದು ತಿಳಿದಿರುವ ವಿಷಯ. ತೇಗದ ಮರಗಳಲ್ಲಿ ನೀರು ಹಿಡಿದುಕೊಳ್ಳುವ ಸಾಮರ್ಥ್ಯವೂ ಇಲ್ಲದಿರುವುದರಿಂದ ಇಂದು ಕೊಡಗಿನ ಅರಣ್ಯ ಪ್ರದೇಶ ಕೂಡ ಬರಡು ಭೂಮಿಯಾಗಿದೆ.

6. ಕಾವೇರಿ ತೀರ ಒತ್ತುವರಿ

ಕೊಡಗು ಜಿಲ್ಲೆಯಲ್ಲಿ ಕಾವೇರಿ ನದಿ ಪಾತ್ರ ಹಾಗೂ ಹಲವು ಹೊಳೆ ಹಾಗೂ ತೋಡು ಪ್ರದೇಶಗಳು ನಿರಂತರವಾಗಿ ಒತ್ತುವರಿಯಾಗುತ್ತಿವೆ. ಕುಶಾಲನಗರ ಪ್ರದೇಶದಲ್ಲಿ ಈಗಾಗಲೇ ಇಂತಹ ಹಲವು ಒತ್ತುವರಿ ಪ್ರಕರಣಗಳು ನಡೆದಿದ್ದು, ಕೆಲವರನ್ನು ತೆರವುಗೊಳಿಸಿದ ಉದಾಹರಣೆಗಳೂ ಇವೆ. ನದಿ ತೀರ ಒತ್ತುವರಿಯಿಂದ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಮೀಪದ ಬಡಾವಣೆಗಳಿಗೂ ಆಪತ್ತು ಸಂಭವಿಸಿದೆ.

ಮಾನವನ ದುರಾಸೆಗೆ ಪ್ರಕೃತಿಯಲ್ಲಿ ಅಸಮತೋಲನ ಉಂಟಾಗಿದೆ. ಪೆಟ್ಟುತಿಂದ ಪ್ರಕೃತಿ ಮೊದಲು ಸಹನಾಮಹಿಯಾಗಿಯೇ ಇದ್ದಳು. ಆದರೀಗ ಪ್ರಕೃತಿಯ ಸಹನೆ ಕಟ್ಟೆ ಒಡೆದಿದೆ. ಜೀವರಾಶಿಗಳ ಸಮತೋಲನಕ್ಕೆ ಪ್ರಕೃತಿಯೇ ಮುಂದಾಗಿದೆ. ನಿಸರ್ಗದ ದುಗುಡವನ್ನು ಇನ್ನಾದರೂ ಅರ್ಥೈಸಿಕೊಳ್ಳದಿದ್ದರೆ ಅದರ ಪರಿಣಾಮ ಬಹುಶಃ ಊಹೆಗೆ ನಿಲುಕದು. 

-ವಿಘ್ನೇಶ್ ಎಂ ಭೂತನಕಾಡು 

Follow Us:
Download App:
  • android
  • ios