ಕೆಂಟ್ ಪೊಲೀಸ್ ಮುಖ್ಯಸ್ಥ ಕೆನ್ ಥಾಮಸ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ದುಷ್ಕರ್ಮಿಯನ್ನು ಹಿಡಿಯುವ ಕಾರ್ಯಾಚರಣೆ ನಡೆದಿದೆ ಎಂದು ಭರವಸೆ ನೀಡಿದ್ದಾರೆ.
ವಾಷಿಂಗ್ಟನ್(ಮಾ. 05): ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯನ ಮೇಲೆ ದಾಳಿಯಾದ ಘಟನೆ ವರದಿಯಾಗಿದೆ. ವಾಷಿಂಗ್ಟನ್ ರಾಜ್ಯದ ಕೆಂಟ್ ನಗರದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ 39 ವರ್ಷದ ಸಿಖ್ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾನೆ. ಹಲ್ಲೆಗೊಳಗಾದ ಸಿಖ್ ವ್ಯಕ್ತಿಯನ್ನು ದೀಪ್ ರಾಯ್ ಎಂದು ಗುರುತಿಸಲಾಗಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಘಟನೆಯನ್ನು ಗಮನಿಸುತ್ತಿದ್ದು, ಸಿಖ್ ವ್ಯಕ್ತಿಯ ನೆರವಿಗೆ ಧಾವಿಸಿದೆ. ದೀಪ್ ರಾಯ್'ನ ಕೈಗೆ ಬುಲೆಟ್ ತಗುಲಿದ್ದು, ಸಾವಿನ ದವಡೆಯಿಂದ ಪಾರಾಗಿದ್ದಾರೆನ್ನಲಾಗಿದೆ.
ಹೇಗಿದು ಘಟನೆ?
ಕೆಂಟ್'ನಲ್ಲಿರುವ ತಮ್ಮ ಮನೆಯ ಹೊರಗೆ ದೀಪ್ ರಾಯ್ ತನ್ನ ವಾಹನದಲ್ಲಿ ಹೋಗುತ್ತಿರುತ್ತಾರೆ. ಆಗ, 6 ಅಡಿ ಎತ್ತರದ ಬಿಳಿಯ ವ್ಯಕ್ತಿಯೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಎದಿರುಗೊಳ್ಳುತ್ತಾರೆ. ಇಬ್ಬರಿಗೂ ಮಾತಿಗೆ ಮಾತು ಬೆಳೆಯುತ್ತದೆ. ಆ ನಂತರ ಆ ಅಮೆರಿಕನ್ ವ್ಯಕ್ತಿಯು "ನಿನ್ನ ದೇಶಕ್ಕೆ ವಾಪಸ್ ಹೋಗು" ಎಂದು ಕೂಗುತ್ತಾ ರಾಯ್'ನ ಕೈಗೆ ಗುಂಡು ಹೊಡೆಯುತ್ತಾನೆ ಎಂದು ಅಮೆರಿಕದ ಸಿಯಾಟಲ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ. ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.
ಕೆಂಟ್ ಪೊಲೀಸ್ ಮುಖ್ಯಸ್ಥ ಕೆನ್ ಥಾಮಸ್ ಅವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ದುಷ್ಕರ್ಮಿಯನ್ನು ಹಿಡಿಯುವ ಕಾರ್ಯಾಚರಣೆ ನಡೆದಿದೆ ಎಂದು ಭರವಸೆ ನೀಡಿದ್ದಾರೆ.
