ಪ್ರಯಾಣಿಕರೆ ಗಮನಿಸಿ, 18 ತಿಂಗಳು ಬಂದ್ ಆಗಲಿದೆ ಈ ರಾಜ್ಯ ಹೆದ್ದಾರಿ
ಪ್ರಯಾಣಿಕರೆ ದಯವಿಟ್ಟು ಗಮನಿಸಿ.. ಈ ಪ್ರಮುಖ ರಾಜ್ಯ ಹೆದ್ದಾರಿ ಮುಂದಿನ 18 ತಿಂಗಳು ಕಾಲ ಬಂದ್ ಆಗಲಿದೆ. ಅನಿವಾರ್ಯವಾಗಿ ನೀವು ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಾಗುತ್ತದೆ. ಏನಿದು ರಸ್ತೆ ವಿವರ.. ಒಮ್ಮೆ ನೋಡಿ..
ಶಿರಸಿ[ಸೆ.13] ಬಹುನಿರೀಕ್ಷಿತ ಶಿರಸಿ-ಕುಮಟಾ ರಸ್ತೆ ಅಗಲೀಕರಣ ದೊಂದಿಗೆ ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಪ್ರಕ್ರಿಯೆ ನವೆಂಬರ್‌ನಿಂದ ಚಾಲನೆಗೊಳ್ಳುವ ನಿರೀಕ್ಷೆಯಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆಯನ್ನು 18 ತಿಂಗಳ ಕಾಲ ಬಂದ್ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ವ್ಯವಹಾರದ ಮೂಲಕ ಮನವಿ ಮಾಡಿದೆ.
ಶಿರಸಿಯಿಂದ ಕುಮಟಾ ವರೆಗೆ ಸುಮಾರು 60 ಕಿಮೀ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಳ್ಳಲಿದ್ದು, ಅಂದಾಜು 370 ಕೋಟಿ rU. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ. ಕಾಮಗಾರಿ ಮುಂಬರುವ ನವೆಂಬರ್ ಅಥವಾ ಡಿಸೆಂಬರ್‌ನಿಂದ ಪ್ರಾರಂಭವಾಗಲಿದ್ದು, ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ತನಕ ರಸ್ತೆಯನ್ನು ಬಂದ್ ಮಾಡಿ ಅನುಕೂಲ ಮಾಡಿಕೊಡುವಂತೆ ಪ್ರಾಧಿಕಾರದಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಸ್ತೆಯನ್ನು 18 ತಿಂಗಳುಗಳ ಕಾಲ ಬಂದ್ ಮಾಡುವ ಪ್ರಸ್ತಾವನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಭಿಪ್ರಾಯವನ್ನು ಕೇಳಿದ್ದಾರೆ ಎನ್ನಲಾಗಿದೆ. ಬಂದ್ ಮಾಡಿದಲ್ಲಿ ಪರ್ಯಾಯ ವ್ಯವಸ್ಥೆ, ಸಾರ್ವಜನಿಕರಿಗೆ ಆಗುವ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಭಿಪ್ರಾಯ ಕೇಳಿದ್ದು, ಅವನ್ನೆಲ್ಲಾ ಕ್ರೊಢೀಕರಿಸಿ ರಾಷ್ಟ್ರೀಯ ಪ್ರಾಧಿಕಾರಕ್ಕೆ ಉತ್ತರಿಸಲಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥ ಕರ್ನಲ್ ಜಾನ್ಬಾಸ್ ಪ್ರತಿಕ್ರಿಯೆ ನೀಡಿ ರಸ್ತೆಯನ್ನು ಬಂದ್ ಮಾಡುವಂತೆ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಅದರ ಜೊತೆಗೆ ರಸ್ತೆಯ ಅಗಲೀಕರಣ ಸಂದರ್ಭದಲ್ಲಿ ಬೇಕಾಗುವ ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಕೆಲಸಗಳ ಅನಮತಿಯನ್ನೂ ಸಹ ತೆಗೆದುಕೊಳ್ಳಲಾಗುತ್ತಿದೆ. ಮುಂದಿನ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಕೆಲಸ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಪರ್ಯಾಯ ಮಾರ್ಗ ಯಾವುದು?
ಶಿರಸಿ ಕುಮಟಾ ರಸ್ತೆಯನ್ನು ಬಂದ್ ಮಾಡಿದಲ್ಲಿ ಮುಖ್ಯವಾಗಿ ಕುಮಟಾ ಒಂದೆ ಅಲ್ಲದೇ ಕಾರವಾರ, ಅಂಕೋಲಾ ಹೋಗುವ ವಾಹನಗಳಿಗೂ ತೊಂದರೆ ಆಗುತ್ತದೆ. ಅವುಗಳಿಗೆ ಪರ್ಯಾಯ ಮಾರ್ಗವಾಗಿ ಕಾರವಾರ, ಅಂಕೋಲಾ ಹೋಗುವವರಿಗೆ ಯಲ್ಲಾಪುರದ ಮೇಲೆ ಎನ್‌ಎಚ್ ೬೩ರಲ್ಲಿ ಹೋಗುವಂತೆ ಹಾಗೂ ಕುಮಟಾ ಹೋಗುವವರು ಸಿದ್ದಾಪುರದ ಮೇಲೆ ಬಡಾಳ್ ಮೂಲಕ ಹೋಗುವಂತೆ ಪರ್ಯಾಯ ಮಾರ್ಗವನ್ನು ಶಿಫಾರಸ್ಸುಮಾಡಲಾಗಿದೆ ಎಂದು ಕರ್ನಲ್ ಜಾನ್ಬಾಸ್ ತಿಳಿಸಿದ್ದಾರೆ.