ಮೈಸೂರು :  ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಪತನ ಆಗಲಿದೆ ಎಂದು ಬಿಜೆಪಿಯವರು ನೀಡಿದ್ದ ಎಲ್ಲಾ ಡೆಡ್‌ಲೈನ್‌ಗಳು ಡೆಡ್‌ ಆಗಿವೆ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.  ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ಪತನ ಆಗಲ್ಲ. ಸರ್ಕಾರವನ್ನು ಕೆಡವಲು ಸಾಧ್ಯವೂ ಇಲ್ಲ. ಈ ವಿಚಾರದಲ್ಲಿ ಬಿಜೆಪಿಯವರು ನೀಡಿದ್ದ ಎಲ್ಲಾ ಡೆಡ್‌ಲೈನ್‌ಗಳು ಮುಗಿದು ‘ಡೆಡ್‌ಲೈನ್‌ ಡೆಡ್‌ ಆಗಿದೆ’ ಎಂದು ವ್ಯಂಗ್ಯವಾಡಿದರು.

ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ, ಬೀಳುತ್ತೆ ಎಂದು ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಯಾವುದೇ ಕಾರಣಕ್ಕೂ ಮೈತ್ರಿ ಸರ್ಕಾರ ಬೀಳುವುದಿಲ್ಲ. ಒಪ್ಪಂದದಂತೆ 5 ವರ್ಷ ಅಧಿಕಾರ ಪೂರೈಸಲಿದೆ. ಬಿಜೆಪಿಯವರು ಮೊದಲು ಪ್ರತಿಷ್ಠೆ, ಒಣ ಜಂಭ ಬಿಡಬೇಕು. ವೋಟುಗಳೇನು ಬಿ.ಎಸ್‌. ಯಡಿಯೂರಪ್ಪರ ಜೇಬಿನಲ್ಲಿ ಇಲ್ಲ. ಈ ರೀತಿಯ ಭ್ರಮೆ ಇದ್ದರೆ ಮೊದಲು ಅವರು ಅದನ್ನು ಬಿಡಬೇಕು ಎಂದು ಕುಟುಕಿದರು.

ಬಿಜೆಪಿಗೆ ಸೋಲು:  ಉಪ ಚುನಾವಣೆ ನಡೆಯುತ್ತಿರುವ ಐದೂ ಕ್ಷೇತ್ರಗಳಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಗಳು ಗೆಲ್ಲುತ್ತಾರೆ. ಮಂಡ್ಯ, ರಾಮನಗರ, ಶಿವಮೊಗ್ಗದಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಜಯಗಳಿಲಿದ್ದಾರೆ. ಅದೇ ರೀತಿ ಜಮಖಂಡಿ ಹಾಗೂ ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ನಾನು ಐದು ಕ್ಷೇತ್ರದಲ್ಲೂ ಚುನಾವಣಾ ಪ್ರಚಾರಕ್ಕೆ ಹೋಗುತ್ತೇನೆ ಎಂದರು.

ಅ.22 ಮತ್ತು 23ರಂದು ಬಳ್ಳಾರಿಯಿಂದ ಚುನಾವಣಾ ಪ್ರಚಾರ ಶುರು ಮಾಡುತ್ತೇನೆ. ಅ.24ಕ್ಕೆ ಮಂಡ್ಯದಲ್ಲಿ ಪ್ರಚಾರ ಮಾಡುತ್ತೇನೆ. ಅ.25 ರಂದು ಶಿವಮೊಗ್ಗ, ಅ.26 ಮತ್ತು 27ರಂದು ಜಮಖಂಡಿಯಲ್ಲಿ, ಅ.28 ಮತ್ತು 29 ಮತ್ತೆ ಬಳ್ಳಾರಿ, ಅ.30 ರಂದು ಶಿವಮೊಗ್ಗ, ಅ.31 ಮತ್ತು ನ.1 ರಂದು ಜಮಖಂಡಿಯಲ್ಲಿ ಪ್ರಚಾರ ಮಾಡುತ್ತೇನೆ. ಉಪ ಚುನಾವಣೆಯಲ್ಲಿ ಗೆಲುವು ನಮ್ಮದಾಗಿದ್ದು, ಬಿಜೆಪಿ ಸೋಲು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶೋಭಾ ವಿರುದ್ಧ ಏಕವಚನದಲ್ಲಿ ಟೀಕೆ

ತಮ್ಮನ್ನು ‘ಹಲ್ಲುಕಿತ್ತ ಹಾವು’ ಎಂದು ಟೀಕಿಸಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಸಿದ್ದರಾಮಯ್ಯ ಏಕವಚನದಲ್ಲಿ ಟೀಕಿಸಿದ ಪ್ರಸಂಗ ನಡೆಯಿತು. ‘ಅವಳ ಹಲ್ಲೇನು ಬಿಗಿಯಾಗಿದೆಯಾ? ನನ್ನ ಬಗ್ಗೆ ಮಾತನಾಡಲು ಅವಳಿಗೆ ನೈತಿಕತೆ ಇದೆಯಾ? ಬೆಂಗಳೂರಿನ ರಾಜಾಜಿನಗರದಲ್ಲಿ ಚುನಾವಣೆಗೆ ಸ್ಪರ್ಧಿಸಿ ಸೋತಿರಲಿಲ್ಲವೇ? ನನ್ನ ಬಗ್ಗೆ ಮಾತನಾಡಲು ಅವಳು ಯಾರು? ಮೊದಲು ಹಲ್ಲು ಬಿಗಿ ಹಿಡಿದು ಮಾತನಾಡಲಿ’ ಎಂದು ಕಿಡಿಕಾರಿದರು.

ದಸರಾ ಬಗ್ಗೆ ನಾನ್‌ ಮಾತನಾಡಲ್ಲ :  ಮೈಸೂರು ದಸರಾ ಮಹೋತ್ಸವ ಮುಗಿದಿದೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ಅದು ಮುಗಿದ ಅಧ್ಯಾಯ. ಮುಂದಿನ 2019ರ ದಸರಾ ಮಹೋತ್ಸವ ಬರಲಿ ನೋಡೋಣ. ನುಂಗಿದ ತುತ್ತು ಯಾವತ್ತೂ ರುಚಿ ಹತ್ತಲ್ಲ, ಅದರ ಬಗ್ಗೆ ನಾನು ಮಾತನಾಡಲ್ಲ ಎಂದು ಇದೇ ವೇಳೆ ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.