ಮೈಸೂರು[ಆ.26]: ಬಿಜೆಪಿ ಹೈಕಮಾಂಡ್‌ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ‘ಒಲ್ಲದ ಶಿಶು’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಜತೆಗೆ, ರಾಜ್ಯದ ಬಿಜೆಪಿ ಸರ್ಕಾರ ಹೈಕಮಾಂಡ್‌ ನಿಯಂತ್ರಣದಲ್ಲಿದ್ದು, ಇದೊಂದು ಅನೈತಿಕ ಸರ್ಕಾರ ಎಂದು ಕಿಡಿಕಾರಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಒಂದು ತಿಂಗಳಿನಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ದೆಹಲಿ- ಬೆಂಗಳೂರು ಮಧ್ಯೆ ಓಡಾಡುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಭೇಟಿಯೂ ಮಾಡುತ್ತಿಲ್ಲ. ಸರ್ಕಾರ ನಡೆಸಲು ಸ್ವಾತಂತ್ರ್ಯವನ್ನೂ ನೀಡುತ್ತಿಲ್ಲ. ಬಿಜೆಪಿಗೆ ಸರ್ವಾಧಿಕಾರಿ ಆಡಳಿತದ ಮೇಲೆ ನಂಬಿಕೆ ಜಾಸ್ತಿ. ಯಡಿಯೂರಪ್ಪ ಅವರ ಆಡಳಿತವನ್ನು ಬಿಜೆಪಿ ಹೈಕಮಾಂಡ್‌ ತನ್ನ ಹಿಡಿತದಲ್ಲಿರಿಸಿಕೊಂಡಿದೆ. ಸಂಪುಟ ರಚನೆಯಾಗಿ ಹಲವು ದಿನಗಳಾದರೂ ಈವರೆಗೆ ಸಚಿವರಿಗೆ ಖಾತೆಯೇ ಹಂಚಿಕೆ ಆಗಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಇಷ್ಟೊಂದು ನೆರೆ ಇದ್ದರೂ ಕೇಂದ್ರದಿಂದ ಒಂದೇ ಒಂದು ರುಪಾಯಿ ತರಲು ಯಡಿಯೂರಪ್ಪ ಅವರಿಂದ ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಅವರು ಹೈಕಮಾಂಡ್‌ಗೆ ಬೇಕಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಒಂದು ತಿಂಗಳಿಂದ ಸರ್ಕಾರವೇ ಇಲ್ಲದಂಥ ಪರಿಸ್ಥಿತಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಆರೋಪಿಸಿದರು.

ವರುಣನ ಅಬ್ಬರ: ಕರ್ನಾಟಕದಲ್ಲಿ ಪ್ರವಾಹ, ಅಪಾರ ನಷ್ಟ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಿಂಬಾಗಿಲಿನಿಂದ ಕುದುರೆ ವ್ಯಾಪಾರ ಮಾಡಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಯಡಿಯೂರಪ್ಪ ಅವರಿಗೂ ಈಗ ಅತೃಪ್ತ ಶಾಸಕರು ಧಮ್ಕಿ ಹಾಕುತ್ತಿದ್ದಾರೆ. ಬಿಜೆಪಿಯಲ್ಲೂ ಅತೃಪ್ತರಿದ್ದಾರೆ. ಹೀಗಾಗಿ, ಖಾತೆ ಹಂಚಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಶಾಸಕರ ಅನರ್ಹತೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ಅನರ್ಹ ಶಾಸಕರು ಅತಂತ್ರರಾಗಲಿ ಅಂತಾನೇ ನಾವು ಅವರನ್ನು ಅನರ್ಹ ಮಾಡಿದ್ದೇವೆ. ಅವರು ಅತಂತ್ರರಾಗಬೇಕು ಅನ್ನೋದೇ ನಮ್ಮ ಆಶಯ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.