ಹಾಸನ (ಸೆ.11): ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುವ ಮೂಲಕ ಜನತೆಯನ್ನು ಕಷ್ಟಕ್ಕೆ ಸಿಲುಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ತೊಲಗಬೇಕು. ಇಲ್ಲದಿದ್ದರೇ ಜನರೆ ಪಾಠ ಕಲಿಸುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಸಂಜೆ ಕಲಾ ಭವನದ ಹೊರ ಆವರಣದಲ್ಲಿ ನಡೆದ ಹಾಸನ ನಗರ ಮತ್ತು ಗ್ರಾಮಾಂತರ ಮಂಡಲದ ಅಧ್ಯಕ್ಷರ ಪದಗ್ರಹಣ ಮತ್ತು ಜನ ಸ್ಪಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಉಡಾಫೆ ಮತ್ತು ಸರ್ವಾಧಿಕಾರಿ ವರ್ತನೆಯಿಂದ ರಾಜ್ಯದಲ್ಲಿ ತೊಘಲಕ್ ದರ್ಬಾರ್ ನಡೆಯುತ್ತಿದೆ. ಯಾವುದೇ ಮಂತ್ರಿಗಳು ರಾಜ್ಯ ಉದ್ದಗಲಕ್ಕೂ ಇರುವ ಸಮಸ್ಯೆಗಳನ್ನು ನೋಡುತ್ತಿಲ್ಲ ಎಂದು ಟೀಕಿಸಿದರು.
ಸರ್ವ ಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ತಮಿಳುನಾಡಿಗೆ ಒಂದೇ ಒಂದು ಹನಿ ನೀರು ಬಿಡುವುದಿಲ್ಲ ಎಂದು ಹೇಳಿದ್ದರು. ನಂತರ ಸುಪ್ರಿಂ ಕೋರ್ಟ್‌ಗೆ 15 ದಿನಗಳವರೆಗೆ ಪ್ರತಿದಿನ 10 ಸಾವಿರ ಕ್ಯೂಸೆಕ್ ನೀರು ಬಿಡುತ್ತೇವೆ ಎಂದು ಪ್ರಮಾಣ ಪತ್ರ ಸಲ್ಲಿಸುತ್ತಾರೆ. ಇದರಿಂದ ಕಾವೇರಿ ಕೊಳ್ಳದ ಜಲಾಶಯಗಳು ಬರಿದಾಗುತ್ತಿವೆ. ಮುಖ್ಯಮಂತ್ರಿ ಮತ್ತು ನೀರಾವರಿ ಕುರಿತು ಅಜ್ಞಾನದಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಟೀಕಿಸಿದರು.
ರೇಲ್ವೆ ಸಚಿವರೊಡನೆ ಮಾತುಕತೆ:
ಹಾಸನ ನಗರದ ಹೈಟೆಕ್ ಬಸ್ ನಿಲ್ದಾಣ ಬಳಿ ಇರುವ ರೈಲು ಮಾರ್ಗಕ್ಕೆ ಮೇಲ್ಸುತುವೆ ನಿರ್ಮಾಣದ ಬಗ್ಗೆ ರೇಲ್ವೆ ಸಚಿವರೊಡನೆ ಮಾತುಕತೆ ನಡೆಸಲಾಗುವುದು. ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಯೋಗಾ ರಮೇಶ್ ಮಾತನಾಡಿ, ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದ 1500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೆಡಿಎಸ್ ಸರ್ಕಾರ ಕೂಡ ಜಿಲ್ಲೆಯ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ಟೀಕಿಸಿದರು.
