ಈಗಲೂ ನನಗೆ ಈ ವಿಚಾರ ದಿಗ್ಭ್ರಮೆ ಉಂಟು ಮಾಡುತ್ತದೆ : ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ವಿಧಾನಸಭಾ ಚುನಾವಣಾ ದಿನಗಳನ್ನು ನೆನೆಸಿಕೊಂಡಿದ್ದಾರೆ. ಹಿಂದಿನ ಯಾವ ಸರ್ಕಾರಗಳೂ ಮಾಡದಷ್ಟು ಕೆಲಸ ಮಾಡಿದ್ದರೂ ಸಹ ಹೇಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೂಲು ಕಂಡೆ ಎನ್ನುವುದು ಈಗಲೂ ಅಚ್ಚರಿ ಉಂಟು ಮಾಡುತ್ತಿದೆ ಎಂದಿದ್ದಾರೆ.
ದಾವಣಗೆರೆ/ಹರಪನಹಳ್ಳಿ: ಜನತೆ ಯಾವುದಕ್ಕೆ ವೋಟು ಕೊಡ್ತಾರೆ ಅಂತಾನೇ ಅರ್ಥವಾಗುತ್ತಿಲ್ಲ. ನನ್ನನ್ನೇ ಚಾಮುಂಡಿ ಕ್ಷೇತ್ರದಲ್ಲಿ ಸೋಲಿಸಿದ್ರು. ನಾನು ಸೋಲುತ್ತೇನೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬಹುಶಃ ನನಗೆ ಅನಿಸುತ್ತೆ ರಾಜ್ಯದ ಇತಿಹಾಸದಲ್ಲಿ ನಮ್ಮ ಸರ್ಕಾರದಷ್ಟುಅಭಿವೃದ್ಧಿ ಕೆಲಸ ಬೇರಾವುದೇ ಸರ್ಕಾರ ಮಾಡಿರಲಿಲ್ಲ. ಸಿಎಂ ಆಗಿ ಅಷ್ಟೇ ಅಲ್ಲ, 1994ರಲ್ಲಿ ಹಣಕಾಸು ಸಚಿವನಾಗಿ, 13 ಸಲ ಬಜೆಟ್ ಮಂಡಿಸಿ, 5 ಮುಖ್ಯಮಂತ್ರಿಗಳಡಿ ಕೆಲಸ ಮಾಡಿದವನು ನಾನು. ರಾಮಕೃಷ್ಣ ಹೆಗಡೆ, ಎಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ, ಜೆ.ಎಚ್.ಪಟೇಲ್, ಧರಂ ಸಿಂಗ್ ಸರ್ಕಾರದಲ್ಲಿ ಕೆಲಸ ಮಾಡಿದ್ದೆ ಎಂದು ತಿಳಿಸಿದರು.
ಅಷ್ಟೊಂದು ಬಜೆಟ್ ಮಂಡಿಸಿದ್ದ ನಾನು ಹಣಕಾಸು ಸಚಿವನಾಗಿದ್ದಾಗ ಕೊಡಲಾಗದಷ್ಟುಅನುದಾನ ರಾಜ್ಯದ ಮುಖ್ಯಮಂತ್ರಿಯಾಗಿ ಕೊಟ್ಟಿದ್ದೇನೆ. ಕಳೆದ ಚುನಾವಣೆಯಲ್ಲಿ ಚಾಮುಂಡಿ ಕ್ಷೇತ್ರದಲ್ಲಿ ಸೋಲುತ್ತೇನೆಂದು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ. ರಿಸಲ್ಟ್ ದಿನ ನೋಡ್ತೀನಿ ದಿಗ್ಭ್ರಮೆ ಆಗುತ್ತಿದೆ. ಚಾಮುಂಡಿಯಲ್ಲಿ ನನ್ನ ಎದುರಾಳಿ, ವಿರೋಧಿ ನೋಡ್ತಿದ್ದಾನೆ. ಆ ಸೋಲನ್ನು ನಂಬುವುದಕ್ಕೂ ಆಗದಂತಾಗಿತ್ತು. ಇಷ್ಟೆಲ್ಲಾ ಕೆಲಸ ಮಾಡಿದ್ದೀನಿ, ಹೇಗೆ ಸೋತೆ ಅಂತಾ ಈಗಲೂ ದಿಗ್ಭ್ರಮೆಯಾಗುತ್ತದೆ ಎಂದು ಅವರು ಹೇಳಿದರು.
ಅದೃಷ್ಟಕ್ಕೆ ಬಾದಾಮಿ ಕ್ಷೇತ್ರ ನನ್ನ ಕೈ ಹಿಡಿಯಿತು. ಚುನಾವಣೆ ಮುಂಚೆಗೆ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ ಫಲಿತಾಂಶ ಬಂದಾಗಲೇ ದಿಗ್ಭ್ರಮೆಯಾಯಿತು. ಹರಪನಹಳ್ಳಿಯಲ್ಲಿ ಎಂ.ಪಿ.ರವೀಂದ್ರ ಸೋಲನುಭವಿಸಿದ್ದು ಹೀಗೆ ಇದೆಲ್ಲವನ್ನೂ ನೋಡಿದರೆ ಜನತೆ ಯಾವುದಕ್ಕೆ ವೋಟು ಕೊಡ್ತಾರೆ ಅಂತಾನೇ ಅರ್ಥವಾಗುತ್ತಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.
ಹರಪನಹಳ್ಳಿ ಪಟ್ಟಣದಲ್ಲಿ ಮಂಗಳವಾರ ಮಾಜಿ ಶಾಸಕ ಎಂ.ಪಿ.ರವೀಂದ್ರರವರಿಗೆ ನುಡಿ-ನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಕ್ಷೇತ್ರದ ಜನತೆ ಒಮ್ಮೆ ಏಕೆ ಹೀಗಾಯಿತೆಂದು ತಮಗೆ ತಾವೇ ಪ್ರಶ್ನೆ ಹಾಕಿಕೊಂಡು, ಹೀಗೆ ಆಗದಂತೆ ನೋಡಿಕೊಳ್ಳಿ. ಅದೇ ನೀವುಗಳು ಈ ಕ್ಷೇತ್ರಕ್ಕೆ ಸಾಕಷ್ಟುಕೊಡುಗೆ ನೀಡಿದ ದಿವಂಗತ ಎಂ.ಪಿ.ರವೀಂದ್ರಗೆ ಸಲ್ಲಿಸುವಂತಹ ಗೌರವವಾಗಿರುತ್ತದೆ ಎಂದು ಮನವಿ ಮಾಡಿದರು.