ಬೆಂಗಳೂರು (ಆ.23]: ರಾಜ್ಯದಲ್ಲಿ ಆಡಳಿತ ನಡೆಸಿದ ಜೆಡಿಎಸ್‌-ಕಾಂಗ್ರೆಸ್‌ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೊಣೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ತಾವು ಪ್ರತಿಪಕ್ಷ ನಾಯಕರಾಗಬಹುದು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು ಎಂಬ ಕಾರಣಕ್ಕಾಗಿ ಕುತಂತ್ರ ರಾಜಕಾರಣ ನಡೆಸಿದ್ದಾರೆ ಎಂದೂ ಗೌಡರು ಹರಿಹಾಯ್ದಿದ್ದಾರೆ.

ಇದುವರೆಗೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾಂಗ್ರೆಸ್‌ ನಾಯಕರು ಕಾರಣ ಎಂದು ಪರೋಕ್ಷವಾಗಿ ಕಿಡಿಕಾರುತ್ತಿದ್ದ ದೇವೇಗೌಡ ಅವರು, ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಚಿತ್ರದುರ್ಗ, ದಾವಣಗೆರೆ ಜಿಲ್ಲಾ ಕಾರ್ಯಕರ್ತರ ಸಭೆಯಲ್ಲಿ ನೇರವಾಗಿ ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿ ತಮ್ಮ ಮನದಾಳದ ಆಕ್ರೋಶವನ್ನು ಹೊರಹಾಕಿದರು ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಮತ್ತು ಎಚ್‌.ಡಿ.ಕುಮಾರಸ್ವಾಮಿ ನಡುವೆ ಮೊದಲಿನಿಂದಲೂ ತಿಕ್ಕಾಟ ಇತ್ತು. ಸಿದ್ದರಾಮಯ್ಯ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯದಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿತು. ಸರ್ಕಾರ ಪತನವಾಗಲು ಇದೇ ಪ್ರಮುಖ ಕಾರಣವಾಗಿದೆ. ಕಾಂಗ್ರೆಸ್‌ನ ಅಧಿನಾಯಕರಾದ ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿ ಸೇರಿದಂತೆ ಕೆಲವು ದೆಹಲಿಯ ಪ್ರಮುಖರು ಮಾತ್ರ ಕುಮಾರಸ್ವಾಮಿ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದಿದ್ದರು ಎಂದು ಅವರು ತಿಳಿಸಿದರು ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರ ರಚನೆ ಮಾಡಲು ಸಿದ್ದರಾಮಯ್ಯಗೆ ಇಷ್ಟಇರಲಿಲ್ಲ. ಈ ವಿಷಯವನ್ನು ಅವರ ಆಪ್ತರೇ ತಿಳಿಸಿದ್ದಾರೆ. ಕುಮಾರಸ್ವಾಮಿಗೆ ನಿತ್ಯ ಕಿರಿಕಿರಿ ಇತ್ತು. ಸರ್ಕಾರ ಪತನವಾಗುವ ಮೂಲಕ ಈಗ ನಿರಾಳರಾಗಿದ್ದಾರೆ. ಐದು ವರ್ಷ ಸರ್ಕಾರ ನಡೆಸುವ ಮಾತನ್ನು ಕಾಂಗ್ರೆಸ್‌ ಹೈಕಮಾಂಡ್‌ ನೀಡಿತ್ತು. ಯಾರಾರ‍ಯರು ಮಾತು ಕೊಟ್ಟಿದ್ದರು ಎಂಬುದು ಅವರಿಗೇನು ಗೊತ್ತು? ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ತಾವು ಪ್ರತಿಪಕ್ಷ ನಾಯಕರಾಗಬಹುದು ಎಂಬುದು ಅವರ ಲೆಕ್ಕಾಚಾರ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಬಾರದು ಎಂಬ ಕಾರಣಕ್ಕಾಗಿ ಕುತಂತ್ರ ರಾಜಕಾರಣ ನಡೆಸಿದ್ದಾರೆ ಎಂಬುದಾಗಿ ಕಿಡಿಕಾರಿದರು ಎಂದು ಮೂಲಗಳು ಹೇಳಿವೆ.

ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ನೇತೃತ್ವದ ಆಡಳಿತಾವಧಿಯಲ್ಲಿ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ ಎಂಬ ಕೋಪ ಸಿದ್ದರಾಮಯ್ಯ ಮನದಲ್ಲಿ ಇದೆ. ಅಲ್ಲದೇ, ಲೋಕಸಭೆ ಚುನಾವಣೆಯಲ್ಲಿ ತುಮಕೂರಲ್ಲಿ ನನ್ನನ್ನು ಸೋಲಿಸಲು ಮತ್ತು ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಅವರನ್ನು ಮಣಿಸಲು ಷಡ್ಯಂತ್ರ ನಡೆಸಿರುವುದು ಗೊತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು ಎನ್ನಲಾಗಿದೆ.

ಕತ್ತಿ-ಎಚ್‌ಡಿಕೆ ಭೇಟಿ ಸುಳ್ಳು - ಗೌಡ:  ಸಭೆಗೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಶಾಸಕ ಉಮೇಶ್‌ ಕತ್ತಿ ಮತ್ತು ಪಕ್ಷದ ನಾಯಕ ಕುಮಾರಸ್ವಾಮಿ ಭೇಟಿಯನ್ನು ತಳ್ಳಿ ಹಾಕಿದರು. ಇದೆಲ್ಲಾ ಊಹಾಪೋಹ ಸುದ್ದಿ. ಇದಕ್ಕೆಲ್ಲಾ ಪ್ರತಿಕ್ರಿಯಿಸಬೇಕಾದ ಅಗತ್ಯ ಇಲ್ಲ. ನಮ್ಮದು ಸಣ್ಣ ಪಕ್ಷ. ಅದನ್ನು ಕಟ್ಟಿಕೊಂಡು ಹೋಗುತ್ತೇವೆ. ನಮ್ಮನ್ನು ಬಿಟ್ಟುಬಿಡಿ ಎಂದು ಹೇಳಿದರು.