ಬೆಂಗಳೂರು [ಜೂ.30]  : ಬಿಜೆಪಿಯತ್ತ ವಾಲಿದಂತೆ ಕಾಣುತ್ತಿರುವ ಅಹಿಂದ ವರ್ಗವನ್ನು ಮತ್ತೆ ಜಾತ್ಯತೀತ ಚೌಕಟ್ಟಿಗೆ ಸೆಳೆಯುವ ಉದ್ದೇಶದೊಂದಿಗೆ ಆಗಸ್ಟ್‌ನಲ್ಲಿ ನಡೆಸಲು ಉದ್ದೇಶಿಸಿರುವ ಅಹಿಂದ ಜಾಗೃತಿ ಸಮಾವೇಶದ ಸಂಘಟನೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಹೊಸ ಅಹಿಂದ ನಾಯಕರ ಪಡೆಯೊಂದನ್ನು ಸೃಷ್ಟಿಸುವ ಅನಿವಾರ್ಯತೆ ಎದುರಾಗಿದೆ.

ದೇವೇಗೌಡ ಅವರ ವಿರುದ್ಧ ಸಿಡಿದೆದ್ದು ತಮ್ಮ ಡಿಸಿಎಂ ಸ್ಥಾನವನ್ನು ಪಣಕಿಟ್ಟು ಅಹಿಂದ- 1 (ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿ ಯಲ್ಲಿ) ರೂಪಿಸಿದ್ದ ವೇಳೆ ಸಿದ್ದರಾಮಯ್ಯ ಅವರೊಂದಿಗೆ ಇದ್ದ ಪ್ರಬಲ ಅಹಿಂದ ನಾಯಕರ ಪಡೆ ಇದೀಗ ಛಿದ್ರಗೊಂಡಿದೆ. ಹೀಗಾಗಿ, ಯುವ ನಾಯಕರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪಡೆಯೊಂದನ್ನು ಸೃಷ್ಟಿಸಿ ಈ ಪಡೆಗೆ ಅಹಿಂದ ಜಾಗೃತಿ ಸಮಾವೇಶಗಳನ್ನು ಸಂಘಟಿಸುವ ಹೊಣೆ ನೀಡುವ ಚಿಂತನೆ ಸಿದ್ದರಾಮಯ್ಯ ಹಾಗೂ ಅವರ ಆಪ್ತ ತಂಡಕ್ಕೆ ಇದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಅವರು ರೂಪಿಸಿದ್ದ ಅಹಿಂದ-  1 ರ ಅವಧಿಯಲ್ಲಿ ಜೆ.ಪಿ.ನಾರಾಯಣಸ್ವಾಮಿ ಸಿ.ಎಂ.ಇಬ್ರಾಹಿಂ, ಡಾ| ಎಚ್.ಎಸ್.ಮಹದೇವಪ್ಪ, ಎಂ.ಮಹದೇ ವಪ್ರಸಾದ್, ಹಾಲಿ ಸಚಿವ ಸತೀಶ್ ಜಾರಕಿಹೊಳಿ, ಕುರುಬ ಸಮಾಜದ ಪ್ರಮುಖ ಸಂಘಟಕ ಮುಕುಡಪ್ಪ, ಮಾಜಿ ಸಚಿವ ರೇವಣ್ಣ, ಆಗ ಕಾಂಗ್ರೆಸ್‌ನಲ್ಲಿದ್ದ ಎಚ್.ವಿಶ್ವನಾಥ್, ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ, ಮಂಚನಹಳ್ಳಿ ಮಹ ದೇವ ಮೊದಲಾದ ನಾಯಕರು ಇದ್ದರು. 

ಈ ಪೈಕಿ ಬಹುತೇಕರು ಈಗ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಇಲ್ಲ. ಇರುವ ಕೆಲವರು ಹಿಂದಿನ ಪ್ರಭಾವ ಉಳಿಸಿಕೊಂಡಿಲ್ಲ. ಹೀಗಾಗಿ, ಅಹಿಂದ ವರ್ಗವನ್ನು ಸೆಳೆಯುತ್ತಿರುವ ಪ್ರಬಲ ಬಿಜೆಪಿಗೆ ಸಡ್ಡು ಹೊಡೆಯುವ ಉದ್ದೇಶದಿಂದ ಆರ್ಥಿಕವಾಗಿ ಹಾಗೂ  ಸಂಘಟನಾತ್ಮಕವಾಗಿ ಪ್ರಬಲವಾಗಿರುವ ಯುವ ಪಡೆಯನ್ನು ಸಂಘಟಿಸುವ ದಿಸೆಯಲ್ಲಿ ಸಿದ್ದರಾಮಯ್ಯ ಹಾಗೂ ಅವರ ತಂಡ ಮುಂದಾಗಿದೆ.

ಯಾವುದು ಈ ಹೊಸ ಪಡೆ: ಸಿದ್ದರಾಮಯ್ಯ ಅವರೇನಾದರೂ ಆಗಸ್ಟ್ ತಿಂಗಳಿನಿಂದ ಗಂಭೀರವಾಗಿ ಅಹಿಂದ ಜಾಗೃತಿ ಸಮಾವೇಶಗಳನ್ನು ಆರಂಭಿಸಿದರೆ ಅವರೊಂದಿಗೆ ನಿಲ್ಲುವ ಪ್ರಮುಖ ಸದಸ್ಯರು ಹೆಬ್ಬಾಳ ಶಾಸಕ ಬೈರತಿ ಸುರೇಶ್, ಸಚಿವ ಜಮೀರ್ ಅಹ್ಮದ್, ಆರ್.ಬಿ.ತಿಮ್ಮಾಪುರ, ಎಚ್.ಆಂಜನೇಯ, ಶಾಸಕ ಮುನಿರತ್ನ ಮತ್ತು ಮಾಜಿ ಸಚಿವ ಮಹದೇವಪ್ಪ. ಏಕೆಂದರೆ, ಅಹಿಂದ- 1 ಸಂಘಟನೆಯನ್ನು ಪ್ರಬಲ ವಾಗಿ ಕಟ್ಟಲು ಆರ್ಥಿಕ ಬೆನ್ನೆಲುಬಾಗಿದ್ದ ಇಬ್ಬರು ನಾಯಕರೆಂದರೆ ಸಚಿವ ಸತೀಶ್ ಜಾರಕಿಹೊಳಿ ಮತ್ತು ಜೆ.ಪಿ.ನಾರಾಯಣ ಸ್ವಾಮಿ. ಈಡಿಗ ಸಮುದಾಯದ ಪ್ರಭಾವಿ ನಾಯಕ ಜೆ.ಪಿ.ನಾರಾಯಣ ಸ್ವಾಮಿ ಅವರು ನಿಧನರಾಗಿದ್ದಾರೆ. ಸತೀಶ್ ಜಾರಕಿಹೊಳಿ ಹಿಂದೆ ಇದ್ದಷ್ಟು ನಿಷ್ಠರಾಗಿ ಸಿದ್ದರಾಮಯ್ಯ ಅವರೊಂದಿಗೆ ಇಲ್ಲ. 

ಹೀಗಾಗಿ ಅವರನ್ನು ಸಂ’ಘಟನೆಗೆ ನೆಚ್ಚಿಕೊಳ್ಳುವ ಸ್ಥಿತಿಯಿಲ್ಲ. ಮುಕುಡಪ್ಪ ಅವರು ಈಗ ಸಿದ್ದರಾಮಯ್ಯ ಅವರ ಆಸುಪಾಸು ಇಲ್ಲ. ಎಚ್.ವಿಶ್ವನಾಥ್ ಈಗ ವಿರೋಧಿಯಾಗಿ ನಿಂತಿದ್ದಾರೆ. ಉಗ್ರಪ್ಪ ಇದ್ದರೂ ಹಿಂದಿನಷ್ಟು ಪ್ರಬಲವಾಗಿ ಸಿದ್ದರಾಮಯ್ಯ ಅವರ ತಂಡದಲ್ಲಿ ಗುರುತಿಸಿಕೊಳ್ಳುತ್ತಿಲ್ಲ. ಮಂಚನಹಳ್ಳಿ ಮಹದೇವ ನಿಧನರಾಗಿದ್ದಾರೆ. ಸಿ.ಎಂ.ಇಬ್ರಾಹಿ ಭಾಷಣಗಳಿಗೆ ಮಾತ್ರ ಸೀಮಿತ. ಸಿದ್ದರಾಮಯ್ಯ ಅವರಿಗೆ ಹೊಸ ತಂಡವನ್ನು ರಚಿಸಿಕೊಳ್ಳುವ ಹಾಗೂ ಅದನ್ನು ಹುರುಪುಗೊಳಿಸಿ ಸಂಘಟನೆಯಲ್ಲಿ ತೊಡಗುವಂತೆ ಮಾಡುವ ಅನಿವಾರ್ಯವಿದೆ