ನವದೆಹಲಿ[ಆ.11]: ಜಮ್ಮು- ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ್ದನ್ನು ವಿರೋಧಿಸಿ ಸಣ್ಣಪುಟ್ಟಬೀದಿ ಪ್ರತಿಭಟನೆಗಳನ್ನು ಹೊರತುಪಡಿಸಿ ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿಲ್ಲ. ಪ್ರತಿಭಟನೆಗೆ ಎಲ್ಲಿಯೂ 20ಕ್ಕಿಂತಲೂ ಹೆಚ್ಚು ಜನರು ಸೇರುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಶುಕ್ರವಾರದ ಪ್ರಾರ್ಥನೆ ಬಳಿಕ ಶ್ರೀನಗರದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ, ಕೇಂದ್ರ ಸರ್ಕಾರದ ಇತ್ತೀಚಿನ ನಿರ್ಧಾರ ವಿರುದ್ಧ ಪ್ರತಿಭಟನೆ ನಡೆಸಿದರು. ಅವರನ್ನು ಪೆಲೆಟ್‌ಗನ್‌ ದಾಳಿಯ ಮೂಲಕ ಹಿಮ್ಮೆಟ್ಟಿಸಲಾಯಿತು ಎಂಬ ಸುದ್ದಿ ಸಂಸ್ಥೆಯೊಂದರ ವರದಿಯನ್ನು ಸರ್ಕಾರ ತಳ್ಳಿಹಾಕಿದೆ. ಸಾವಿರಾರು ಜನ ಪ್ರತಿಭಟನೆ ನಡೆಸಿದ್ದಾರೆ ಎಂಬ ವರದಿಗಳು ಕಪೋಲ ಕಲ್ಪಿತ. ಶ್ರೀನಗರ/ ಬಾರಾಮುಲ್ಲಾದಲ್ಲಿ ಯಾವುದೇ ಪ್ರತಿಭಟನೆಯಲ್ಲೂ ಎಲ್ಲೂ 20ಕ್ಕಿಂತಲೂ ಹೆಚ್ಚಿನ ಜನರು ಸೇರಿಲ್ಲ ಎಂದು ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.

ಶುಕ್ರವಾರದ ಪ್ರಾರ್ಥನೆ ಶಾಂತಿಯುತ

ಇದೇ ವೇಳೆ ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ಮೊದಲ ಶುಕ್ರವಾರದ ಪ್ರಾರ್ಥನೆ ಶಾಂತಿಯುತವಾಗಿ ನೆರವೇರಿದೆ. ಶ್ರೀನಗರದಲ್ಲಿ 18 ಸಾವಿರಕ್ಕೂ ಹೆಚ್ಚು ಮಂದಿ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಬುದ್ಗಾಂವ್‌ನಲ್ಲಿ 7500 ಹಾಗೂ ಅನಂತ್‌ನಾಗ್‌ ಜಿಲ್ಲೆಯಲ್ಲಿ 11000 ಮಂದಿ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ನಮಾಜ್‌ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಸ್ವಲ್ಪ ಮಟ್ಟಿಗೆ ಸಡಿಲಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.