ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಳೆಯ ನೆನಪೊಂದನ್ನು ಇದೀಗ ಬಿಚ್ಚಿಟ್ಟಿದ್ದಾರೆ. ಕಳೆದ 8 ವರ್ಷದ ಹಿಂದೆ ಪ್ರಚಾರಕ್ಕೆಹೋದಾಗ ರೆಡ್ಡಿ ಸಹೋದರರು ತಮ್ಮ ಮೇಲೆ ರೌಡಿಗಳನ್ನು ಬಿಟ್ಟಿದ್ದರು ಎಂದು ಹೇಳಿದ್ದಾರೆ. 

ಬಾಗಲಕೋಟೆ :  ಬಳ್ಳಾರಿಗೆ ಪ್ರಚಾರಕ್ಕೆ ಹೋಗಿದ್ದ ಸಿದ್ದರಾಮಯ್ಯ ವಿರುದ್ಧ ರೆಡ್ಡಿ ಸಹೋದರರು ರೌಡಿಗಳನ್ನು ಬಿಟ್ಟಿದ್ದರಂತೆ, ಚುನಾವಣಾ ಪ್ರಚಾರಕ್ಕೆ ಶಾಮಿಯಾನ ಹಾಕಲೂ ಅವಕಾಶ ನೀಡಲಿಲ್ಲವಂತೆ, ಲಾರಿಯಲ್ಲಿ ಮಣ್ಣು ತಂದು ಮಾರ್ಗ ಮಧ್ಯೆ ಸುರಿಯುತ್ತಿದ್ದರಂತೆ!

ಈ ವಿಚಾರವನ್ನು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಬಹಿರಂಗಪಡಿಸಿದ್ದಾರೆ. ಜಮಖಂಡಿಯಲ್ಲಿ ಇತ್ತೀಚೆಗೆ ನಡೆದ ಕುರುಬ ಸಮಾಜದ ಸಭೆಯಲ್ಲಿ ಮಾತನಾಡುವಾಗ ರೆಡ್ಡಿ ಸಹೋದರರ ವಿರುದ್ಧ ತಮಗಿರುವ ಆಕ್ರೋಶ, ಬಳ್ಳಾರಿಗೆ ಪ್ರಚಾರಕ್ಕೆ ಹೋದಾಗಲೆಲ್ಲ ವೀರಾವೇಶದ ಭಾಷಣ ಮಾಡುವ ಹಿಂದಿನ ಕಾರಣವನ್ನು ಸಿದ್ದರಾಮಯ್ಯಬಿಚ್ಚಿಟ್ಟಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ರೆಡ್ಡಿ ಸಹೋದರರು ತಮ್ಮ ವಿರುದ್ಧ ನಡೆಸಿದ ಅಟಾಟೋಪಗಳನ್ನು ಒಂದೊಂದಾಗಿ ಬಹಿರಂಗಪಡಿಸಿದ ಸಿದ್ದರಾಮಯ್ಯ, ಆಗಲೇ ನಾನು ಇವರ ಸೊಕ್ಕಡಗಿಸಬೇಕೆಂದು ನಿರ್ಧರಿಸಿದ್ದೆ ಎಂದು ಹೇಳಿದ್ದಾರೆ.

ಸಿದ್ದು ಹೇಳಿದ್ದೇನು?: ಜನಾರ್ದನ ರೆಡ್ಡಿ ಸಹೋದರರಿಗೆ ಹೆದರಿ ಬಳ್ಳಾ​ರಿ​ಯಲ್ಲಿ ನಮಗೆ ಸಭೆ​ಗ​ಳನ್ನು ಮಾಡುವು​ದಿ​ರಲಿ, ಶಾಮಿಯಾನ ಹಾಕುವು​ದಕ್ಕೂ ಅಲ್ಲಿನ ಜಿಲ್ಲಾಧಿಕಾರಿ ಜಾಗ ಕೊಟ್ಟಿ​ರ​ಲಿಲ್ಲ. ಜನ ಕೂಡ ಹೆದರಿ ನಮ್ಮ ಸಭೆಗಳಿಗೆ ಬರುತ್ತಿ​ರ​ಲಿಲ್ಲ. ಅಲ್ಲಿನ ರಾಮಗಢ ಬಳಿ ಗಣಿಗಾರಿಕೆ ನಡೆಯುವ ಜಾಗ​ದಲ್ಲಿ ಭಾಷಣಕ್ಕೆಂದು ಹೋದಾಗ ರೌಡಿಗಳನ್ನು ಛೂಬಿಟ್ಟಿದ್ದರು. ನನ್ನ ಕಾರಿನ ಹಿಂದೆ ಬಂದು ಘೋಷಣೆ ಕೂಗಿ ಬೆದರಿಸಿದ್ದರು. ಲಾರಿ ತಂದು ನಾವು ಹೋಗುವ ಮಾರ್ಗದಲ್ಲೆಲ್ಲ ಮಣ್ಣು ಸುರಿದಿದ್ದರು. ಆಗಲೇ ನಾನು ರೆಡ್ಡಿ​ಗಳ ಸೊಕ್ಕು ಅಡಗಿಸಬೇಕೆಂದು ತೀರ್ಮಾನಿಸಿದೆ.

ಇದರ ಪರಿ​ಣಾ​ಮ​ವಾ​ಗಿಯೇ ವಿಧಾನಸಭೆಯಲ್ಲಿ ತೊಡೆ ತಟ್ಟಿಯಡಿಯೂರಪ್ಪ ಅವರ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ಮಾಡಿದೆ. ನಾನು ಹೀಗೆ ಮಾಡ​ದಿ​ದ್ದರೆ ರೆಡ್ಡಿ ಜೈಲಿಗೆ ಹೋಗುತ್ತಿರಲಿಲ್ಲ. ಪಾದ​ಯಾತ್ರೆ ಮಾಡಿದ ನಂತ​ರವೇ ರೆಡ್ಡಿ ಜೈಲಿಗೆ ಹೋದರು. ಅಲ್ಲಿ​ಯ​ವ​ರೆಗೂ ಬಳ್ಳಾರಿಯೇ ಒಂದು ದೇಶ ಆಗಿತ್ತು. ಅಲ್ಲಿ ಯಾವ ಕಾನೂನುಗಳು ಇರುತ್ತಿರಲಿಲ್ಲ ಎಂದು ಸಿದ್ದರಾಮಯ್ಯ ಎಂಟು ವರ್ಷ​ಗಳ ಹಿಂದೆ ಬಳ್ಳಾರಿಯಲ್ಲಿ ರೆಡ್ಡಿ ಸಹೋದರರಿಂದ ಅನುಭವಿಸಿದ್ದ ನೋವನ್ನು, ಅದರ ವಿರುದ್ಧ ನಡೆಸಿದ ಹೋರಾಟವನ್ನು ಬಹಿರಂಗಪಡಿಸಿದರು.