ಬೆಂಗಳೂರು: ರೈತರ ಸಾಲ ಮನ್ನಾಗೆ ಮುಂದಾಗಿರುವ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ನಡೆಯ ಬಗ್ಗೆಯೂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಲ ಮನ್ನಾ ಬದಲು ಎಲ್ಲಾ ರೈತರಿಗೆ ಸಹಾಯ ವಾಗುವ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದಾರೆ.

ಧರ್ಮಸ್ಥಳ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಭಾನುವಾರ ತಮ್ಮನ್ನು ಭೇಟಿ ಮಾಡಿದ ಶಾಸಕರ ಬಳಿ ಈ ರೀತಿ ಅಭಿ ಪ್ರಾಯ ಹಂಚಿ ಕೊಂಡಿರುವ ವೀಡಿಯೋ ಭಾನುವಾರ ಬಿಡುಗಡೆಯಾಗಿದ್ದು, ಅದು ವಿವಾದವನ್ನೂ ಹುಟ್ಟು ಹಾಕಿದೆ. ಸಾಲ ಮನ್ನಾ ಬದಲು ಬೇರೆ  ರೀತಿಯಲ್ಲಿ ರೈತರಿಗೆ ಸಹಾಯ ಮಾಡಬೇಕು. 

ನಾವು ಒಣ ಬೇಸಾಯ ಮಾಡುವ ಎಲ್ಲಾ ರೈತರಿಗೂ 10 ಸಾವಿರ ರು. ನೀಡುವು ದಾಗಿ ಘೋಷಿಸಿದ್ದೇವೆ. ಇಂತಹ ಕಾರ್ಯಕ್ರಮಗಳಿಂದ ಎಲ್ಲಾ ರೈತರಿಗೂ ಅನುಕೂಲವಾಗುತ್ತದೆ ಎಂದು ಶಾಸಕ ರೊಂದಿಗೆ ಅಭಿಪ್ರಾಯ ಹಂಚಿಕೊಂಡರು. 

ಈ ವೇಳೆ ಶಾಸಕ ಎಸ್.ಟಿ. ಸೋಮಶೇಖರ್, ಹಳ್ಳಿಗಳಲ್ಲಿ ಯಾರೇ ಆತ್ಮಹತ್ಯೆ ಮಾಡಿಕೊಂಡರೂ ಸಾಲದಿಂದ ಆತ್ಮಹತ್ಯೆ  ಮಾಡಿಕೊಂಡ ಎಂಬುದಾಗಿ ಹೇಳಿ ಎನ್ನುತ್ತಾರೆ ಎಂದು ವಿವಾದಾತ್ಮಕವಾಗಿ ಮಾತನಾಡಿರುವುದು ವೀಡಿಯೋದಲ್ಲಿದೆ. ಇದಕ್ಕೆ ಸಮ್ಮತಿ ವ್ಯಕ್ತಪಡಿಸಿ ಮುಂದುವರೆದ ಸಿದ್ದರಾಮಯ್ಯ, ನಾನು ಕೂಡ ಹಳ್ಳಿಯಿಂದ ಬಂದವನು. ನಮ್ಮೂರಲ್ಲಿ ಸಾಲ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡವನು ಒಬ್ಬನೂ ಇಲ್ಲ ಎಂದು ಹೇಳಿದರು.