Asianet Suvarna News Asianet Suvarna News

ಉತ್ತರಾಯಣದ ಪರ್ವಕಾಲ ಮಕರ ಸಂಕ್ರಾಂತಿ ಸಂಭ್ರಮ

ವರ್ಷದ ಅಂತ್ಯದ ಗುರುತಾಗಿ ಎಳ್ಳನ್ನ ಸ್ವೀಕರಿಸುತ್ತಾರೆ. ಚೈತ್ರಮಾಸದ ಪ್ರಾರಂಭದ ಗುರುತಾಗಿ ಬೆಲ್ಲವನ್ನ ಹಂಚಲಾಗುತ್ತದೆ. ಹಿಂದಿನ ವರ್ಷವನ್ನ ಕಳೆದು ಮುಂದಿನ ಸಿಹಿ ಜೀವನಕ್ಕೆ ಹಾದಿತೋರುವ ಹೊಸ್ತಿಲಿನಂತೆ ಬೆಳಗುವ ಸಂಕ್ರಾಂತಿ, ಜೀವನದ ರಥವನ್ನ ಪರಮಾತ್ಮನೆಡೆಗೆ ಎಳೆಯುವ ಭಕ್ತರ ಅಂತರಂಗ ಬಹಿರಂಗಗಳ ಪ್ರತೀಕ

Significance of Sankranti

-ಬೆಳ​ಗೆರೆ ಶ್ರೀಕಂಠ ಶಾಸ್ತ್ರಿ
ನಮ್ಮ ಭಾರತೀಯರ ಮಹಾಪರ್ವಗಳಲ್ಲಿ ಉತ್ತರಾಯಣ ಕಾಲವೂ ಒಂದು. ಇದನ್ನ ಮಕರ ಸಂಕ್ರಮಣ ಕಾಲ ಎಂದು ಕರೀತಾರೆ. ಸಂಕ್ರಮಣ ಅಂದ್ರೆ ಸಂಕ್ರಾಂತಿ ಅಂತಾರೆ. ಸಂಕ್ರಾಂತಿ ಅಂದ್ರೆ ಅರ್ಥ ಏನ್‌ ಗೊತ್ತಾ? ಸಂಯುಕ್ತ  ಕ್ರಮಣ ಅಂತ. ಅಂದರೆ ಒಳ್ಳೆಯ ನಡಿಗೆ ಅಂತ. ಸೂರ್ಯ ತನ್ನ ಪಯಣವನ್ನ ಉತ್ತರದ ಕಡೆಗೆ ಪ್ರಾರಂಭಿಸ್ತಾನೆ. ಉತ್ತರ ಅಂದ್ರೆ ಶ್ರೇಷ್ಠತೆ ಅಂತ. ಹಾಗಾಗೇ ಉತ್ತರೋತ್ತರ ಅಭಿವೃದ್ಧಿರಸ್ತು ಅನ್ನೋದು. ಇಲ್ಲಿ ಸೂರ್ಯ ದಕ್ಷಿಣ ಭಾಗದಿಂದ ಉತ್ತರದ ಕಡೆಗೆ ಚಲಿಸಲು ಅನುವಾಗುತ್ತಾನೆ. ಭೂಮಿಯಲ್ಲಿ ಈ ಮಕರ ಸಂಕ್ರಾಂತಿ ಹಾಗೂ ಕರ್ಕಾಟಕ ದಿನದಲ್ಲಿ ಮಾತ್ರ ಸರಿಯಾದ ಹಗಲು ರಾತ್ರಿಗಳನ್ನ ಗಮನಿಸಬಹುದು. ಉಳಿದಂತೆ ನಮಗೀಗಾಗಲೇ ಅನುಭವಕ್ಕೆ ಬಂದಂತೆ ಇಷ್ಟುದಿನ ಹಗಲು ಕಮ್ಮಿ ರಾತ್ರಿ ಹೆಚ್ಚಿತ್ತು. ನಾವೆಲ್ಲಾ ಮಾತಾಡ್ಕೊಳ್ತಾ ಇದ್ವಲ್ಲಾ ಏನಪ್ಪಾ ಇಷ್ಟುಬೇಗ ಕತ್ತಲಾಗತ್ತೆ ಅಂತ, ಅದಕ್ಕೆ ಕಾರಣವೇ ಈ ಸೂರ್ಯನ ನಡಿಗೆ. ನಮ್ಮ ಭೂಮಿ ಮೊಟ್ಟೆಯಾಕಾರದಲ್ಲಿ ಇರೋದ್ರಿಂದ ಸೂರ್ಯನು ಉತ್ತರ ಭಾಗದ ತುದಿ ಹಾಗೂ ದಕ್ಷಿಣ ಭಾಗದ ತುದಿಗಳನ್ನ ಮುಟ್ಟಿದ ದಿನ ಅರ್ಧರಾತ್ರಿ ಅರ್ಧ ಹಗಲನ್ನ ಕಾಣಬಹುದು.

ಅಂದಹಾಗೆ ಇವತ್ತು ದಕ್ಷಿಣ ಭಾಗದ ತುದಿಯಲ್ಲಿ ಸೂರ್ಯನಿದ್ದಾನೆ. ಇನ್ಮೇಲೆ ಸ್ವಲ್ಪ ಸ್ವಲ್ಪವಾಗಿ ಉತ್ತರದ ಕಡೆಗೆ ಹೊರಳ್ತಾನೆ. ಮುಂದಿನ ದಿನಗಳಲ್ಲಿ ಹಗಲು ಜಾಸ್ತಿ ಆಗತ್ತೆ. ಇದಿಷ್ಟುಸೂರ್ಯನ ಚಲನೆಗೆ ಸಂಬಂಧಿಸಿದ್ದು. ಇಲ್ಲಿ ಮುಖ್ಯವಾದ ವಿಚಾರ ಅಂದ್ರೆ ಸೂರ್ಯ ಹಾಗೆ ದಿಕ್ಕಿಗೆ ಹೊರಳುವ ಸಮಯ ಇದ್ಯಲ್ಲ ಅದು ಅತ್ಯಂತ ಪುಣ್ಯಕಾಲ ಅಂತಾರೆ. ಅಯನೇ ವಿಂಶತಿ ಪೂರ್ವಂ, ಅಯನೇ ವಿಂಶತಿ ಪರಂ ಅಂತ. ಉತ್ತರಾಯಣ ಕಾಲ ಹುಟ್ಟಿದ ನಂತರದ 20 ಘಳಿಗೆ ಪುಣ್ಯಕಾಲ. ಮತ್ತು ಕರ್ಕಾಟಕ ಮಾಸದಲ್ಲಿ ಸೂರ್ಯ ದಕ್ಷಿಣಾಯಣಕ್ಕೆ ಬೀಳುವ ಮೊದಲ 20 ಘಳಿಗೆ ಈ ಸಮಯವನ್ನ ಪುಣ್ಯಕಾಲ ಅಂತಾರೆ. ಈ ಪುಣ್ಯಕಾಲದಲ್ಲಿ ನಾವು ಧ್ಯಾನ, ಅರ್ಚನೆ, ತಪಸ್ಸು ಇತ್ಯಾದಿಗಳಲ್ಲಿ ನಿರತರಾದರೆ ಒಳ್ಳೆಯದು ಅಂತಾರೆ.

ವಾಸ್ತವವಾಗಿ ಸೂರ್ಯ ಮೇಷಾದಿ 12 ರಾಶಿಗಳಲ್ಲಿ ಚಲಿಸ್ತಾನೆ.
ಮೇಷಾದಿಷು ದ್ವಾದಶ ರಾಶಿಷು ಕ್ರಮೇಣ ಸಂಸರತ: ಸೂರ್ಯಸ್ಯ 
ಪೂರ್ವಾಸ್ಮಾದ್ರಾಶೇ: ಉತ್ತರರಾಶೌ ಸಂಕ್ರಮಣಂ ಪ್ರವೇಶ: ಸಂಕ್ರಾಂತಿ: ಅಂತ. 
ಪ್ರತಿ ರಾಶಿಗೆ ಪ್ರವೇಶಿಸಿದಾಗ್ಲೂ ಸಂಕ್ರಮಣ ಆಗತ್ತೆ. ಈಗ ಸೂರ್ಯ ಧನಸ್ಸು ರಾಶಿಯಿಂದ ಮಕರಕ್ಕೆ ಪ್ರವೇಶಿಸ್ತಾನೆ. ಅದನ್ನ ಮಕರ ಸಂಕ್ರಮಣ ಅಂತಾರೆ. ಈ ಮಕರ ರಾಶಿಗೆ ಸೂರ್ಯ ಪ್ರವೇಶಿಸಿದ ಮೇಲೆ ಆ ಕಾಲವನ್ನ ಉತ್ತರಾಯಣ ಅಂತಾರೆ. ಅಯನ ಅಂದ್ರೆ ನಡಿಗೆ ಅಂತ್ಲೇ. ಉತ್ತರಾಯಣ ಅಂದ್ರೆ ಉತ್ತರದ ಕಡೆಗಿನ ಪಯಣ ಅಂತ. ಈ ಉತ್ತರಾಯಣಕ್ಕೆ ನಮ್ಮ ವೈದಿಕ ಆಚರಣೆಯಲ್ಲಿ ಹೆಚ್ಚಿನ ಮಹತ್ವ ಇದೆ. ಈ ಉತ್ತರಾಯಣವನ್ನ ದೇವತೆಗಳ ಹಗಲು ಅಂತಾರೆ. ಇಂಥಾ ಕಾಲದಲ್ಲೇ ಮದುವೆ, ಗೃಹಪ್ರವೇಶ, ಉಪನಯನದಂಥಾ ಶುಭ ಕಾರ್ಯಗಳನ್ನು ಮಾಡೋದು. ಅಷ್ಟೇ ಯಾಕೆ? ಸಾಮಾನ್ಯವಾಗಿ ಎಲ್ಲ ದೇವರ ಜಾತ್ರಾ ಉತ್ಸವಗಳು, ದೇವತಾ ಕಾರ್ಯಗಳೆಲ್ಲ ನಡೆಯೋದು ಇದೇ ಉತ್ತರಾಯಣ ಕಾಲದಲ್ಲಿ. ಈ ಉತ್ತರಾಯಣದ ಮಹತ್ವವನ್ನ ಉಪನಿಷತ್ತುಗಳೂ ಸಾರಿವೆ: ತಾನ್ವೈದ್ಯುತಾನ್‌ ಪುರುಷೋ ಮಾನಸ ಏತ್ಯ ಬ್ರಹ್ಮ ಲೋಕಾನ್ಗಮಯಂತಿ, ತೇಷು ಬ್ರಹ್ಮ ಲೋಕೇಷು ಪರಾ: ಪರಾವತೋ ವಸಂತಿ ತೇಷಾಂ ನ ಪುನರಾವೃತ್ತಿ: ಅಂತ.

ಹಾಗಂದ್ರೆ ಈ ಉತ್ತರಾಯಣದಲ್ಲಿ ಪ್ರಾಣ ಬಿಟ್ಟವರು ಮುಕ್ತಿಯನ್ನ ಹೊಂದ್ತಾರೆ, ದಕ್ಷಿಣಾಯಣದಲ್ಲಿ ಪ್ರಾಣಬಿಟ್ಟವರು ಪುನಾವೃತ್ತಿ ಹೊಂದುತ್ತಾರೆ ಅಂತ. ಹಾಗಾಗೇ ಭೀಷ್ಮಾಚಾರ್ಯರು ಉತ್ತರಾಯಣದವರೆಗೆ ಕಾದು ಪ್ರಾಣ ಬಿಟ್ಟದ್ದು. ಹಾಗಾದರೆ ಅಯೋಗ್ಯರು, ಪುಂಡರು, ಕೊಲೆಗಡುಕರು ಉತ್ತರಾಯಣದಲ್ಲಿ ಸತ್ತರೆ ಅವರಿಗೆ ಮೋಕ್ಷ ಆಗತ್ತಾ ಅನ್ನೋ ಪ್ರಶ್ನೆ ನಮ್ಮನ್ನ ಕಾಡತ್ತೆ. ಅದಕ್ಕೆ ಶಂಕರ ಭಗವತ್ಪಾದರು ಉತ್ತರ ಕೊಡ್ತಾರೆ: ಆತ್ಮ ಯಥಾತ್ಮ್ಯವನ್ನ ಅರಿತವರು, ಪರಬ್ರಹ್ಮನ ನಿಜ ಅರ್ಥ ತಿಳಿದವರು, ಜ್ಞಾನಿಗಳು, ಸದಾ ಬ್ರಹ್ಮಚರ್ಯ (ಬ್ರಹ್ಮನ್‌ ಚರತಿ, ಬ್ರಹ್ಮನಲ್ಲಿ ಚರಿಸುವವ ಅಂತ. ಮದುವೆ ಆಗದವನು ಅಂತ ಅಲ್ಲ) ನಿರತರಿಗೆ ದಕ್ಷಿಣಾಯಣದಲ್ಲಿಯೂ ಮುಕ್ತಿ ಇದೆ. ಅಜ್ಞಾನಿ ಯಾವಾಗ ಸತ್ತರೂ ಅವನದೇ ಮಾರ್ಗ ಅವನು ಅನುಸರಿಸುತ್ತಾನೆ ಅಂತಾರೆ.

ಸುಮ್ಮನೆ ನಿಮಗೆ ಗೊತ್ತಿರಲಿ ಅಂತ ಇದರ ಇನ್ನೊಂದು ಅರ್ಥ ತಿಳಿಸ್ತಿದೀನಿ: ಈ ಪರ್ವ ಕಾಲದಲ್ಲಿ ಸಾಮಾನ್ಯವಾಗಿ ಲಕ್ಷ್ಮೇ ಪೂಜೆಯನ್ನ ಮಾಡ್ತಾರೆ. ಆಕೆಯನ್ನ ಇಕ್ಷು ದಂಡಿ ಅಂತಾರೆ. ಅಂದರೆ ಕಬ್ಬನ್ನ ಹಿಡಿದಿರುವವವಳು ಅಂತ. ಅಂಥಾ ಲಕ್ಷ್ಮೇಯನ್ನ ಆರಾಧಿಸಬೇಕು. ಲಕ್ಷ್ಮೇ ಅಂದ್ರೆ ಲಕ್ಷ್ಯತಿ ಸರ್ವಂ ಸದಾ ಅಂತ. ಯಾರು ಸರ್ವ ಕಲಾಲಕ್ಕೂ ಸರ್ವವನ್ನೂ ನೋಡುತ್ತಾಳೋ ಅವಳೇ ಲಕ್ಷ್ಮೇ. ಎಲ್ಲವನ್ನೂ ನೋಡುವವಳು ಅಂದರೆ ಸರ್ವ ಸಮಾನತೆ ಅಂತ. ಅಂದಹಾಗೆ ನಾವುಗಳು ಎಳ್ಳು ಬೆಲ್ಲ ಹಂಚೋದೇ ಈ ಕಾರಣಕ್ಕೆ. ಎಳ್ಳಿನಲ್ಲಿ ಲಕ್ಷ್ಮೇ ವಾಸವಿರ್ತಾಳೆ. ಎಳ್ಳನ್ನ ಹಂಚುವುದರಿಂದ ಸಂಪತ್ತನ್ನ ಹಂಚಿದಂತಾಗತ್ತೆ. ಲಕ್ಷ್ಮೇ ಎಲ್ಲಿಯೂ ನಿಲ್ಲುವವಳಲ್ಲ. ಹಾಗಾಗಿ ಆಕೆಯನ್ನ ಎಲ್ಲರಿಗೂ ಸಮರ್ಪಿಸಿ ಇತರರಲ್ಲಿ ಸಂಪತ್‌ ವೃದ್ಧಿ ಆಗಲಿ ಅಂತ ಆಶಿಸುವ ಕ್ರಮ ಇದು. ಮತ್ತು ಆಕೆ ಇಕ್ಷುದಂಡಿ, ಇಕ್ಷು ಅಂದ್ರೆ ಕಬ್ಬು, ಕಬ್ಬಿನಿಂದಲೇ ಬೆಲ್ಲ ಬಂದದ್ದು. ಹಾಗಾಗಿ ಎಳ್ಳು- ಬೆಲ್ಲ ಸೇರಿಸಿ ಹಂಚುವ ಕ್ರಮ ನಮ್ಮಲ್ಲಿ ಬಂತು.

ಇದರ ಹೊರತಾಗಿ ಒಂದು ಸಾರ್ವತ್ರಿಕ ಅಭಿಪ್ರಾಯ ಇದೆ: ಎಳ್ಳು ದಾನ ಮಾಡಬಾರದು, ತಿಲದಾನ ಸ್ವೀಕರಿಸಿದರೆ ಪಾಪ ಬರತ್ತೆ ಅನ್ನೋದು. ಜ್ಞಾನಿನಿಯಾದವನಿಗೆ ಯಾವ ಪಾಪವೂ ಅಂಟುವುದಿಲ್ಲ. ಗೀತೆಯಲ್ಲಿ ಹೇಳಿದಂತೆ : ಲಿಪ್ಯತೇ ನ ಸ ಪಾಪೇನ ಪದ್ಮ ಪತ್ರಮಿವಾಂಬಸ ಅಂದರೆ, ತಾವರೆ ಎಲೆಗೆ ನೀರು ಹೇಗೆ ಅಂಟುವುದಿಲ್ಲವೋ ಹಾಗೆ ಜ್ಞಾನಿಗೆ ಪಾಪ ಅಂಟುವುದಿಲ್ಲ ಅಂತ. ಹಾಗಾಗಿ ಈ ಮೂಲಕವಾದರೂ ಸರ್ವರೂ ಜ್ಞಾನಿಗಳಾಗಲಿ ಜ್ಞಾನಿಯಾದವರು ಎಳ್ಳುಬೆಲ್ಲ ಹಂಚಲಿ ಅನ್ನೋ ಉದ್ದಿಶ್ಯವೂ ಈ ಹಬ್ಬದಲ್ಲಿದೆ. ಆದರೆ ಇತ್ತೀಚೆಗೆ ಬರೀ ಎಳ್ಳಿನ ಹಂಚಿಕೆ ಅಷ್ಟೇ ಆಗ್ತಾ ಇಲ್ಲ. ಅದರ ಜೊತೆ ಕಡಲೆ, ಬೆಲ್ಲ, ಕೊಬರಿ ಇತ್ಯಾದಿಗಳನ್ನೂ ಹಂಚುತ್ತಾರೆ.

ಯಾಕೆ ಅನ್ನೋ ವಿಚಾರ ಕಾಡತ್ತೆ ಅಲ್ವಾ, ಬರೀ ಎಳ್ಳನ್ನ ತಿಂದರೆ ಕಫ, ಪಿತ್ತ ಹೆಚ್ಚಾಗಿ ಆರೋಗ್ಯ ಕೆಡತ್ತೆ. ಹಾಗಾಗಿ ಬೆಲ್ಲ, ಕೊಬ್ಬರಿ ಬೆರೆಸಿ ತಿಂದ್ರೆ ಆರೋಗ್ಯಕ್ಕೆ ಪುಷ್ಟಿ, ತುಷ್ಟಿಹಾಗಾಗಿ ಅದರ ಸೇವನೆ ಒಳ್ಳೆದೇ ತರ್ಕ ಮಾಡುವ ಗೋಜು ಬೇಡ. 
ಇಂಥಾ ಪರ್ವಕಾಲದಲ್ಲಿ ನಾವು ಆಚರಿಸಬೇಕಾದ ಸಾಂಪ್ರದಾಯಿಕ ಆಚರಣೆಗಳೂ ಕೆಲವಿವೆ. ಈ ದಿನದಲ್ಲಿ ಸುಗ್ಗಿ ಪೂಜೆ ಮಾಡ್ತಾರೆ. ಬೆಳೆದ ಫಲವೆಲ್ಲ ಕಟಾವಿಗೆ ಬಂದು ಅದನ್ನ ಪೂಜಿಸಿ ಹಂಚಿ ತಿನ್ನುವ ಸಂಭ್ರಮ ಜಾನಪದೀಯ. ಮತ್ತು ಗೋವಿನ ಪೂಜೆಗಳನ್ನೂ ಮಾಡ್ತಾರೆ. ಹೀಗೆ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಅಳವಡಿಸಿಕೊಂಡ ಸರ್ವ ಆಚರಣೆಗಳಿಗೂ ಒಂದು ಅರ್ಥ ಇದೆ.

ಮತ್ತು ನಮ್ಮ ಸರ್ವ ಕರ್ಮಗಳೂ ಜ್ಞಾನದಲ್ಲೇ ಪರಿಸಮಾಪ್ತಿ ಹೊಂದುವ ವಿಷಯವನ್ನ ಅರಿತು ಇಂಥಾ ಆಚರಣೆಗಳು ಬೆಳಗಿವೆ. ಅಂಥಾ ಪರ್ವ ಆಚರಣೆಯಲ್ಲಿ ಈ ಸಂಕ್ರಾಂತಿ ಒಂದು. ಒಂದು ಅರ್ಥದಲ್ಲಿ ಚೈತ್ರಮಾಸವನ್ನ ಸ್ವಾಗತಿಸುವ ಅರ್ಥದಲ್ಲಿದೆ ಈ ಹಬ್ಬ. ಈ ವರ್ಷದ ಅಂತ್ಯ ಗುರುತಾಗಿ ಎಳ್ಳನ್ನ ಸ್ವೀಕರಿಸಿದರೆ ಚೈತ್ರಮಾಸದ ಪ್ರಾರಂಭದ ಗುರುತಾಗಿ ಬೆಲ್ಲವನ್ನ (ಬೇವು ಬೆಲ್ಲದಲ್ಲಿ) ಹಂಚಿ ಹಿಂದಿನ ವರ್ಷವನ್ನ ಕಳೆದು ಮುಂದಿನ ಸಿಹಿ ಜೀವನಕ್ಕೆ ಹಾದಿತೋರುವ ಹೊಸ್ತಿಲಿನಂತೆ ಬೆಳಗುವ ಈ ಸಂಕ್ರಾಂತಿ ಜೀವನದ ರಥವನ್ನ ಪರಮಾತ್ಮನೆಡೆಗೆ ಎಳೆಯುವ ಭಕ್ತರ ಅಂತರಂಗ ಬಹಿರಂಗಗಳ ಪ್ರತೀಕವಾಗಿದೆ. 

(ಕನ್ನಡ ಪ್ರಭ)

Follow Us:
Download App:
  • android
  • ios