ಬೆಂಗಳೂರು: ಕಾಂಗ್ರೆಸ್ ಸಚಿವರು ಸೇರಿದಂತೆ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಸಿದ್ದರಾಮಯ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. 

ಪಕ್ಷದ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ವಿವಿಧ ಮುಖಂಡರ ಜೊತೆಗಿನ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರ ಕೆಲಸಗಳು ಆಗುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸೇರಿದಂತೆ ಯಾರೊಬ್ಬರು ಶಾಸಕರ ಸಮಸ್ಯೆಗಳು ಹಾಗೂ ಕೆಲಸಗಳಿಗೆ ಸ್ಪಂದಿಸುತ್ತಿಲ್ಲ. 

ಶಾಸಕರೆಲ್ಲರೂ ಸರ್ಕಾರ ತಮ್ಮನ್ನು ನಡೆಸಿಕೊಳ್ಳುತ್ತಿರುವ ಬಗ್ಗೆ ನನ್ನ ಬಳಿ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿ ಮುಂದುವರೆದರೆ ಏನೂ ಮಾಡಲಾಗದ ಪರಿಸ್ಥಿತಿ ಉಂಟಾಗಬಹುದು ಎಂದು ಎಚ್ಚರಿಸಿದರು ಎನ್ನಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿ ವೇಣು, ಸರ್ಕಾರದಿಂದ ಕಾಂಗ್ರೆಸ್ ಶಾಸಕರಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಲು ಆದ್ಯತೆ ನೀಡಲಾಗುವುದು. ಈ ಬಗ್ಗೆ ದೆಹಲಿಗೆ ಬಂದು ರಾಹುಲ್ ಗಾಂಧಿ ಜತೆ ಚರ್ಚಿಸಲು ಅವಕಾಶ ಮಾಡಿಕೊಡಲಾಗುವುದು. 

ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಸಿದ್ದರಾಮಯ್ಯ ಅವರು ಶಾಸಕರನ್ನು ಪಕ್ಷ ಬಿಟ್ಟು ಹೋಗದಂತೆ ಮನವೊಲಿಸುವುದಾಗಿ ಒಪ್ಪಿದರೆಂದು ಮೂಲಗಳು ಹೇಳಿವೆ.