ಬಿಜೆಪಿಯಿಂದ 100 ಕೋಟಿ ಆಮಿಷ ..!

Siddaramaiah Slams BJP Top  Leaders
Highlights

ಕಪ್ಪು ಹಣ ನಿಷೇಧ ಮಾಡುತ್ತೇವೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಶಾಸಕರಿಗೆ ಅದೇ ಹಣ ಕೊಟ್ಟು ಖರೀದಿಗೆ ಹೊರಟಿದ್ದರು. ನಮ್ಮ ಶಾಸಕರಿಗೆ ಬಿಜೆಪಿಯು .50, .100 ಕೋಟಿ ಹಾಗೂ ಸಚಿವ ಸ್ಥಾನ ಆಮಿಷವೊಡ್ಡಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾದಾಮಿ :  ಕಪ್ಪು ಹಣ ನಿಷೇಧ ಮಾಡುತ್ತೇವೆ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಶಾಸಕರಿಗೆ ಅದೇ ಹಣ ಕೊಟ್ಟು ಖರೀದಿಗೆ ಹೊರಟಿದ್ದರು. ನಮ್ಮ ಶಾಸಕರಿಗೆ ಬಿಜೆಪಿಯು .50, .100 ಕೋಟಿ ಹಾಗೂ ಸಚಿವ ಸ್ಥಾನ ಆಮಿಷವೊಡ್ಡಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿ, ಇಷ್ಟೆಲ್ಲ ಆದರೂ ನಮ್ಮ ಶಾಸಕರು ಅವರ ಜತೆ ಹೋಗಲಿಲ್ಲ, ಅವರ ಆಮಿಷಗಳಿಗೆ ಬಲಿಯಾಗಲಿಲ್ಲ. ಇದಕ್ಕಾಗಿ ನಮ್ಮ ಶಾಸಕರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ತಿಳಿಸಿದರು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ನಮಗೆ ಶೇ.38 ಮತ ಬಂದಿವೆ, ಬಿಜೆಪಿಗೆ ಬಂದದ್ದು ಶೇ.36 ಮತ. ನಮಗೆ ಓಟು ಬಂತು ಸೀಟು ಬರಲಿಲ್ಲ. ಬಿಜೆಪಿಯವರಿಗೆ ಸೀಟು ಬಂತು ಓಟು ಬರಲಿಲ್ಲ. ಚುನಾವಣೆ ವೇಳೆ ನಾವು ಹಾಗೂ ಜೆಡಿಎಸ್‌ ಸಾಕಷ್ಟುಆರೋಪ-ಪ್ರತ್ಯಾರೋಪ ಮಾಡಿದ್ದೆವು. ಆದರೆ, ಬಹುಮತ ಸಿಗದ ಹಿನ್ನೆಲೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಅನಿವಾರ್ಯವಾಗಿ ಜೆಡಿಎಸ್‌ ಜತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ರಚಿಸಬೇಕಾಯಿತು ಎಂದು ಮೈತ್ರಿ ಸರ್ಕಾರವನ್ನು ಸಮರ್ಥಿಸಿಕೊಂಡರು. ಇದೇ ವೇಳೆ, ಪೂರ್ಣ ಬಹುಮತವಿಲ್ಲದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರ ವಿರುದ್ಧವೂ ಸಿದ್ದರಾಮಯ್ಯ ಕಿಡಿಕಾರಿದರು. ಈ ರೀತಿ ಮಾಡಿದ್ದಕ್ಕಾಗಿ ಬಿಎಸ್‌ವೈ ಅವರಿಗೆ ನಾಚಿಕೆಯಾಗಬೇಕು ಎಂದರು.

ಫೀನಿಕ್ಸ್‌ನಂತೆ ಮೇಲೆ ಬರುತ್ತೇವೆ:

ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ತಗ್ಗುತ್ತಿದೆ. ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ ಎಂದು ಮನೆಯಲ್ಲಿ ಕುಳಿತುಕೊಳ್ಳುವ ಅವಶ್ಯಕತೆ ಇಲ್ಲ. ಮತ್ತೆ ಫೀನಿಕ್ಸ್‌ನಂತೆ ಮೇಲೆದ್ದು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮ ಒಡೆದಿಲ್ಲ:

ನನಗೆ ಧರ್ಮ ಒಡೆಯುವುದು ಗೊತ್ತಿಲ್ಲ. ನಾನು ಸಮಾಜವನ್ನು ಒಂದುಗೂಡಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಅದೇ ರೀತಿ ನನಗೆ ರಾಜಕೀಯದಲ್ಲಿ ಸೋಲು-ಗೆಲುವಿನ ಭಯವಿಲ್ಲ. ಮನುಷ್ಯತ್ವಕ್ಕೆ, ಸ್ನೇಹಕ್ಕೆ ತಲೆಬಾಗುತ್ತೇನೆಯೇ ಹೊರತು, ರಾಜಕೀಯಕ್ಕೆ ಹೆದರುವುದಿಲ್ಲ ಎಂದರು. ಜತೆಗೆ, ಚಾಮುಂಡೇಶ್ವರಿಯಲ್ಲಿ ಮುಖಂಡರ ಷÜಡ್ಯಂತ್ರಕ್ಕೆ ಮತದಾರರು ಬಲಿಯಾದರು. ಆದರೆ ಬಾದಾಮಿ ಕ್ಷೇತ್ರದ ಜನ ಯಾವುದನ್ನೂ ಲೆಕ್ಕಿಸದೆ ನನ್ನನ್ನು ಗೆಲ್ಲಿಸಿದರು. ಇದಕ್ಕಾಗಿ ನಾನು ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಹಸಿವು ಮುಕ್ತ ಕರ್ನಾಟಕಕ್ಕೆ ಜನ ಆಶೀರ್ವದಿಸಲಿಲ್ಲ : ಹಸಿವು ಮುಕ್ತ, ಗುಡಿಸಲು ಮುಕ್ತ ಕರ್ನಾಟಕ ಮಾಡಬೇಕೆಂದು ಹೊರಟಿದ್ದೆವು. ಆದರೆ ಜನ ಆಶೀರ್ವಾದ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಅಖಂಡ ಕರ್ನಾಟಕದ ಅಭಿವೃದ್ಧಿಗಾಗಿ ನೀರಾವರಿ, ಉದ್ಯೋಗ, ಶಿಕ್ಷಣ, ಕೈಗಾರಿಕೆಗೆಂದು ದೃಢ ಹೆಜ್ಜೆ ಇಟ್ಟಿದ್ದೆ. ಪ್ರಾದೇಶಿಕ ಅಸಮಾನತೆಗೆ ತೊಡೆದು ಹಾಕಲೂ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೆ. ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದ್ದರೂ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿಲ್ಲ. ಇಷ್ಟೆಲ್ಲ ಅಭಿವೃದ್ಧಿ ಕಾರ್ಯ ಮಾಡಿದರೂ ಜನ ಕೈಹಿಡಿಯಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು. ಜತೆಗೆ, ಕಾಂಗ್ರೆಸ್‌ ಸೋಲಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಪಪ್ರಚಾರವೇ ಕಾರಣ ಎಂದು ಇದೇ ವೇಳೆ ಕಿಡಿಕಾರಿದರು.

loader