ಎಸ್‌.ಗಿರೀಶ್‌ಬಾಬು

ಬೆಂಗಳೂರು [ಅ.04]:  ಕಾಂಗ್ರೆಸ್‌ ಪಕ್ಷದಲ್ಲಿ ಆರಂಭವಾಗಿರುವ ಆಂತರಿಕ ತುಮುಲದ ಪರಿಣಾಮ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರತಿಪಕ್ಷ ಸ್ಥಾನದಿಂದ ವಂಚಿತರಾದರೆ ಆಗ ಉಪ ಚುನಾವಣೆಗೆ ಹೊಸ ಅಭ್ಯರ್ಥಿಗಳ ಪಟ್ಟಿತಯಾರಿಸುವ ಅನಿವಾರ್ಯತೆ ಪಕ್ಷಕ್ಕೆ ನಿರ್ಮಾಣವಾಗುವ ಸಾಧ್ಯತೆಯಿದೆ.

ಏಕೆಂದರೆ, ಟಿಕೆಟ್‌ ಪಡೆಯುವ ಸಂಭಾವ್ಯರ ಪಟ್ಟಿಯಲ್ಲಿ ಆರಕ್ಕೂ ಹೆಚ್ಚು ಮಂದಿ ಸಿದ್ದರಾಮಯ್ಯ ಅವರ ಪಕ್ಕಾ ಬೆಂಬಲಿಗರಾಗಿದ್ದು, ಅವರಿಗೆ ಟಿಕೆಟ್‌ ದೊರೆಯುವ ಸಾಧ್ಯತೆಯೂ ಹೆಚ್ಚಿದೆ. ಈ ಸಂಭಾವ್ಯರ ಪೈಕಿ ಕೆಲವರು ಉಪ ಚುನಾವಣೆಯ ನೇತೃತ್ವ ವನ್ನು ಸಿದ್ದರಾಮಯ್ಯ ವಹಿಸದಿದ್ದರೆ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ನಾಯಕತ್ವಕ್ಕೆ ಈಗಾಗಲೇ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರತಿಪಕ್ಷ ಸ್ಥಾನ ದೊರೆಯದಿದ್ದರೆ ಸಿದ್ದರಾಮಯ್ಯ ಚುನಾವಣೆಯ ನೇತೃತ್ವ ವಹಿಸದೆ ತಟಸ್ಥರಾಗಿ ಉಳಿಯುವುದರಿಂದ ಅವರ ಬೆಂಬಲಿಗರು ಉಪ ಚುನಾವಣೆಯಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಉಪ ಚುನಾವಣೆ ನಡೆಯಲಿರುವ 15 ಕ್ಷೇತ್ರಗಳ ಪೈಕಿ ಹೊಸಕೋಟೆ (ಪದ್ಮಾವತಿ ಬೈರತಿ ಸುರೇಶ್‌), ಹುಣಸೂರು (ಎಚ್‌.ಪಿ.ಮಂಜುನಾಥ್‌), ಮಹಾಲಕ್ಷ್ಮೇ ಲೇಔಟ್‌ (ಶಿವರಾಜ್‌), ಗೋಕಾಕ್‌ (ಲಖನ್‌ ಜಾರಕಿಹೊಳಿ) ಮತ್ತು ಕೆ.ಆರ್‌.ಪೇಟೆ (ಕೆ.ಬಿ.ಚಂದ್ರಶೇಖರ್‌ ಮತ್ತು ಹಿಕ್ಕೇರಿ ಸುರೇಶ್‌) ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಅವರ ಆಪ್ತರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಈ ಪೈಕಿ ಬಹುತೇಕರಿಗೆ ಟಿಕೆಟ್‌ ದೊರೆಯುವ ಸಂಭವವೂ ಇದೆ. ಈ ಪೈಕಿ ಕೆಲವರು ಪಕ್ಷದಲ್ಲಿ ಸಿದ್ದರಾಮಯ್ಯ ಪ್ರಭಾವ ಕುಗ್ಗಿದರೆ ಚುನಾವಣೆಯಿಂದ ಹಿಂದಕ್ಕೆ ಸರಿಯುವುದು ಖಚಿತ ಎನ್ನಲಾಗುತ್ತಿದೆ.

ಇದಷ್ಟೇ ಅಲ್ಲ, ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನದ ವಿರುದ್ಧ ಬೆಂಬಲಿಗ ಶಾಸಕರು ಬಂಡೇಳುವ ಲಕ್ಷಣಗಳಿದ್ದು, ಇದು ಅ.9ರಂದು ನಡೆಯಲಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೋಚರವಾಗುವ ಸಾಧ್ಯತೆಯಿದೆ. ಏಕೆಂದರೆ, ಸುಮಾರು 20ಕ್ಕೂ ಹೆಚ್ಚು ಶಾಸಕರು ಅ.9ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಾವ ಚುನಾವಣೆಗೂ ಆಸ್ಪದ ನೀಡದೆ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ಘೋಷಿಸುವಂತೆ ಆಗ್ರಹಿಸಲಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಯಾಗಿ ವಿರೋಧಿ ಬಣವು ಎಚ್‌.ಕೆ.ಪಾಟೀಲ್‌ ಅಥವಾ ಡಾ.ಜಿ.ಪರಮೇಶ್ವರ್‌ ಅವರ ಹೆಸರನ್ನು ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪ್ರಸ್ತಾಪಿಸಲಿದೆ. ಹೀಗಾಗಿ ಈ ಬಾರಿಯ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾರಿ ಕೋಲಾಹಲವನ್ನು ನಿರೀಕ್ಷಿಸಬಹುದು.

ಪ್ರತಿಪಕ್ಷ ನಾಯಕನ ಘೋಷಣೆಯೇ ಇಲ್ಲ?:  ಸಿದ್ದರಾಮಯ್ಯ ಹಾಗೂ ವಿರೋಧಿ ಬಣ ಹರಾಕಿರಿಗೆ ಸಜ್ಜಾಗಿ ನಿಂತಿರುವ ಪರಿಣಾಮ ಕಾಂಗ್ರೆಸ್‌ ಹೈಕಮಾಂಡ್‌ ಸದ್ಯಕ್ಕೆ ಪ್ರತಿಪಕ್ಷ ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳದಿರುವ ಸಂಭವವೂ ಇದೆ.

ವಿಧಾನಮಂಡಲ ಅಧಿವೇಶನ ಅ.10ರಿಂದ ಆರಂಭವಾಗಲಿದ್ದು, ಈ ವೇಳೆಗೆ ಪ್ರತಿಪಕ್ಷ ನಾಯಕನ ಹೆಸರನ್ನು ಘೋಷಣೆ ಮಾಡಬೇಕು ಎಂಬುದು ಎರಡೂ ಬಣಗಳ ಆಗ್ರಹ. ಆದರೆ, ಯಾರನ್ನೇ ಪ್ರತಿಪಕ್ಷ ನಾಯಕರನ್ನಾಗಿ ಘೋಷಿಸಿದರೂ ಮತ್ತೊಂದು ಬಣ ಬಂಡೇಳುವ ಸಾಧ್ಯತೆಯಿದೆ. ಈ ಎರಡು ಬಣಗಳ ನಡುವೆ ಮಾತುಕತೆ ನಡೆಸಿ ಹೊಂದಾಣಿಕೆ ಮೂಡಿಸಲು ಕಾಲಾವಕಾಶದ ಅಗತ್ಯವಿದೆ. ಅಲ್ಲದೆ, ಶೀಘ್ರವೇ ನಡೆಯಲಿರುವ ಉತ್ತರ ಭಾರತದ ರಾಜ್ಯಗಳ ಚುನಾವಣೆ ಸಿದ್ಧತೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ವ್ಯಸ್ತವಾಗಿದೆ.

ಹೀಗಾಗಿ ವಿಧಾನಮಂಡಲ ಅಧಿವೇಶನದೊಳಗೆ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಯಾರ ಹೆಸರನ್ನೂ ಘೋಷಣೆ ಮಾಡದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆಗ ಶಾಸಕಾಂಗ ಪಕ್ಷದ ನಾಯಕರಾಗಿಯೇ ಸಿದ್ದರಾಮಯ್ಯ ಅಧಿವೇಶನದಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಆದರೆ, ಇದಕ್ಕೆ ಸಿದ್ದರಾಮಯ್ಯ ಒಪ್ಪುತ್ತಿಲ್ಲ. ಪ್ರತಿಪಕ್ಷ ಸ್ಥಾನಕ್ಕೆ ಯಾರ ಹೆಸರನ್ನಾದರೂ ಘೋಷಣೆ ಮಾಡಬೇಕು. ಹೀಗೆ ಮಾಡದ ಪಕ್ಷದಲ್ಲಿ ತಾವು ಶಾಸಕನಾಗಿ ಮಾತ್ರ ಅಧಿವೇಶನದಲ್ಲಿ ಪಾಲ್ಗೊಳ್ಳುವುದಾಗಿ ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಹುಲ್‌ ರಾಜೀನಾಮೆ ಬೆನ್ನಲ್ಲೇ ಸಿದ್ದು ಬಲ ಕುಗ್ಗಿಸುವ ಯತ್ನ?

ಕಾಂಗ್ರೆಸ್‌ ಹೈಕಮಾಂಡ್‌ನ ಉನ್ನತ ಸ್ಥಾನಕ್ಕೆ ರಾಹುಲ್‌ ಗಾಂಧಿ ರಾಜೀನಾಮೆ ಕೊಟ್ಟು ಆ ಸ್ಥಾನವನ್ನು ಸೋನಿಯಾ ಗಾಂಧಿ ಅಲಂಕರಿಸಿದ ದಿನದಿಂದಲೇ ಸಿದ್ದರಾಮಯ್ಯ ಅವರು ರಾಜ್ಯ ಕಾಂಗ್ರೆಸ್‌ ಮೇಲೆ ಹೊಂದಿರುವ ಹಿಡಿತ ಕೊನೆಗಾಣಿಸುವ ಪ್ರಯತ್ನ ಆರಂಭವಾಯಿತು ಎನ್ನಲಾಗುತ್ತಿದೆ.

ನಂಬಲರ್ಹ ಮೂಲಗಳ ಪ್ರಕಾರ ಈ ಕಾರ್ಯದಲ್ಲಿ ಕಾಂಗ್ರೆಸ್‌ನ ಪಂಚ ಪ್ರಭಾವಿ ನಾಯಕರು ಒಗ್ಗೂಡಿ ಸಂಘಟಿತ ಪ್ರಯತ್ನ ನಡೆಸಿದ್ದಾರೆ. ಇ.ಡಿ. ದಾಳಿಗೆ ಸಿಲುಕುವವರೆಗೂ ಡಿ.ಕೆ.ಶಿವಕುಮಾರ್‌ ಈ ದಿಸೆಯಲ್ಲಿ ಸಕ್ರಿಯವಾಗಿದ್ದರು ಎನ್ನಲಾಗುತ್ತಿದೆ. ಇವರಲ್ಲದೆ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಹೈಕಮಾಂಡ್‌ನಲ್ಲಿ ಪ್ರಭಾವಿಯಾದ ಬಿ.ಕೆ.ಹರಿಪ್ರಸಾದ್‌, ಮಾಜಿ ಸಂಸದ ಕೆ.ಎಚ್‌.ಮುನಿಯಪ್ಪ ಅವರು ಸಕ್ರಿಯವಾಗಿ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕುತೂಹಲಕಾರಿ ಸಂಗತಿಯೆಂದರೆ, ಈ ನಾಯಕರ ಬೆಂಬಲಕ್ಕೆ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪರೋಕ್ಷ ಬೆಂಬಲವೂ ದೊರಕಿದ್ದು, ಸಿದ್ದರಾಮಯ್ಯ ಅವರ ಪ್ರಭಾವ ಕುಗ್ಗಿಸುವ ಪ್ರಯತ್ನಕ್ಕೆ ಆನೆ ಬಲ ನೀಡಿದೆ. ಹೀಗಾಗಿಯೇ ಸತತ ಕೋರಿಕೆಯ ನಂತರವೂ ಹೈಕಮಾಂಡ್‌ ಪ್ರತಿಪಕ್ಷ ನಾಯಕ ಸ್ಥಾನ ಘೋಷಣೆಯನ್ನು ಮುಂದೂಡುತ್ತಾ ಬಂದಿದೆ ಎಂದು ಮೂಲಗಳು ತಿಳಿಸಿವೆ.

‘ಕಾವೇರಿ’ ನಿವಾಸ ತೊರೆಯಲು ಸಿದ್ದು ಸಿದ್ಧತೆ

ಪ್ರತಿಪಕ್ಷ ನಾಯಕ ಸ್ಥಾನದ ಘೋಷಣೆ ವಿಳಂಬವಾಗುವ ಸಂಭವನೀಯತೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಿಂದ ತಮ್ಮ ನಿವಾಸವನ್ನು ವಿಜಯನಗರದ ಸ್ವಂತ ಮನೆಗೆ ಸ್ಥಳಾಂತರಿಸಲು ಸಿದ್ಧತೆ ಆರಂಭಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ಕಾವೇರಿ ನಿವಾಸಕ್ಕೆ ಆಗಮಿಸಲಿರುವ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಕಾವೇರಿ ನಿವಾಸ ತೆರವುಗೊಳಿಸಬೇಕಿದೆ. ಪ್ರತಿಪಕ್ಷ ನಾಯಕ ಹುದ್ದೆ ಇದ್ದಲ್ಲಿ ಸರ್ಕಾರಿ ಬಂಗಲೆ ದೊರೆಯುತ್ತಿತ್ತು. ಆದರೆ, ಈ ಹುದ್ದೆ ಮರೀಚಿಕೆಯಾಗಿದೆ. ಹೀಗಾಗಿ ಅವರು ವಿಜಯನಗರದ ತಮ್ಮ ಸ್ವಂತ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.