ನವದೆಹಲಿ(ಜೂ.06): ರಾಷ್ಟ್ರ ರಾಜಧಾನಿ ನವದೆಹಲಿ ಅಕ್ಷರಶಃ ಕಾದ ಕೆಂಡವಾಗಿದೆ. 45 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ತಾಪಮಾನದಿಂದಾಗಿ ಜನ ಕಂಗಾಲಾಗಿದ್ದಾರೆ.

ಆದರೆ ಸುಡುವ ಊರಲ್ಲೋರ್ವ ಸರ್ದಾರ್‌ಜೀ ತಾತ ಮಾತ್ರ ಬಿಸಿಲಿನಿಂದ ಬಳಲುವ ಜನರಿಗೆ ನೀರು ವಿತರಿಸುತ್ತಾ ಸೂರ್ಯನೊಡ್ಡಿದ ಸವಾಲನ್ನು ಸ್ವೀಕರಿಸಿದ್ದಾರೆ.

ಹೌದು, ರಾಷ್ಟ್ರ ರಾಜಧಾನಿಯಲ್ಲಿ ಇದೀಗ ಎಲ್ಲಿ ನೋಡಿದರೂ ಈ ಸಿಖ್ ತಾತನದ್ದೇ ಮಾತು. ರಸ್ತೆಯ ಬದಿಯಲ್ಲಿ ಬೈಕ್ ನಿಲ್ಲಿಸಿ ಬಿಸಲಿನಲ್ಲಿ ಊರು ಸುತ್ತುವ ಜನರನ್ನು ತಡೆದು ಒಂದು ಗ್ಲಾಸ್ ನೀರು ಕೊಡುತ್ತಾರೆ ಈ ತಾತ.

ಬಸ್ಸುಗಳಲ್ಲಿ ಓಡಡುವ ಪ್ರಯಾಣಿಕರು ಮತ್ತು ಪಾದಚಾರಿಗಳಿಗೆ ನೀರು ವಿತರಿಸುವ ಈ ತಾತ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದಾರೆ.

ಟ್ವಿಟ್ಟರ್‌ನಲ್ಲಿ ನೀರು ವಿತರಿಸುವ ತಾತನ ವಿಡಿಯೋಗೆ 6 ಸಾವಿರಕ್ಕೂ ಅಧಿಕ ಲೈಕ್ಸ್ ಸಿಕ್ಕಿದ್ದು, 3 ಸಾವಿರಕ್ಕೂ ಅಧಿಕ ಬಾರಿ ರಿಟ್ವೀಟ್ ಮಾಡಲಾಗಿದೆ.