Asianet Suvarna News Asianet Suvarna News

ಹೊಸ ಬಾಂಬ್ ಸಿಡಿಸಿದ ಸಿದ್ದರಾಮಯ್ಯ : ಮತ್ತೆ ಸಿಎಂ ಆಗ್ತಾರ?

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಇದೀಗ ರಾಜಕೀಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ.  ಅವರು ಮತ್ತೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಕನಸು ಬಿಚ್ಚಿಟ್ಟಿದ್ದಾರೆ. ‘ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ’ ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್‌ವೊಂದನ್ನು ಅವರು ಸಿಡಿಸಿದ್ದಾರೆ.

Siddaramaiah Wants To Be Karnataka CM Again
Author
Bengaluru, First Published Aug 25, 2018, 7:57 AM IST

ಹಾಸನ :  ಈ ಬಾರಿಯ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಹುತೇಕ ತೆರೆಮರೆಗೆ ಸರಿದೇಬಿಟ್ಟರು ಅಂದುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವ ಕನಸು ಬಿಚ್ಚಿಟ್ಟಿದ್ದಾರೆ. ‘ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿ ಆಗುತ್ತೇನೆ’ ಎಂದು ಹೇಳಿದ್ದಾರೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಬಾಂಬ್‌ವೊಂದನ್ನು ಅವರು ಸಿಡಿಸಿದ್ದಾರೆ.

ಹೊಳೆನರಸೀಪುರಪಟ್ಟಣದಲ್ಲಿ ಶುಕ್ರವಾರ ನಡೆದ ದೇವಸ್ಥಾನ ಉದ್ಘಾಟನಾ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗಬಾರದೆಂದು ವಿರೋಧಿ ಶಕ್ತಿಗಳೆಲ್ಲ ಒಂದಾದವು. ಒಂದು ಬಾರಿಯ ಸೋಲಿಗೆ ಹೆದರುವುದಿಲ್ಲ. ರಾಜಕೀಯದಲ್ಲಿ ನಾನು ಯಾವತ್ತೂ ಹೆದರಿಕೊಂಡು ಕೂತಿಲ್ಲ. ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ಬದಲಾವಣೆ ಆಗಲೇಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಜಾತಿ-ಹಣಬಲದ ರಾಜಕಾರಣ: ರಾಜಕಾರಣ ಈಗ ಜಾತಿ ಮತ್ತು ಹಣದ ಮೇಲೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬಾರದು ಎಂದು ನನ್ನ ಎಲ್ಲ ವಿರೋಧಿ ಶಕ್ತಿಗಳು ಒಂದಾದವು. ನಮ್ಮ ಐದು ವರ್ಷದ ಅವಧಿಯಲ್ಲಿ ಬಡವರಿಗೆ, ಎಲ್ಲಾ ಜಾತಿಯ ಬಡವರಿಗೆ ಅಕ್ಕಿ ಕೊಟ್ಟಿದ್ದೇವೆ. ಮಕ್ಕಳಿಗೆ ಹಾಲು ಕೊಟ್ಟಿದ್ದೇವೆ, ಕೃಷಿ ಭಾಗ್ಯ, ಹಸು ಭಾಗ್ಯ ಕಾರ್ಯಕ್ರಮ ಜಾರಿ ತಂದಿದ್ದೇವೆ, ಇದನ್ನೆಲ್ಲ ನಾವು ಜಾತಿ ನೋಡಿ ಕೊಟ್ಟಿದ್ದೇವಾ ಎಂದು ಪ್ರಶ್ನಿಸಿದರು.

ಒಂದು ಬಾರಿ ಸೋತ ಮಾತ್ರಕ್ಕೆ ಎಂದೆಗುಂದಲ್ಲ, ಹೆದರುವುದಿಲ್ಲ. ನಾನು ಯಾವತ್ತೂ ರಾಜಕೀಯದಲ್ಲಿ ಹೆದರಿಕೊಂಡು ಕೂತಿಲ್ಲ. ರಾಜಕೀಯದಲ್ಲಿ ಬದಲಾವಣೆ ಯಾವತ್ತೂ ಇದ್ದದ್ದೆ. ರಾಜಕೀಯ ಯಾವತ್ತೂ ನಿಂತ ನೀರಲ್ಲ. ಹರಿಯುವ ನೀರು. ಚಕ್ರ ಉರುಳಿದರೆ ಮೇಲಿರುವವರು ಕೆಳ ಬರಲೇಬೇಕು, ಅದೇ ರೀತಿ ಕೆಳಗಿರುವವರು ಮೇಲೆ ಹೋಗಲೇಬೇಕು. ಮತ್ತೊಂದು ಬಾರಿ ಮುಖ್ಯಮಂತ್ರಿ ಆಗುತ್ತೇನೆ ಅಂದುಕೊಂಡಿದ್ದೇನೆ. ಜನ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ ಎಂದು ಸಿದ್ದರಾಮಯ್ಯ ಹೇಳಿದರು.

ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರು ಹೇಳುತ್ತಿದ್ದಂತೆ ಅವರಿಗೆ ಅಭಿಮಾನಿಗಳೇ ದೇವರು. ಆದರೆ ರಾಜಕಾರಣಿಗಳಿಗೆ ಮತದಾರರೇ ದೇವರು. ಅವರು ಆಶೀರ್ವದಿಸಿದರೆ ವಿಧಾನಸೌಧ, ಇಲ್ಲದಿದ್ದಲ್ಲಿ ಮನೆ ಕಡೆಗೆ ನಡೆಯಬೇಕು. ಆದರೆ ಒಳ್ಳೆಯ ಕೆಲಸ ಮಾಡುವವರನ್ನು ಜಾತಿ-ಮತ ಮತ್ತು ಹಣದ ಆಮಿಷವನ್ನು ಬಿಟ್ಟು ಆಶೀರ್ವದಿಸಿದಾಗ ಮಾತ್ರವೇ ಒಳ್ಳೆಯ ಸರ್ಕಾರ ಬರಲು ಸಾಧ್ಯ ಎಂದರು.

ಆಗಲಿ ಬಿಡಿ, ಸಂತೋಷ

ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ ಬಗ್ಗೆ ಮಾಧ್ಯಮಗಳಿಂದ ತಿಳಿದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲಿ ಬಿಡಿ, ಸಂತೋಷ.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಎಚ್‌ಡಿಕೆ ಇಳಿಸ್ತೀನಿ ಎಂದಿಲ್ಲ

ಹೌದು, ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕಿತ್ತು. ನಮ್ಮ ಇಚ್ಛೆಯೂ ಅದೇ ಆಗಿತ್ತು. ಆದರೆ ಸಾಧ್ಯವಾಗಲಿಲ್ಲ. ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೆಳಗಿಳಿಸಿ ತಾವು ಮುಖ್ಯಮಂತ್ರಿಯಾಗುವಂತಹ ನಾಯಕರಲ್ಲ ಸಿದ್ದರಾಮಯ್ಯ. ನಾನು-ಅವರು 30 ವರ್ಷದ ಸ್ನೇಹಿತರಾಗಿರುವುದರಿಂದ ಅವರನ್ನು ನಾನು ಚೆನ್ನಾಗಿ ಬಲ್ಲೆ. ಯಾರೂ ಕೂಡ ಗೊಂದಲ ಸೃಷ್ಟಿಸಬಾರದು, ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ನಡೆಯಲು ಬಿಡಬೇಕು.

- ಆರ್‌.ವಿ.ದೇಶಪಾಂಡೆ, ಕಂದಾಯ ಸಚಿವ

ಆಸೆಗಿಂತ ಪಕ್ಷ ಮುಖ್ಯ

ಸಿದ್ದರಾಮಯ್ಯ ಅಪ್ಪಿತಪ್ಪಿಯೂ ಆ ರೀತಿ ಹೇಳುವವರಲ್ಲ. ಕಾರ್ಯಕರ್ತರನ್ನು ಹುರಿದುಂಬಿಸಲು ಹೇಳಿರಬಹುದು. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಅವರು ಮಾತುಕೊಟ್ಟಿದ್ದಾರೆ. ಹಾಗಾಗಿ ನಾವು ಮಾತು ತಪ್ಪುವುದಿಲ್ಲ. ಮುಂದಿನ ಐದು ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಅವರ ಸ್ಥಾನಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಅಥವಾ ನನಗೆ ಸಾವಿರಾರು ಆಸೆ ಇರಬಹುದು. ಆದರೆ, ಅದಕ್ಕಿಂತಲೂ ಪಕ್ಷ ಮುಖ್ಯ.

- ಡಿ.ಕೆ.ಶಿವಕುಮಾರ್‌, ಜಲಸಂಪನ್ಮೂಲ ಸಚಿವ

ಸಿದ್ದು ಜತೆ ನಿಲ್ಲುತ್ತೇನೆ

ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಯುದ್ಧದಲ್ಲಿ ದುಷ್ಟಶಕ್ತಿಗಳಿಗೆ ಯಾವಾಗಲೂ ಆರಂಭದಲ್ಲಿ ಮಾತ್ರ ಗೆಲುವು. ಅಂತಿಮವಾಗಿ ಎಂದಿಗೂ ದುಷ್ಟಶಕ್ತಿಗಳು ಗೆಲ್ಲಲು ಸಾಧ್ಯವೇ ಇಲ್ಲ. ಜನನಾಯಕರಾಗಿರುವ ನೀವು ಮತ್ತೆ ಮುಖ್ಯಮಂತ್ರಿ ಆಗೇ ಆಗುತ್ತೀರಿ. ಇದಕ್ಕಾಗಿ ನಿಮ್ಮ ಜತೆ ಕಲ್ಲಿನಂತೆ ನಿಲ್ಲುತ್ತೇನೆ.

- ಡಾ.ಕೆ.ಸುಧಾಕರ್‌, ಚಿಕ್ಕಬಳ್ಳಾಪುರ ಶಾಸಕ

Follow Us:
Download App:
  • android
  • ios