ಬೆಂಗಳೂರು[ಸೆ.14]: ಕಳೆದ ಎರಡು ದಿನಗಳಿಂದ ಹೈಕಮಾಂಡ್‌ನ ಹಲವು ಪ್ರಮುಖ ನಾಯಕರನ್ನು ಭೇಟಿಯಾಗಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರ ಭೇಟಿಗೆ ಅವಕಾಶ ದೊರೆತಿಲ್ಲ.

ಈ ಬಗ್ಗೆ ಹಲವು ವ್ಯಾಖ್ಯಾನ ಕೇಳಿ ಬರುತ್ತಿದ್ದರೂ ಕಾಂಗ್ರೆಸ್‌ ಮುಖ್ಯಮಂತ್ರಿಗಳ ಸಭೆಯಲ್ಲಿ ಸೋನಿಯಾ ಭಾಗಿಯಾಗಿದ್ದ ಕಾರಣ ಭೇಟಿಗೆ ಅವಕಾಶ ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ.

ವಾಸ್ತವವಾಗಿ ಸಿದ್ದರಾಮಯ್ಯ ಅವರು ಶುಕ್ರವಾರ ಭೇಟಿಗೆ ಅವಕಾಶ ನೀಡುವಂತೆ ಸೋನಿಯಾ ಗಾಂಧಿ ಅವರ ಕಚೇರಿಯನ್ನು ಕೇಳಿದ್ದರು. ಆದರೆ, ಶುಕ್ರವಾರ ಸೋನಿಯಾ ಗಾಂಧಿ ಅವರು ಕಾಂಗ್ರೆಸ್‌ ಮುಖ್ಯಮಂತ್ರಿಗಳ ಸಭೆಯಲ್ಲಿ ವ್ಯಸ್ತರಾಗಿದ್ದರಿಂದ ಶನಿವಾರ ಬೆಳಗ್ಗೆ 11ಕ್ಕೆ ಭೇಟಿಯನ್ನು ನಿಗದಿಪಡಿಸಿ ಸಿದ್ದರಾಮಯ್ಯ ಅವರಿಗೆ ಸೋನಿಯಾ ಗಾಂಧಿ ಕಚೇರಿ ಮಾಹಿತಿ ನೀಡಿತ್ತು.

ಆದರೆ, ಶನಿವಾರ ಬೆಂಗಳೂರಿನಲ್ಲಿ ಕೆಪಿಸಿಸಿಯು 17 ಮಂದಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ಶೀಘ್ರವೇ ಬರಲಿರುವ ಉಪ ಚುನಾವಣೆ ಸಿದ್ಧತೆ ಸಭೆಯನ್ನು ಆಯೋಜಿಸಿದ್ದರಿಂದ ಮತ್ತು ಈ ಸಭೆಗೆ ಆರು ಜಿಲ್ಲೆಗಳಿಂದ ನಾಯಕರು ಪಾಲ್ಗೊಳ್ಳಲು ಆಗಮಿಸುವುದರಿಂದ ಶನಿವಾರ ಸಿದ್ದರಾಮಯ್ಯ ಬೆಂಗಳೂರಿಗೆ ಆಗಮಿಸಬೇಕಿತ್ತು. ಈ ಮಾಹಿತಿಯನ್ನು ಸಿದ್ದರಾಮಯ್ಯಅವರು ಸೋನಿಯಾ ಗಾಂಧಿ ಕಚೇರಿಗೆ ತಿಳಿಸಿದ ನಂತರ ಮುಂದಿನ ವಾರ ಮತ್ತೆ ಸಮಯ ನೀಡುವುದಾಗಿ ಆ ಕಡೆಯಿಂದ ಮಾಹಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಬೆಂಗಳೂರಿಗೆ ಹಿಂತಿರುಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ.

ಮತ್ತೊಂದು ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಅವರು ಸಮಯ ಕೋರಿದ್ದರೂ ಸೋನಿಯಾ ಗಾಂಧಿ ಕಚೇರಿ ತಕ್ಷಣಕ್ಕೆ ಭೇಟಿಗೆ ಅವಕಾಶ ನೀಡಿಲ್ಲ. ವಾಸ್ತವವಾಗಿ ಸಿದ್ದರಾಮಯ್ಯ ಅವರು ಉಭಯ ಸದನಗಳ ಪ್ರತಿಪಕ್ಷ ನಾಯಕರ ಹುದ್ದೆಗಳ ಹೆಸರು ಘೋಷಿಸುವಂತೆ ಕೋರಲು ಸೋನಿಯಾ ಭೇಟಿ ಮಾಡಲು ಮುಂದಾಗಿದ್ದರು. ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ತಮ್ಮನ್ನು ಮುಂದುವರೆಸುವಂತೆ ಹಾಗೂ ವಿಧಾನ ಪರಿಷತ್‌ ಪ್ರತಿಪಕ್ಷ ಸ್ಥಾನಕ್ಕೆ ಸಿ.ಎಂ. ಇಬ್ರಾಹಿಂ ಅವರ ಹೆಸರನ್ನು ಪರಿಗಣಿಸುವಂತೆ ಕೋರುವುದು ಅವರ ಬಯಕೆಯಾಗಿತ್ತು. ವಿಧಾನಸಭೆ ಪ್ರತಿಪಕ್ಷ ನಾಯಕನ ವಿಚಾರದಲ್ಲಿ ಹೈಕಮಾಂಡ್‌ಗೆ ಗೊಂದಲವಿಲ್ಲದಿದ್ದರೂ ವಿಧಾನಪರಿಷತ್‌ ಪ್ರತಿಪಕ್ಷ ಸ್ಥಾನವನ್ನು ಸಿದ್ದರಾಮಯ್ಯ ಸೂಚಿಸುತ್ತಿರುವ ಸಿ.ಎಂ. ಇಬ್ರಾಹಿಂ ಅವರಿಗೆ ನೀಡುವ ಮನಸ್ಸು ಹೈಕಮಾಂಡ್‌ಗೆ ಇಲ್ಲ.

ಅಲ್ಲದೆ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪ್ರಮುಖ ಕಾಂಗ್ರೆಸ್‌ ನಾಯಕರು ಈ ಹುದ್ದೆಗೆ ಎಸ್‌.ಆರ್‌. ಪಾಟೀಲ್‌ ಅವರ ಹೆಸರು ಸೂಚಿಸುತ್ತಿದ್ದಾರೆ. ಈ ಬಗ್ಗೆ ಗೊಂದಲವಿರುವುದರಿಂದ ಎಲ್ಲ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ ಅನಂತರ ತೀರ್ಮಾನ ಕೈಗೊಳ್ಳಲು ಹೈಕಮಾಂಡ್‌ ನಿರ್ಧರಿಸಿದೆ. ಹೀಗಾಗಿ ಸೋನಿಯಾ ಗಾಂಧಿ ಹಾಗೂ ಸಿದ್ದರಾಮಯ್ಯ ಭೇಟಿ ನಡೆದಿಲ್ಲ ಎಂದು ಹೇಳಲಾಗುತ್ತಿದೆ.