"ಕರ್ನಾಟಕ ಸರಕಾರವನ್ನ ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರ ಎಂದು ಕರೆಯುತ್ತೀರಲ್ಲ.... ಗುಜರಾತ್'ನಲ್ಲಿ ಗೃಹ ಸಚಿವರಾಗಿದ್ದಾಗ ಜೈಲಿಗೆ ಹೋಗಿಬಂದ ಅಮಿತ್ ಶಾ ಅವರೇ ನಿಮಗೇನಿದೆ ನೈತಿಕತೆ? ಪಕ್ಕದಲ್ಲಿ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿಯವರನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮ ಸರಕಾರವನ್ನು ಭ್ರಷ್ಟ ಸರಕಾರವೆನ್ನುತ್ತೀರಲ್ಲ. ಇವರೆಲ್ಲಾ ಜೈಲಿಗೆ ಹೋಗಿದ್ದು ನೆನಪಿಲ್ವಾ ಅಮಿತ್ ಶಾ ಅವರೇ... ಹಗರಣಮುಕ್ತ, ಭ್ರಷ್ಟಾಚಾರಮುಕ್ತ ಸರಕಾರ ಇದ್ದರೆ ಅದು ಕರ್ನಾಟಕ ಸರಕಾರ, ನನ್ನ ಸರಕಾರ, ಕಾಂಗ್ರೆಸ್ ಸರಕಾರ ಮಾತ್ರ," ಎಂದು ಮುಖ್ಯಮಂತ್ರಿಗಳು ಗುಡುಗಿದರು.

ಬೆಂಗಳೂರು(ಆ. 16): ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬರಬೇಕಿರುವ 10 ಸಾವಿರ ಕೋಟಿ ತೆರಿಗೆ ಪಾಲಿನ ಹಣ ಇನ್ನೂ ಯಾಕೆ ಬಂದಿಲ್ಲ ಎಂದು ಅಮಿತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಕೇಂದ್ರದಿಂದ ಕೊಟ್ಟ ಅನುದಾನವನ್ನು ಕರ್ನಾಟಕ ಸರಕಾರ ಯಾಕೆ ಬಳಸಿಕೊಂಡಿಲ್ಲ ಎಂದು ಅಮಿತ್ ಶಾ ನಿನ್ನೆ ಕೇಳಿದ ಪ್ರಶ್ನೆಗೆ ಇಂದು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ಕೇಂದ್ರ ಕೊಟ್ಟಿರುವ ಹಣವನ್ನು ಖರ್ಚು ಮಾಡಿಲ್ಲ ಅಂತೀರಲ್ಲ ಅಮಿತ್ ಶಾ ಅವರೇ, ನೀವ್ಯಾರೀ ನಮ್ಮ ಲೆಕ್ಕ ಕೇಳೋಕೆ. ನಾವು ಜನರಿಗೆ ಉತ್ತರ ಕೊಡುತ್ತೇವೆ ಹೊರತು ನಿಮಗಲ್ಲ," ಎಂದು ಗುಡುಗಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಬಳಿಕ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಿ ಉಗ್ರ ಭಾಷಣ ಮಾಡಿದರು. ಅಮಿತ್ ಶಾ ಅವರಿಗೆ ಕ್ರಿಮಿನಲ್ ತಂತ್ರಗಾರಿಕೆ ಬರುತ್ತದೆಯೇ ವಿನಃ ನ್ಯಾಯಯುತ ತಂತ್ರಗಾರಿಕೆ ಮಾಡಲು ಬರುವುದಿಲ್ಲ ಎಂದು ಸಿಎಂ ಆರೋಪಿಸಿದರು.

ಯಾಕೆ ಕಡಿಮೆಯಾಯ್ತು ಹೇಳಿ..?
"ದೇಶದ ಆರ್ಥಿಕ ವ್ಯವಸ್ಥೆ ಬಗ್ಗೆ ಅಮಿತ್ ಶಾ ಅವರಿಗೆ ಗೊತ್ತಿಲ್ಲ. ತೆರಿಗೆಗಳು ರಾಜ್ಯಗಳಿಂದ ಕೇಂದ್ರಕ್ಕೆ ಹೋಗುತ್ತವೆ. ಹಣಕಾಸು ಆಯೋಗವು ತೆರಿಗೆಗಳಲ್ಲಿ ಎಷ್ಟು ಪಾಲನ್ನು ಯಾವ್ಯಾವ ರಾಜ್ಯಕ್ಕೆ ಕೊಡಬೇಕು ಎಂದು ತೀರ್ಮಾನಿಸುತ್ತದೆ... ಅದರಂತೆ ರಾಜ್ಯಕ್ಕೆ 1.02 ಲಕ್ಷ ಕೋಟಿ ಬರಬೇಕು. ಆದ್ರೆ ಕೇಂದ್ರ ಕೊಟ್ಟಿರೋದು 92,340 ಕೋಟಿ ಮಾತ್ರ... ಇನ್ನುಳಿದ 10 ಸಾವಿರ ಕೋಟಿ ಇನ್ನೂ ಕೊಟ್ಟಿಲ್ಲ. ಜಗದೀಶ್ ಶೆಟ್ಟರ್, ಅನಂತಕುಮಾರ್, ಯಡಿಯೂರಪ್ಪ ಅವರನ್ನು ಕೇಳುತ್ತೇನೆ.. ಕಳೆದ 3 ವರ್ಷದಲ್ಲಿ ಕೇಂದ್ರದಿಂದ ಬರಬೇಕಾದ ಹಣದಲ್ಲಿ 10 ಸಾವಿರ ಕೋಟಿ ಯಾಕೆ ಕಡಿಮೆಯಾಗಿದೆ...? ಹೇಳಿ ಅಮಿತ್ ಶಾ ಅವರೇ... ಈ ಅಮಿತ್ ಶಾ ಅವರಿಗೆ ಕ್ರಿಮಿನಲ್ ತಂತ್ರಗಾರಿಕೆ ಬರುತ್ತದೆ ವಿನಃ ನ್ಯಾಯಯುತ ತಂತ್ರಗಾರಿಕೆ ಮಾಡಲು ಬರುವುದಿಲ್ಲ..." ಎಂದು ಸಿದ್ದರಾಮಯ್ಯ ಆರ್ಭಟಿಸಿದರು.

ಪಕ್ಕದಲ್ಲಿ ಭ್ರಷ್ಟರನ್ನಿಟ್ಟುಕೊಂಡು...
"ಕರ್ನಾಟಕ ಸರಕಾರವನ್ನ ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರ ಎಂದು ಕರೆಯುತ್ತೀರಲ್ಲ.... ಗುಜರಾತ್'ನಲ್ಲಿ ಗೃಹ ಸಚಿವರಾಗಿದ್ದಾಗ ಜೈಲಿಗೆ ಹೋಗಿಬಂದ ಅಮಿತ್ ಶಾ ಅವರೇ ನಿಮಗೇನಿದೆ ನೈತಿಕತೆ? ಪಕ್ಕದಲ್ಲಿ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿಯವರನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮ ಸರಕಾರವನ್ನು ಭ್ರಷ್ಟ ಸರಕಾರವೆನ್ನುತ್ತೀರಲ್ಲ. ಇವರೆಲ್ಲಾ ಜೈಲಿಗೆ ಹೋಗಿದ್ದು ನೆನಪಿಲ್ವಾ ಅಮಿತ್ ಶಾ ಅವರೇ... ಹಗರಣಮುಕ್ತ, ಭ್ರಷ್ಟಾಚಾರಮುಕ್ತ ಸರಕಾರ ಇದ್ದರೆ ಅದು ಕರ್ನಾಟಕ ಸರಕಾರ, ನನ್ನ ಸರಕಾರ, ಕಾಂಗ್ರೆಸ್ ಸರಕಾರ ಮಾತ್ರ," ಎಂದು ಮುಖ್ಯಮಂತ್ರಿಗಳು ಗುಡುಗಿದರು.

ಮೂರು ಗುಂಪು...
ಕರ್ನಾಟಕದ ಬಿಜೆಪಿಯಲ್ಲಿ ಮೂರು ಗುಂಪುಗಳಿವೆಯೆಂದು ಸಿದ್ದರಾಮಯ್ಯ ಈ ವೇಳೆ ಲೇವಡಿ ಮಾಡಿದರು. ಬಿಜೆಪಿಯಲ್ಲಿ ಯಡಿಯೂರಪ್ಪ-ಶೋಭಾರದ್ದೊಂದು ಗುಂಪು, ಅನಂತಕುಮಾರ್'ರದ್ದೊಂದು ಗುಂಪು ಮತ್ತು ಈಶ್ವರಪ್ಪರದ್ದೊಂದು ಗುಂಪು ಇದೆ ಎಂದವರು ಅಣಕಿಸಿದರು.

ಬಿಜೆಪಿಯವರ ಬಳಿ ನೋಟು ಎಣಿಸುವ ಯಂತ್ರಗಳು....
ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿಯದ್ದು ಇಬ್ಬಗೆ ನೀತಿ ಎಂದು ಆರೋಪಿಸಿದ ಸಿದ್ದರಾಮಯ್ಯ, ಅದಕ್ಕೆ ಒಂದು ಉದಾಹರಣೆಯನ್ನೂ ಮೆಲುಕು ಹಾಕಿದರು.

"ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ವಿಧಾನಪರಿಷತ್'ನಲ್ಲಿ ಉಗ್ರಪ್ಪನವರು ಬರಗಾಲದ ಹಿನ್ನೆಲೆಯಲ್ಲಿ ಸೊಸೈಟಿಗಳಲ್ಲಿ ರೈತರು ಮಾಡಿರುವ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದರು. ನಮ್ಮ ಸರಕಾರ ನೋಟುಗಳನ್ನ ಪ್ರಿಂಟ್ ಮಾಡುವ ಮೆಷೀನ್ ಇಟ್ಟುಕೊಂಡಿಲ್ಲ ಅಂತಂದಿದ್ರು ಯಡಿಯೂರಪ್ಪ. ಅವರ ಬಳಿ ನೋಟು ಪ್ರಿಂಟ್ ಮಾಡುವ ಮೆಷೀನ್ ಅಲ್ಲ, ನೋಟು ಎಣಿಸುವ ಮೆಷೀನ್ ಇತ್ತು ಅಂತ ಕಾಣುತ್ತೆ. ಪಾಪ ಈಶ್ವರಪ್ಪ ಇದನ್ನ ಒಪ್ಪಿಕೊಂಡಿದ್ದೂ ಉಂಟು..." ಎಂದು ಸಿದ್ದರಾಮಯ್ಯ ಬಿಎಸ್'ವೈರನ್ನು ತರಾಟೆಗೆ ತೆಗೆದುಕೊಂಡರು.

"...ನಮ್ ಮನೆಯಲ್ಲಿ ನೋಟ್ ಪ್ರಿಂಟ್ ಮಾಡೋ ಮೆಷೀನ್ ಇಲ್ಲ ಅಂತ ಹೇಳಿದ್ದ ಇದೇ ಯಡಿಯೂರಪ್ಪ ಈಗ ಸಾಲ ಮನ್ನಾ ಮಾಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀನಿ ಅಂತ ಹೇಳ್ತಾರಲ್ಲ... ಇವತ್ತು ನಾನು ಕೇಳ್ತೀನಿ..ನೀವು ಡೋಂಗಿ ರಾಜಕೀಯ ಮಾಡ್ತೀರಲ್ವೇ ಯಡಿಯೂರಪ್ಪನವರೇ..? ನೀವು ಢೋಂಗಿ ರಾಜಕಾರಣಿ. ನಿಮಗೆ ನಿಜವಾಗಿಯೂ ರೈತರ ಬಗ್ಗೆ ಕಳಕಳಿ ಇದ್ದರೆ, ನೈತಿಕತೆ ಇದ್ದರೆ ಸಂಸತ್ತಿಗೆ ಹೋಗಿ ಮುತ್ತಿಗೆ ಹಾಕಿ. ನೀವು 17 ಸಂಸದರಿದ್ದೀರಿ. ಅಲ್ಲಿಗೆ ಹೋಗಿ ಮುತ್ತಿಗೆ ಹಾಕಿ," ಎಂದು ಬಿಜೆಪಿ ಮುಖಂಡರಿಗೆ ಸಿಎಂ ಸಲಹೆ ನೀಡಿದರು.

ವಚನ ಭ್ರಷ್ಟ ಮೋದಿ ಸರಕಾರ:
ಇದೇ ವೇಳೆ, ಮೋದಿ ಸರಕಾರವನ್ನು ಸಿಎಂ ವಚನ ಭ್ರಷ್ಟ ಸರಕಾರವೆಂದು ಬಣ್ಣಿಸಿದರು. "ಮೋದಿ ಸರಕಾರ ವಚನ ಭ್ರಷ್ಟ ಸರಕಾರ, ನಮ್ಮದು ವಚನಬದ್ಧ ಸರಕಾರ" ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಉದ್ಧಾರಕರು..:
ತಮ್ಮ ಸರಕಾರದಿಂದಾಗಿ ಬೆಂಗಳೂರು ನಗರ ಒಂದಷ್ಟು ಅಭಿವೃದ್ಧಿ ಕಾಣುತ್ತಿದೆ ಎಂದು ಸಿದ್ದರಾಮಯ್ಯ ಈ ವೇಳೆ ಹೇಳಿಕೊಂಡರು.
* ಬೆಂಗಳೂರಿಗೆ 7,300 ಕೋಟಿ ರೂ ಕೊಟ್ಟಿರುವುದು ನಮ್ಮ ಸರಕಾರ
* ಸ್ಲಂಗಳಲ್ಲಿ ವಾಸಿಸುವವರಿಗೆ 10 ಸಾವಿರ ಲೀಟರ್ ನೀರನ್ನು ಉಚಿತವಾಗಿ ಕೊಡಲು ತೀರ್ಮಾನಿಸಿದ್ದು ಕಾಂಗ್ರೆಸ್ ಸರಕಾರ
* ಎಸ್ಸಿ-ಎಸ್ಟಿ ಕಾಲೊನಿಗಳಿಗೆ ಪುಕ್ಕಟೆಯಾಗಿ ಕಾವೇರಿ ನೀರು ಕೊಡಲು ನಿರ್ಧರಿಸಿದ್ದೇವೆ. ಕೆಲವೇ ದಿನಗಳಲ್ಲಿ ಅದು ಜಾರಿಯಾಗುತ್ತದೆ.
* ಬೆಂಗಳೂರು ನಗರವನ್ನು ಬಿಜೆಪಿ ಸರಕಾರ ಗಾರ್ಬೇಜ್ ಸಿಟಿಯನ್ನಾಗಿಸಿತ್ತು. ಕೋಟಿಗಟ್ಟಲೆ ಹಣ ಸಾಲ ಮಾಡಿ ಆಸ್ತಿಪಾಸ್ತಿ ಒತ್ತೆ ಇಡಲಾಗಿತ್ತು. ಈಗ ಅವುಗಳಿಂದ ನಗರವನ್ನು ಪಾರು ಮಾಡುತ್ತಿದ್ದೇವೆ.