ಸಚಿವರಾದ ಡಿ.ಕೆ. ಶಿವಕುಮಾರ್, ಜಯಚಂದ್ರ ಹಾಗೂ ಎಂ.ಬಿ. ಪಾಟೀಲ್ ಅವರು, ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸಿಎಂ ಎದುರೇ ಹೇಳಿದರು.

ಮಳವಳ್ಳಿ /ಮಂಡ್ಯ (ಏ.20): ಸಚಿವರಾದ ಡಿ.ಕೆ. ಶಿವಕುಮಾರ್, ಜಯಚಂದ್ರ ಹಾಗೂ ಎಂ.ಬಿ. ಪಾಟೀಲ್ ಅವರು, ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಸಿಎಂ ಎದುರೇ ಹೇಳಿದರು.

ಸಮಾರಂಭವೊಂದರಲ್ಲಿ ಅವರು ಮಾತನಾಡಿ, ‘ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಜನರ ಬಗ್ಗೆ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರದೃಷ್ಟಿತ್ವದಿಂದ ಕೆಲಸ ಮಾಡುತ್ತಿದ್ದಾರೆ. ಅವರೇ ನಮ್ಮ ನಾಯಕರು ಮತ್ತು ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ’ ಎಂದು ಗುಣಗಾನ ಮಾಡಿದರು.

ಅಧಿಕಾರಕ್ಕೆ ಬರುವುದಿಲ್ಲ:

ಈ ನಡುವೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ನಮ್ಮಪ್ಪನಾಣೆಗೂ 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಈ ಮಾತನ್ನು ಬರೆದಿಟ್ಟುಕೊಳ್ಳಿ. ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯನ್ನು ಮುಂದಿನ 2018 ರ ಚುನಾವಣೆಯ ದಿಕ್ಸೂಚಿ ಅಂತ ನಾವು ಎಲ್ಲೂ ಹೇಳಿರಲಿಲ್ಲ. ಯಡಿಯೂರಪ್ಪ ಸೇರಿ ಅನೇಕ ನಾಯಕರೇ ಹಾಗಂತ ಹೇಳಿದ್ದರು. ಅವರ ಮಾತಿನಂತೆ ಹೇಳುವುದಾದರೆ 2018 ರ ಚುನಾವಣಾ ದಿಕ್ಸೂಚಿ ನಮ್ಮ ಪಕ್ಷದ ಕಡೆಗೇ ಇದೆಯೆಂದಂತಾಯ್ತಲ್ಲಾ? ಇದಕ್ಕೆ ಯಡಿಯೂರಪ್ಪ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಸಾಲ ಮನ್ನಾ ವಿಚಾರವನ್ನು ನನಗಿಂತ ಮುಖ್ಯವಾಗಿ ಕೇಂದ್ರ ಸರ್ಕಾರವನ್ನು ಕೇಳ್ರಯ್ಯ. ಸಾಲಮನ್ನಾಕ್ಕಾಗಿ ಮೋದಿ ಕಚೇರಿ ಮುಂದೆ ಧರಣಿ ಮಾಡಲಿ, ಸಾಥ್ ಕೊಡ್ತೇನೆ’’ ಎಂದು ಸಿದ್ದರಾಮಯ್ಯ ಜನರಿಗೆ ಹೇಳಿದರು.